ಹೋಳಿ ಸಂದರ್ಭ ಬಾಲಿವುಡ್ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಸತೀಶ್ ಚಂದ್ರ ಕೌಶಿಕ್ ನಿಧನರಾಗಿ ಚಿತ್ರರಂಗದ ಕಣ್ಣೀರಿಗೆ ಕಾರಣರಾದರು. ತಮ್ಮ 66ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದು, ಈ ಬಗ್ಗೆ ಪೊಲೀಸ್ ತನಿಖೆ ಚುರುಕುಗೊಂಡಿದೆ. ಹಿರಿಯ ನಟನ ಸಾವಿನ ಪ್ರಕರಣ ಸಂಬಂಧ ದೆಹಲಿ ಮೂಲದ ಉದ್ಯಮಿಯ ಪತ್ನಿ ಎಂದು ಹೇಳಿಕೊಂಡಿರುವ ಮಹಿಳೆಯೋರ್ವರು ತಮ್ಮ ಪತಿ 15 ಕೋಟಿ ರೂ.ಗಾಗಿ ಸತೀಶ್ ಕೌಶಿಕ್ ಅವರನ್ನು ಕೊಂದಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ಅಂದು ಹೋಳಿ ಪಾರ್ಟಿ ನಡೆದ ಫಾರ್ಮ್ ಹೌಸ್ ಮಾಲೀಕ ವಿಕಾಸ್ ಮಾಲು ಅವರ ಪತ್ನಿ ಎಂದು ದೂರು ದಾಖಲಿಸಿರುವ ಮಹಿಳೆ ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ.
15 ಕೋಟಿ ರೂ. ವಿಚಾರವಾಗಿ ವಿಕಾಸ್ ಮಾಲು ಮತ್ತು ದಿ. ಸತೀಶ್ ಕೌಶಿಕ್ ನಡುವೆ ಬಹಳ ದಿನಗಳಿಂದ ಜಗಳ ನಡೆಯುತ್ತಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಮಹಿಳೆ ನೀಡಿರುವ ದೂರಿನಲ್ಲಿ, ಸತೀಶ್ ಕೌಶಿಕ್ ಅವರು 15 ಕೋಟಿ ರೂ. ವಾಪಸ್ ನೀಡುವಂತೆ ಒತ್ತಡ ಹೇರುತ್ತಿದ್ದರು. ನನ್ನ ಗಂಡನ ಬಳಿ ಹಣ ಇರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದವೂ ನಡೆದಿದೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಶನಿವಾರ ರಾತ್ರಿ ದೆಹಲಿ ಪೊಲೀಸರು ಸತೀಶ್ ಕೌಶಿಕ್ ಸಾವಿನ ಬಗ್ಗೆ ಯಾವುದೇ ಮಾಹಿತಿ, ಶಂಕೆ ವ್ಯಕ್ತಪಡಿಸಿಲ್ಲ. ಹೀಗಾಗಿ ಅವರು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಸತೀಶ್ ಕೌಶಿಕ್ ಕಳೆದ ವರ್ಷ ಹಣಕ್ಕಾಗಿ ದುಬೈಗೆ ಭೇಟಿ ಕೊಟ್ಟಿದ್ದರು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ವಿಕಾಸ್ ಮಾಲು ಮತ್ತು ನಾನು ದುಬೈನಲ್ಲಿದ್ದೆವು. ಇಬ್ಬರೂ ಜಗಳವಾಡುತ್ತಿದ್ದದ್ದನ್ನು ನಾನು ಕೇಳಿಸಿಕೊಂಡೆ. ಈ ವಿಷಯದಲ್ಲಿ ಎಷ್ಟು ಸತ್ಯವಿದೆ ಎಂದು ಹೇಳುವುದು ಕಷ್ಟ. ತನಿಖೆ ಬಳಿಕ ಸತ್ಯಾಂಶ ಹೊರಬರಬೇಕಿದೆ ಎಂದು ದೂರು ನೀಡಿರುವ ಮಹಿಳೆ ಹೇಳಿದ್ದಾರೆ.
ಸತೀಶ್ ಕೌಶಿಕ್ ನಿಧನರಾದ ನಂತರ ದೆಹಲಿಯ ನೈಋತ್ಯ ಜಿಲ್ಲಾ ಪೊಲೀಸ್ ಕ್ರೈಂ ಸ್ಕ್ವಾಡ್ ನಟ ತಂಗಿದ್ದ ಫಾರ್ಮ್‌ಹೌಸ್‌ಗೆ ಭೇಟಿ ನೀಡಿತ್ತು. ತನಿಖಾ ತಂಡವು ಆ ಫಾರ್ಮ್‌ಹೌಸ್‌ನಲ್ಲಿ ಕೆಲ ನಿಷೇಧಿತ ಔಷಧಿಗಳನ್ನು ವಶಪಡಿಸಿಕೊಂಡಿತ್ತು ಎಂದು ಮೂಲಗಳು ಈ ಹಿಂದೆ ತಿಳಿಸಿದ್ದವು.
ಇದನ್ನೂ ಓದಿ: ನಟ ಸತೀಶ್ ಚಂದ್ರ ಕೌಶಿಕ್ ತಂಗಿದ್ದ ಫಾರ್ಮ್ಹೌಸ್ ಪರಿಶೀಲನೆ: ನಿಷೇಧಿತ ಔಷಧಿ ಪತ್ತೆ!
ದಿವಂಗತ ಸತೀಶ್ ಕೌಶಿಕ್ ಅವರ ಸ್ನೇಹಿತ, ಕೈಗಾರಿಕೋದ್ಯಮಿಯೋರ್ವರಿಗೆ ಸೇರಿದ ಫಾರ್ಮ್‌ಹೌಸ್‌ನಲ್ಲಿ ಹೋಳಿ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಆ ಕೈಗಾರಿಕೋದ್ಯಮಿ ಕೂಡ ಈಗ ತನಿಖೆಗೆ ಒಳಪಡಬೇಕಾಗಿದೆ. ಅಂದು ಫಾರ್ಮ್‌ಹೌಸ್‌ನಲ್ಲಿ ಯಾರು ಇದ್ದರು ಎಂಬುದನ್ನು ತಿಳಿದುಕೊಳ್ಳಲು ಅತಿಥಿಗಳ ಪಟ್ಟಿಯನ್ನು ಪರಿಶೀಲನೆ ನಡೆಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ಈ ಹಿಂದೆ ತಿಳಿಸಿದ್ದವು.
ಇದನ್ನೂ ಓದಿ: 'ಮಾಹಿತಿಯಿಲ್ಲದೇ ಮಾತನಾಡಬಾರದು': ಮಿಥುನ್ ರೈಗೆ ಪರೋಕ್ಷ ಟಾಂಗ್ ಕೊಟ್ಟ ರಕ್ಷಿತ್ ಶೆಟ್ಟಿ