ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಹೆಸರಿನಲ್ಲಿ 2019ರಲ್ಲಿ ಲಾ ಟ್ರೋಬ್ ಯ್ಯೂನಿವರ್ಸಿಟಿ ಅಲ್ಲಿ ಪಿಹೆಚ್‌ಡಿ ವಿದ್ಯಾರ್ಥಿ ವೇತನ (La Trobe University) ಪ್ರಕ್ರಿಯೆ ಆರಂಭಿಸಲಾಗಿತ್ತು. ಕೋವಿಡ್ ಹಿನ್ನೆಲೆ ಸ್ಥಗಿತಗೊಂಡಿದ್ದ ವಿದ್ಯಾರ್ಥಿ ವೇತನ ಪ್ರಕ್ರಿಯೆ ಈಗ ಪುನಾರಂಭವಾಗಿದೆ. ವಿದ್ಯಾರ್ಥಿ ವೇತನಕ್ಕಾಗಿ ನೋಂದಣಿಗೆ ಅವಕಾಶ ಆಗಸ್ಟ್ 18 ರಂದು ಪ್ರಾರಂಭವಾಗಿದ್ದು, ಸೆಪ್ಟೆಂಬರ್ 23ರ ವರೆಗೆ ಇರಲಿದೆ.
2019ರಲ್ಲಿ ವಿದ್ಯಾರ್ಥಿ ವೇತನ ಆರಂಭ.. ಮೆಲ್ಬೋರ್ನ್‌ನ ಭಾರತೀಯ ಚಲನ ಚಿತ್ರೋತ್ಸವ ಮತ್ತು ಲಾ ಟ್ರೋಬ್ ವಿಶ್ವ ವಿದ್ಯಾಲಯದ ಸಹಭಾಗಿತ್ವದಲ್ಲಿ ವಿದ್ಯಾರ್ಥಿ ವೇತನವು ಪ್ರಪಂಚದಲ್ಲಿ ಅರ್ಥಪೂರ್ಣ ಪ್ರಭಾವ ಬೀರಲು ಭಾರತದ ಮಹತ್ವಾಕಾಂಕ್ಷಿ ಮಹಿಳಾ ಸಂಶೋಧಕರಿಗೆ ಅವರ ಜೀವನವನ್ನು ಬದಲಾಯಿಸುವ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ನಟ ಶಾರುಖ್ ಖಾನ್ ಮುಖ್ಯ ಅತಿಥಿಯಾಗಿದ್ದ 2019ರ ಚಲನ ಚಿತ್ರೋತ್ಸವದಲ್ಲಿ ಈ ವಿದ್ಯಾರ್ಥಿ ವೇತನವನ್ನು ಘೋಷಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪ್ರಾರಂಭಿಸಲು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಕೇರಳದ ತ್ರಿಶೂರ್‌ನ ಗೋಪಿಕಾ ಕೊಟ್ಟಂತರಾಯಿಲ್ ಭಾಸಿ ಅವರಿಗೆ ಮೊದಲ ವಿದ್ಯಾರ್ಥಿ ವೇತನವನ್ನು ನೀಡಲಾಗಿತ್ತು.
ಆಯ್ಕೆಯ ಪ್ರಮುಖ ಮಾನದಂಡ ಹೀಗಿದೆ.. ಆಯ್ಕೆಯ ಪ್ರಮುಖ ಮಾನದಂಡವೆಂದರೆ, ಕಳೆದ 10 ವರ್ಷಗಳಲ್ಲಿ ಸ್ನಾತಕೋತ್ತರ ಸಂಶೋಧನಾ ಪದವಿಯನ್ನು ಪೂರ್ಣಗೊಳಿಸಿದ ಮಹಿಳೆ ಭಾರತೀಯ ಪ್ರಜೆ ಆಗಿರಬೇಕು. ಆಯ್ಕೆ ಆದ ವಿದ್ಯಾರ್ಥಿನಿಯು ನಾಲ್ಕು ವರ್ಷಗಳ ಕಾಲ ಲಾ ಟ್ರೋಬ್ ವಿಶ್ವವಿದ್ಯಾಲಯದ ಪೂರ್ಣ ಸಂಶೋಧನಾ ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರೆ.
ಚಲನ ಚಿತ್ರೋತ್ಸವದ ನಿರ್ದೇಶಕ ಮಿತು ಭೌಮಿಕ್ ಲಾಂಗೆ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಟ ಶಾರುಖ್ ಖಾನ್ ದೊಡ್ಡ ಮನಸ್ಸನ್ನು ಹೊಂದಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಇದೀಗ ಅದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ವಿದ್ಯಾರ್ಥಿವೇತನವು ಭಾರತದ ಮಹಿಳಾ ಸಂಶೋಧಕರಿಗೆ ಇರುವ ಜೀವನವನ್ನು ಬದಲಾಯಿಸುವ ಅವಕಾಶವಾಗಿದೆ. ಎಸ್ಆರ್ಕೆ ಮತ್ತು ಐಎಫ್ಎಫ್ಎಂ (Indian Film Festival of Melbourne) ಒಡನಾಟ ಬಹಳ ಹಿಂದಿನಿಂದಲೂ ಇದೆ. ಆದರೀಗ ವಿದ್ಯಾರ್ಥಿ ವೇತನ ಕಾರಣಕ್ಕೆ ಅದು ಇನ್ನಷ್ಟು ವಿಶೇಷವಾಗಿದೆ. ಲಾ ಟ್ರೋಬ್ ವಿಶ್ವವಿದ್ಯಾಲಯವು ಆಸ್ಟ್ರೇಲಿಯಾದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ಅದೆಷ್ಟೋ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಬೇಕೆಂಬ ಇಚ್ಛೆ ಹೊಂದಿರುತ್ತಾರೆ. ಅದಕ್ಕೆ ಶಾರುಖ್ ಖಾನ್ ನೆರವಾಗಿದ್ದಾರೆಂದು ತಿಳಿಸಿದರು.
ವಿದ್ಯಾರ್ಥಿ ವೇತನದ ಘೋಷಣೆಯನ್ನು 2019ರಲ್ಲಿ ಐಎಫ್ಎಫ್ಎಂ ನ ಭೌತಿಕ ಕಾರ್ಯಕ್ರಮದ ಸಂದರ್ಭದಲ್ಲಿ ಮಾಡಲಾಗಿತ್ತು. ಆದರೆ ಸಾಂಕ್ರಾಮಿಕ ಮತ್ತು ಪ್ರಯಾಣದ ನಿರ್ಬಂಧಗಳಿಂದಾಗಿ ಕಳೆದ ವರ್ಷ ಇದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಆರಂಭಿಸಲಾಗಿದೆ.
ಇದನ್ನೂ ಓದಿ: ಕ್ರಿಕೆಟಿಗ ಶುಭಮನ್ ಗಿಲ್ - ನಟಿ ಸಾರಾ ಅಲಿ ಖಾನ್ ಡೇಟಿಂಗ್ ವದಂತಿ.. ಫ್ಯಾನ್ಸ್ ಹೇಳಿದ್ದಿಷ್ಟು
ವಿಶ್ವದ ಅಗ್ರ ವಿಶ್ವವಿದ್ಯಾನಿಲಯಗಳಲ್ಲಿ ಒಂದೆಂದು ಹೆಸರಿಸಲಾದ ಲಾ ಟ್ರೋಬ್ ವಿಶ್ವವಿದ್ಯಾನಿಲಯವು ಕಪಿಲ್ ದೇವ್, ಅಮಿತಾಬ್ ಬಚ್ಚನ್ ಮತ್ತು ರಾಜ್‌ಕುಮಾರ್ ಹಿರಾನಿ ಅವರಂತಹ ಭಾರತದ ಕೆಲವು ಹೆಸರಾಂತ ಗಣ್ಯರಿಗೆ ಆತಿಥ್ಯ ವಹಿಸಿದೆ.