ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಲ್ಲಿ ಸ್ಯಾಂಡಲ್ವುಡ್ ಅಧ್ಯಕ್ಷ ಅಂತಾ ಕರೆಯಿಸಿಕೊಂಡ ನಟ ಶರಣ್. ಸದ್ಯ ಛೂ ಮಂತರ್ ಸಿನಿಮಾದ ಜಪ ಮಾಡುತ್ತಿರುವ ಶರಣ್ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಬರ್ತ್ ಡೇ ದಿನದಂದು ಶರಣ್ ಹೆಸರಿಡದ ಚಿತ್ರವನ್ನು ಅನೌಸ್ ಮಾಡಿದ್ದಾರೆ. ಪುಗ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’ ಸಿನಿಮಾ ಖ್ಯಾತಿಯ ಅರವಿಂದ್ ಕುಪ್ಲಿಕರ್ ಅವರು, ಶರಣ್ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಡಾರ್ಕ್ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಶರಣ್ ಪಾತ್ರ ಹಿಂದಿನ ಸಿನಿಮಾಗಳಿಗಿಂತ ಡಿಫ್ರೆಂಟ್ ಆಗಿರಲಿದ್ದು, ಎಲೆಕ್ಟ್ರಿಷಿಯನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಇಂದು ಶರಣ್ ಹುಟ್ಟುಹಬ್ಬ ಆಗಿರುವುದರಿಂದ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸ್ಯಾಂಡಲ್ ವುಡ್ ಅಧ್ಯಕ್ಷನಿಗೆ ಬರ್ತ್ ಡೇ ಉಡುಗೊರೆಯಾಗಿ ನೀಡಿದೆ.
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ಅಭಿನಯದ ‘ಪುಗ್ಸಟ್ಟೆ ಲೈಫು ಪುರುಸೋತ್ತೇ ಇಲ್ಲ’ ಸಿನಿಮಾ ನಂತರ ಅರವಿಂದ್ ಕುಪ್ಲಿಕರ್ ಆಕ್ಷನ್ ಕಟ್ ಹೇಳುತ್ತಿರುವ ಎರಡನೇ ಸಿನಿಮಾವಿದು. ಬಾಗಲಕೋಟೆಯಲ್ಲಿ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದ್ದು, ಉತ್ತರ ಕರ್ನಾಟಕ ಶೈಲಿ ಭಾಷೆಯಲ್ಲಿ ಶರಣ್ ಗಮನ ಸೆಳೆಯಲಿದ್ದಾರೆ ಎಂದು ನಿರ್ದೇಶಕ ಅರವಿಂದ್ ಕುಪ್ಲಿಕರ್ ತಿಳಿಸಿದ್ದಾರೆ.
ಶರಣ್ ಜೊತೆಗೆ ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಹೊಸ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಶ್ರೀಧರ ಕೃಪ ಕಂಬೈನ್ಸ್ ಬ್ಯಾನರ್ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದ್ದು, ಬಿ.ಬಸವರಾಜ್ ಹಾಗೂ ಶ್ರೀಧರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ತಿಂಗಳ ಫೆ.20ರಿಂದ ಚಿತ್ರೀಕರಣ ಆರಂಭವಾಗಲಿದ್ದು ಚಿತ್ರದ ಟೈಟಲ್ ಹಾಗೂ ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಚಿತ್ರತಂಡ ಹಂಚಿಕೊಳ್ಳಲಿದೆ.
ಶರಣ್ ಬಾಲ್ಯ ಮತ್ತು ಸಿನಿ ಜರ್ನಿ : ಶರಣ್ ಕನ್ನಡ ಚಿತ್ರರಂಗದಲ್ಲಿ 2 ದಶಕಗಳಿಂದ ತಮ್ಮ ಒಂದಲ್ಲಾ ಒಂದು ವಿಭನ್ನ ಹಾಸ್ಯ ಪಾತ್ರಗಳಿಂದ ನಾಯಕ ನಟ ನಿರ್ಮಾಪಕ ಮತ್ತು ಹಿನ್ನಲೆ ಗಾಯಕನಾಗಿ ಕನ್ನಡ ಸಿನಿ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಯಾದಗಿರಿಯ ಪ್ರಸಿದ್ಧ ಶರಣ ಬಸವೇಶ್ವರರ ಹರಕೆಯಿಂದ ಫೆ.6, 1972 ರಂದು ಶರಣ್ ಹುಟ್ಟಿದ್ದರು. ನಂತರ ಹರಕೆಯಂತೆ ಮಗುವಿಗೆ ಶರಣ್ ಎಂದು ಅವರ ತಂದೆ ತಾಯಿ ಹೆಸರಿಟ್ಟರು.
ಆಗಿನ ಕಾಲದ ಪ್ರಸಿದ್ದ ಗುಬ್ಬಿ ನಾಟಕ ಕಂಪನಿಯಲ್ಲಿ ಇವರ ಇಡೀ ಕುಟುಂಬವೇ ಕಲಾವಿದರಾಗಿ ಬಣ್ಣ ಹಚ್ಚುತ್ತಿದ್ದರು. ಅಲ್ಲಿಂದಲೇ ಬಹುಶಃ ಶರಣ್ ಅವರ ಚಿತ್ರರಂಗಕ್ಕೆ ಬರಲು ಕಾರಣ ಎನ್ನಬಹುದು. ಚಿತ್ರರಂಗಕ್ಕೆ ಬರುವ ಮುನ್ನ ಸಂಗೀತದಲ್ಲಿ ಆಸಕ್ತಿಯಿದ್ದ ಶರಣ್ ಒಂದು ಆರ್ಕೆಸ್ಟ್ರಾದಲ್ಲಿ ಗಾಯಕರಾಗಿದ್ದರು. ಈ ವೇಳೆ ಸಾಕಷ್ಟು ಭಕ್ತಿಗೀತೆಗಳ ಅಲ್ಬಮ್ವೊಂದನ್ನು ಕೂಡ ಹೊರತಂದಿದ್ದರು. ಇವರ ತಂಗಿ ನಟಿ ಶೃತಿ ಕೂಡ ಕನ್ನಡ ಸಿನಿರಂಗದಲ್ಲಿ ಹಲವಾರು ಹಿಟ್ ಮೂವಿಗಳನ್ನು ನೀಡಿದ್ದಾರೆ.
ಬಳಿಕ ದೂರದರ್ಶನದ ಲ್ಲಿ ಕೆಲವು ಸೀರಿಯಲ್‌ಗಳಲ್ಲಿ ಮೊದಲು ಬಣ್ಣ ಹಚ್ಚತೊಡಗಿದರು. 1996 ರಲ್ಲಿ ತೆರೆಕಂಡ ಸಿದ್ಧಲಿಂಗಯ್ಯನವರ 'ಪ್ರೇಮ ಪ್ರೇಮ ಪ್ರೇಮ'ಚಿತ್ರದ ಮೂಲಕ ಹಾಸ್ಯನಟನಾಗಿ ಕನ್ನಡ ಚಿತ್ರರಂಗ ಪ್ರವೇಶಸಿದರು. ಇದದಾ ಮೇಲೆ ಸುಮಾರು 99 ಚಿತ್ರಗಳಲ್ಲಿ ಹಾಸ್ಯ ಮತ್ತು ಪೋಷಕ ಕಲಾವಿದನಾಗಿ ಕನ್ನಡದ ಸಿನಿರಸಿಕರ ಮನಗೆದ್ದರು.
2012 ರಲ್ಲಿ ತಮ್ಮ ನಿರ್ಮಾಣದಲ್ಲೇ ಮೂಡಿಬಂದ`ರ‍್ಯಾಂಬೋ' ಚಿತ್ರದ ಮೂಲಕ ನಾಯಕನಟನಾಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಈ ಚಿತ್ರವು ಪ್ರೇಕ್ಷಕ ಮತ್ತು ವಿಮರ್ಶಕರಿಂದ ಬಹುವಾಗಿ ಪ್ರಶಂಸೆ ಪಡೆದು 2012 ರ ಟಾಪ್ 5 ಹಿಟ್ ಚಿತ್ರಗಳಲ್ಲಿ ಗುರುತಿಸಿಕೊಂಡಿತು. ನಂತರ ಬಂದ `ವಿಕ್ಟರಿ',`ಅಧ್ಯಕ್ಷ' `ರಾಜರಾಜೇಂದ್ರ' ನಂತಹ ಹಾಸ್ಯಭರಿತ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿ ಶರಣ್ ವೃತ್ತಿಜೀವನಕ್ಕೆ ಹೊಸತಿರುವು ನೀಡಿದವು.
ಮೊದಲಿಂದಲೂ ಆಸಕ್ತಿ ಇದ್ದ ಗಾಯನದ ಕಡೆಗೆ ಮುಖ ಮಾಡಿದ ಶರಣ್ `ರಾಜರಾಜೇಂದ್ರ',`ವಜ್ರಕಾಯ',`ಬುಲೆಟ್ ಬಸ್ಯಾ',`ದನ ಕಾಯೋನು' ಮುಂತಾದ ಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿ ಹಲವು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಈ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿರುವುದು ಮತ್ತೊಂದು ಖುಷಿಯ ವಿಚಾರ.
ಇದನ್ನೂ ಓದಿ : ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಹುಟ್ಟಿದ್ದ ಶರಣ್ಗೆ ಇಂದು 51ನೇ ಜನ್ಮದಿನ ಸಂಭ್ರಮ