ಚಿತ್ರರಂಗದಲ್ಲಿ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಮೂರು ತಿಂಗಳ ಹಿಂದೆ ಅದ್ಧೂರಿ ಮುಹೂರ್ತ ಕಾರ್ಯಕ್ರಮದ ಮೂಲಕ ಗಮನ ಸೆಳೆದಿದ್ದ 'ಸಂಜು ವೆಡ್ಸ್ ಗೀತಾ 2' ಚಿತ್ರತಂಡ ಇದೀಗ ಚಿತ್ರೀಕರಣದ ಮೂಲಕ ಸದ್ದು ಮಾಡುತ್ತಿದೆ. ಹೌದು, ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ 2' ಚಿತ್ರದ ಚಿತ್ರೀಕರಣ ಕನಕಪುರ ರಸ್ತೆಯ ಫಾರಂ ಹೌಸ್ನಲ್ಲಿ ಭರದಿಂದ ಸಾಗಿದೆ. ಚಿತ್ರದಲ್ಲಿ, 10ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ನಾಯಕ, ನಾಯಕಿಗೆ ಲಕ್ಷುರಿ ಕಾರ್ ಗಿಫ್ಟ್ ಕೊಡುವ ದೃಶ್ಯವನ್ನು ಛಾಯಾಗ್ರಾಹಕ ಸತ್ಯ ಹೆಗಡೆ ಸೆರೆ ಹಿಡಿದಿದ್ದಾರೆ. ಈ ಶೂಟಿಂಗ್ ಸೀನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿತ್ರೀಕರಣದ ಬಗ್ಗೆ ಮಾತು ಶುರು ಮಾಡಿದ ನಿರ್ದೇಶಕ ನಾಗಶೇಖರ್, ''ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸೇ ಸೀಕ್ವೆಲ್ ನಿರ್ಮಾಣಕ್ಕೆ ಕಾರಣ. ಮೊದಲ ಹಂತದಲ್ಲಿ ಈಗಾಗಲೇ 5-6 ದಿನದ ಶೂಟಿಂಗ್ ನಡೆಸಿದ್ದೇವೆ. ಅಚಾನಕ್ಕಾಗಿ ಒಂದಷ್ಟು ಬದಲಾವಣೆಗಳಾಗಿವೆ. ರಂಗಾಯಣ ರಘು, ಸಾಧು ಕೋಕಿಲ ಉತ್ತಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನನ್ನ ಈ ಕನಸಿಗೆ ಎಂಜಿನಿಯರಿಂಗ್ ಕ್ಲಾಸ್ಮೇಟ್ ಕುಮಾರ್ ಜೊತೆಗೂಡಿದ್ದಾರೆ. ನನ್ನ ಈ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದೇವೆ. ಶ್ರೀಧರ್ ಸಂಭ್ರಮ್ ಒಳ್ಳೆಯ ಟ್ಯೂನ್ ಕೊಟ್ಟಿದ್ದಾರೆ''.
''ಲೀಡ್ ಪಾತ್ರಗಳಲ್ಲಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ಉತ್ತಮವಾಗಿ ನಟಿಸುತ್ತಿದ್ದಾರೆ. ಡಿಸೆಂಬರ್ 2ರಿಂದ ಬೆಂಗಳೂರಲ್ಲಿ, ಡಿ. 9ರಿಂದ ಸ್ವಿಟ್ಜರ್ಲ್ಯಾಂಡ್ನಲ್ಲಿ 12 ದಿನಗಳ ಶೂಟಿಂಗ್ ಮುಗಿಸಿ ನಂತರ ಮುಂಬೈ, ಹೈದರಾಬಾದ್ನಲ್ಲಿ ಚಿತ್ರೀಕರಣ ನಡೆಸಲಿದ್ದೇವೆ. 2024ರ ಏಪ್ರಿಲ್ 1ರಂದು ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಇದೆ. ಅದೇ ದಿನ ಮೊದಲ ಭಾಗ ಬಿಡುಗಡೆಯಾಗಿತ್ತು. ಜೊತೆಗೆ ಇದೇ ಡಿಸೆಂಬರ್ 29ರಂದು ನಮ್ಮ ನಿರ್ಮಾಪಕರಾದ ಚಲವಾದಿ ಕುಮಾರ್ ಅವರ ಹುಟ್ಟುಹಬ್ಬ. ಅಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇವೆ'' ಎಂದು ಮಾಹಿತಿ ನೀಡಿದರು.
ನಾಯಕ ನಟ ಶ್ರೀನಗರ ಕಿಟ್ಟಿ ಮಾತನಾಡಿ, ನಾವೆಲ್ಲ ಸೇರಿ ಬಹಳ ಪ್ರೀತಿಯಿಂದ ಈ ಸಿನಿಮಾ ಮಾಡುತ್ತಿದ್ದೇವೆ. ಕಥೆಯೂ ಚೆನ್ನಾಗಿದೆ. ನಿರ್ಮಾಪಕರ ಹುಟ್ಟುಹಬ್ಬದಂದು ಟ್ರೇಲರ್ ಬಿಡುಗಡೆ ಮಾಡುತ್ತೇವೆ ಎಂದರು. ನಟಿ ರಚಿತಾ ರಾಮ್ ಮಾತನಾಡಿ ನನ್ನ ಪಾತ್ರದ ಹೆಸರು ಗೀತಾ. ಬಹಳ ಶೇಡ್ಸ್ ಇರುವಂಥ ಪಾತ್ರ. ಕಥೆ ಕೇಳಿದಾಗ ಬಹಳ ಇಷ್ಟ ಆಯ್ತು. ನಾಲ್ಕು ದಿನದಿಂದ ಶೂಟಿಂಗ್ನಲ್ಲಿ ಭಾಗಿಯಾಗಿದ್ದು ಒಳ್ಳೆ ಅನುಭವ ಕೊಟ್ಟಿದೆ. ಕಿಟ್ಟಿ ಅವರ ಜೊತೆ ಒಂದೆರಡು ದೃಶ್ಯದಲ್ಲಿ ಕೆಲಸ ಮಾಡಿದ್ದೇನೆ. ಒಳ್ಳೆ ಎನರ್ಜಿ ಈ ಚಿತ್ರದಲ್ಲಿದೆ ಎಂದರು.
ನಟ ರಂಗಾಯಣ ರಘು ಮಾತನಾಡಿ, ಒಳ್ಳೆ ನಿರ್ಮಾಪಕರು ನಮಗೆ ಸಿಕ್ಕಿದ್ದಾರೆ, ಕಥೆಯೂ ಚೆನ್ನಾಗಿದೆ ಎಂದು ಹೇಳಿದರು. ಸಾಧುಕೊಕಿಲ ಮಾತನಾಡಿ, ಚಿತ್ರದಲ್ಲಿ ಒಂದೊಳ್ಳೆ ಪಾತ್ರ ನಿರ್ವಹಿಸುತ್ತಿದ್ದೇನೆ. ನಾಗಶೇಖರ್ ಜೊತೆ ಕೆಲಸ ಮಾಡಿದ್ದು, ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಂಜು ವೆಡ್ಸ್ ಗೀತಾ ಚಿತ್ರದಿಂದಲೂ ಜೊತೆಗಿದ್ದೇನೆ ಎಂದು ತಿಳಿಸಿದರು.
ಬಳಿಕ ಸಂಗೀತ ನಿರ್ದೇಶಕ ಶ್ರೀಧರ ವಿ. ಸಂಭ್ರಮ್ ಮಾತನಾಡಿ, ನಾನು ಈ ಸಿನಿಮಾಗೆ ಮ್ಯೂಸಿಕ್ ಕೊಡುತ್ತಿರೋದೇ ಅದೃಷ್ಟ ಎನ್ನಬಹುದು. ಚಿತ್ರದಲ್ಲಿ 5 ಹಾಡುಗಳಿದ್ದು, ಕವಿರಾಜ ಸಾಹಿತ್ಯ ಒಳ್ಳೆ ಸಾಹಿತ್ಯ ಬರೆದಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಪ್ರತಿಷ್ಟಿತ ಎಮ್ಮಿ ಪ್ರಶಸ್ತಿ ಗೆದ್ದ ಭಾರತದ ವೀರ್ದಾಸ್: ವಿಜೇತರ ಪಟ್ಟಿ ಹೀಗಿದೆ
ನಿರ್ಮಾಪಕ ಚಲವಾದಿ ಕುಮಾರ್ ಮಾತನಾಡಿ, ನಾಗಶೇಖರ್ ನಾನು ಇಂಜಿನಿಯರಿಂಗ್ ಕ್ಲಾಸ್ ಮೇಟ್ಸ್. ಸ್ಕ್ರಿಪ್ಟ್ ಕೆಲಸದಲ್ಲೂ ನಾನು ಅವರ ಜೊತೆಗಿದ್ದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಮುಂದೆಯೂ ಒಳ್ಳೆ ಸಿನಿಮಾಗಳನ್ನು ನಿರ್ಮಾಣ ಮಾಡುವೆ ಎಂದು ತಿಳಿಸಿದರು. ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ 14 ವರ್ಷದ ಹಿಂದೆ ಸಿನಿಮಾ ಮಾಡಿದ್ವಿ. ಪ್ರಸ್ತುತ ಟೆಕ್ನಾಲಜಿ ಬದಲಾಗಿದೆ. ಈ ಸಿನಿಮಾವನ್ನು ಇನ್ನೂ ಚೆನ್ನಾಗಿ ಮಾಡಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಪ್ರತಿಷ್ಠಿತ ಪ್ರಶಸ್ತಿಯಲ್ಲಿ ಭಾರತೀಯರ ಸಾಧನೆ: ಏಕ್ತಾ, ವೀರ್ ಮುಡಿಗೇರಿದ 'ಎಮ್ಮಿ'; ಶೆಫಾಲಿಗೆ ನಿರಾಶೆ
ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. 2024ರ ಏಪ್ರಿಲ್ 1ರಂದು ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.