ಹೈದರಾಬಾದ್: ಪಂಜಾಬಿ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಬೆನ್ನಲ್ಲೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ವರದಿಯಾಗಿದೆ. ಮೊಸೆವಾಲಾ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಪ್ರಮುಖ ಆರೋಪಿಯಾಗಿರುವ ಕಾರಣ ಬಾಲಿವುಡ್ ನಟನಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎನ್ನಲಾಗ್ತಿದೆ.
ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದೆ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರನ್ನ ಹತ್ಯೆ ಮಾಡಲು ಬಿಷ್ಣೋಯ್ ಸಂಚು ರೂಪಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಸಲ ಅವರಿಗೆ ಬೆದರಿಕೆ ಸಹ ಹಾಕಲಾಗಿತ್ತು. ಇದೀಗ ಅವರ ಮನೆಯ ಸುತ್ತಲೂ ಹೆಚ್ಚಿನ ಪೊಲೀಸರು ಗಸ್ತು ತಿರುಗುತ್ತಿದ್ದಾರೆ ಎಂದು ವರದಿಯಾಗಿದೆ. ಕೃಷ್ಣಮೃಗವನ್ನ ಬಿಷ್ಣೋಯ್ಗಳು ಪವಿತ್ರ ಎಂದು ನಂಬುತ್ತಾರೆ, ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ಗೆ ಈ ಹಿಂದೆ ಬೆದರಿಕೆ ಸಹ ಹಾಕಲಾಗಿದೆ.
ಇದನ್ನೂ ಓದಿ: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಮೊದಲ ಆರೋಪಿ ಬಂಧಿಸಿದ ಪೊಲೀಸರು
2018ರಲ್ಲಿ ರಾಜಸ್ಥಾನದಲ್ಲಿ ಕೃಷ್ಣಮೃಗ ಬೇಟೆ ಆಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಜೈಲಿಗೆ ಹೋಗಿದ್ದರು. ಈ ಸಮಯದಲ್ಲಿ ಕೋರ್ಟ್ ಹೊರಗೆ ಮಾತನಾಡಿದ್ದ ಬಿಷ್ಣೋಯ್, ಸಲ್ಮಾನ್ ಖಾನ್ ಅವರನ್ನ ಕೊಲ್ಲುತ್ತೇವೆ ಎಂದು ಹೇಳಿಕೆ ನೀಡಿದ್ದರು. ಬಿಷ್ಣೋಯ್ ಅವರ ನಿಕಟ ಸಂಪರ್ಕದಲ್ಲಿದ್ದ ರಾಹುಲ್ ಅಲಿಯಾಸ್ ಸುನ್ನಿಯನ್ನ 2020ರಲ್ಲಿ ಬಂಧನ ಮಾಡಲಾಗಿತ್ತು. ಈ ವೇಳೆ, ವಿಚಾರಣೆ ನಡೆಸಿದಾಗ ಸಲ್ಮಾನ್ ಖಾನ್ ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.