ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ 'ತ್ರಿವಿಕ್ರಮ' ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರೋದು ಗೊತ್ತಿರುವ ವಿಚಾರ. ಮಾಸ್ ಟೈಟಲ್ನಿಂದ ಹವಾ ಸೃಷ್ಟಿಸಿರೋ 'ತ್ರಿವಿಕ್ರಮ' ಇದೀಗ ಶೂಟಿಂಗ್ ಮುಗಿಸಿ ಬಿಡುಗಡೆಗೆ ರೆಡಿಯಾಗಿದೆ. ನಟಿ ತಾರಾ, ನಟರಾದ ಮನುರಂಜನ್, ಸಾಧುಕೋಕಿಲ, ಶರಣ್, ಆದಿ ಲೋಕೇಶ್, ನಿರ್ದೇಶಕರಾದ ಶಿವಮಣಿ, ಸಂತೋಷ್ ಆನಂದರಾಮ್, ಚೇತನ್ ಕುಮಾರ್ ಸೇರಿ ಈ ಚಿತ್ರ ಜೂನ್ 24 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ ಎಂದು ಘೋಷಿಸಿದರು.
![Sandalwood actors who gave the support to Trivikrama cinema](https://etvbharatimages.akamaized.net/etvbharat/prod-images/kn-bng-04-vikramravichandran-cinemage-saathukotta-kannada-stars-7204735_10052022232555_1005f_1652205355_121.jpg)
ಚಿತ್ರದ ಬಿಡುಗಡೆ ದಿನ ಘೋಷಣೆ ಮಾಡಲು ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಮೊದಲು ಮಾತು ಶುರು ಮಾಡಿದ ವಿಕ್ರಮ್ ರವಿಚಂದ್ರನ್, 'ನಮ್ಮ ಚಿತ್ರ ಪೂರ್ಣವಾಗಿ ಮೂರು ವರ್ಷವಾಯಿತು. ಕೋವಿಡ್ನಿಂದ ತಡವಾಗಿದೆ. ಈ ವೇಳೆ ನಾನು ಪುನೀತ್ ಸರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಈ ಚಿತ್ರದ ಕಥೆ ಅವರಿಗೆ ಹೇಳಿದ್ದೆ. ಕೇಳಿ ಖುಷಿ ಪಟ್ಟಿದ್ದರು. ನಾನು ಒಂದು ಹಾಡು ಹಾಡುವೆ ಅಂದಿದ್ದರು. ನೀನು ಚೆನ್ನಾಗಿ ಡ್ಯಾನ್ಸ್ ಮಾಡಬೇಕು. ಇಲ್ಲದಿದ್ದರೆ ಹೊಡೆಯುವುದಾಗಿ ಪ್ರೀತಿಯಿಂದ ಗದರಿದ್ದರು. ಅವರು ಇಲ್ಲ ಅಂತ ಹೇಳಲ್ಲ. ಇಲ್ಲೇ ಇದ್ದಾರೆ. ಈ ಚಿತ್ರದ ಕಥೆ ನಾನು, ನಮ್ಮ ತಂದೆಯವರಿಗೂ ಪೂರ್ತಿ ಹೇಳಿಲ್ಲ. ಕಥೆ ಗೊತ್ತಿರುವುದು ನನಗೆ, ಅಪ್ಪು ಸರ್ಗೆ ಹಾಗೂ ಶಿವಣ್ಣ ಅವರಿಗೆ. ನಾನು ರವಿಚಂದ್ರನ್ ಅವರ ಮಗ ಹೌದು. ಆದರೆ, ಚಿತ್ರರಂಗಕ್ಕೆ ನಾಯಕನಾಗಿ ಹೊಸಬ. ನೀವು ನನ್ನನ್ನು ಬೆಳೆಸಬೇಕು' ಎಂದು ಮನವಿ ಮಾಡಿದರು.
![Sandalwood actors who gave the support to Trivikrama cinema](https://etvbharatimages.akamaized.net/etvbharat/prod-images/kn-bng-04-vikramravichandran-cinemage-saathukotta-kannada-stars-7204735_10052022232555_1005f_1652205355_1007.jpg)
ನಟಿ ಆಕಾಂಕ್ಷ ಶರ್ಮಾ ಮಾತನಾಡಿ, 'ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಅಭಿನಯಿಸುವಾಗ ವಿಕ್ರಮ್ ಸರ್ ಸಾಕಷ್ಟು ಸಹಾಯ ಮಾಡಿದರು' ಎಂದು ಹೇಳಿದರು.
'ಈ ಹಿಂದೆ ಜನುಮದ ಜೋಡಿ ಚಿತ್ರ ಬಂದಾಗ ಜನ ಎಷ್ಟೋ ದಿನ ಅದೇ ಗುಂಗಿನಲ್ಲಿದ್ದರು. ಈಗ ಕೆಜಿಎಫ್ 2 ಚಿತ್ರವನ್ನು ಅದೇ ರೀತಿ ನೋಡುತ್ತಿದ್ದಾರೆ. ಜನರನ್ನು ಮತ್ತೆ ಚಿತ್ರಮಂದಿರದತ್ತ ಕರೆದುಕೊಂಡು ಬರುವ ಚಿತ್ರ ಬರಬೇಕು. ಅಂತಹ ಚಿತ್ರ ತ್ರಿವಿಕ್ರಮ ಆಗಲಿ. ವಿಕ್ಕಿ ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ' ಎಂದು ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡಿರುವ ಸಾಧು ಕೋಕಿಲ ಹಾರೈಸಿದರು.
ನಿರ್ದೇಶಕ ಸಹನಾಮೂರ್ತಿ ಕೂಡ, ವಿಕ್ರಮ್ ಅವರ ನಟನೆಗೆ ನೂರಕ್ಕೆ ಸಾವಿರ ಅಂಕ ಕೊಡಬಹುದು. ಮಧ್ಯಮರ್ಗದ ಹುಡುಗನಾಗಿ ವಿಕ್ರಮ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ. ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗ, ಹೈಕ್ಲಾಸ್ ಫ್ಯಾಮಿಲಿ ಹುಡುಗಿಯನ್ನು ಏಕೆ ಲವ್ ಮಾಡಬಾರದು? ಎಂಬ ವಿಷಯವನ್ನು ಈ ಚಿತ್ರದಲ್ಲಿ ಹೇಳಹೊರಟಿದ್ದೇನೆ. ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಅಮ್ಮನ ಕುರಿತಾದ ಹಾಡು ಈಗಾಗಲೇ ಜನಮನ ಗೆದ್ದಿದೆ. ಚಿತ್ರಕ್ಕೆ ನಿರ್ಮಾಪಕ ಸೋಮಣ್ಣನವರ ಸಹಕಾರ ಅಪಾರ. ಜೂನ್ 24 ಚಿತ್ರ ತೆರೆಗೆ ಬರಲಿದೆ. ಇದು ನನ್ನ ಮೂರನೇ ಚಿತ್ರ ಎಂದು ತಿಳಿಸಿದರು.
![Sandalwood actors who gave the support to Trivikrama cinema](https://etvbharatimages.akamaized.net/etvbharat/prod-images/kn-bng-04-vikramravichandran-cinemage-saathukotta-kannada-stars-7204735_10052022232555_1005f_1652205355_38.jpg)
ಕೊನೆಯದಾಗಿ ನಿರ್ಮಾಪಕ ಸೋಮಣ್ಣ ಮಾತನಾಡಿ, ನಿರ್ದೇಶಕ ಸಹನಾಮೂರ್ತಿ ನನ್ನ ಸ್ನೇಹಿತ. ಆತ ಈ ಚಿತ್ರದ ಕಥೆ ಸಿದ್ದಮಾಡಿಕೊಂಡು ಅನೇಕರ ಹತ್ತಿರ ಹೇಳುತ್ತಿದ್ದ. ಕೊನೆಗೆ ನಾನು ಕೇಳಿದ್ದೆ. ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಹಾಗಾಗಿ ನಾನು ಸಿನಿಮಾ ಮಾಡಲು ಒಪ್ಪಿಕೊಂಡೆ. 2019ರಲ್ಲಿ ಚಿತ್ರ ಆರಂಭವಾಯಿತು. ಅಪ್ಪು ಸರ್ ಬಂದು ಕ್ಲಾಪ್ ಮಾಡಿದ್ದರು. ಚಿತ್ರದ ಎಲ್ಲಾ ಇವೆಂಟ್ಗಳಗೂ ಬರುವ ಭರವಸೆ ನೀಡಿದ್ದರು. ಆದರೆ, ವಿಧಿಲಿಖಿತವೇ ಬೇರೆಯಾಗಿತ್ತು. ಈ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದರು.
ಹಿರಿಯ ನಿರ್ದೇಶಕ ಶಿವಮಣಿ ಅವರು ಸಹ ಈ ಚಿತ್ರದ ತಮ್ಮ ಪಾತ್ರದ ಕುರಿತು ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮನುರಂಜನ್ ರವಿಚಂದ್ರನ್, ತಾರಾ, ಸಂತೋಷ್ ಆನಂದರಾಮ್, ಚೇತನ್, ಶರಣ್, ಆದಿ ಲೋಕೇಶ್ ಸೇರಿ 'ತ್ರಿವಿಕ್ರಮ' ಸಿನಿಮಾ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಕ್ಸಸ್ ಸಿಗಬೇಕು ಅಂತಾ ಹಾರೈಸಿದರು.