ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಗೆಲ್ಲಲು ಒಂದೇ ದಿನದ ಅವಧಿಯಲ್ಲಿ 'ಸಲಾರ್' ಮತ್ತು 'ಡಂಕಿ' ಎಂಬೆರಡು ಸಿನಿಮಾಗಳು ತೆರೆಗೆ ಬರುತ್ತಿವೆ. ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾಗುತ್ತಿರುವ ಈ ಚಿತ್ರಗಳಿಗೆ ಭಾರಿ ಹೈಪ್ ಕೂಡಾ ಕ್ರಿಯೇಟ್ ಆಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯು ಈಗಾಗಲೇ ದೇಶ, ವಿದೇಶಗಳಲ್ಲಿ ಪ್ರಾರಂಭವಾಗಿವೆ. ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ನಟನೆಯ ಚಿತ್ರಗಳ ಟಿಕೆಟ್‌ಗಳು ಶರವೇಗದಲ್ಲಿ ಮಾರಾಟವಾಗುತ್ತಿವೆ.
'ಸಲಾರ್' ಮುಂಗಡ ಬುಕ್ಕಿಂಗ್: ಭಾರತದ ಮುಂಗಡ ಬುಕ್ಕಿಂಗ್ನಲ್ಲಿ 'ಸಲಾರ್' ಈವರೆಗೆ 1.55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಲ್ಲಿ ತೆಲುಗು ಭಾಷೆಯಲ್ಲಿ 1.1 ಕೋಟಿ ರೂ., ಮಲಯಾಳಂನಲ್ಲಿ 35.3 ಲಕ್ಷ ರೂ., ಕನ್ನಡದಲ್ಲಿ 28.3 ಲಕ್ಷ ರೂ., ತಮಿಳಿನಲ್ಲಿ 23.3 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ. ಬಿಡುಗಡೆಯಾಗುವ ಮೊದಲ ದಿನವೇ (ಡಿಸೆಂಬರ್ 22) ಹಿಂದಿಯಲ್ಲಿ 350 ಶೋಗಳಿಗೆ (5.7 ಲಕ್ಷ ರೂ.) 2,303 ಟಿಕೆಟ್ಗಳನ್ನು ಕಾಯ್ದಿರಿಸಲಾಗಿದೆ. ದೇಶಾದ್ಯಂತ ಎಲ್ಲಾ ಭಾಷೆಗಳಲ್ಲಿ ಒಟ್ಟು 75,817 ಟಿಕೆಟ್‌ಗಳು ಮಾರಾಟವಾಗಿವೆ.
ಡಿಸೆಂಬರ್ 17ರಿಂದ ಉತ್ತರ ಭಾರತದಲ್ಲೂ 'ಸಲಾರ್' ಚಿತ್ರದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಇದನ್ನು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಪ್ರಕಟಿಸಿದೆ. ಇದರೊಂದಿಗೆ ಮುಂಗಡ ಬುಕ್ಕಿಂಗ್ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
'ಡಂಕಿ' ಕಲೆಕ್ಷನ್?: 2023ರಲ್ಲಿ ಶಾರುಖ್ ಖಾನ್ ಮೂರನೇ ಬಾರಿಗೆ 'ಡಂಕಿ' ಮೂಲಕ ಥಿಯೇಟರ್‌ಗಳಲ್ಲಿ ಸದ್ದು ಮಾಡಲಿದ್ದಾರೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ. ಭಾರತದಲ್ಲಿ 1.44 ಕೋಟಿ ರೂಪಾಯಿ ಸಂಗ್ರಹವಾಗಿದೆ. 'ಡಂಕಿ' ಬಿಡುಗಡೆಯಾಗುವ ಮೊದಲ ದಿನವೇ ಹಿಂದಿಯೊಂದರಲ್ಲೇ 3,126 ಶೋಗಳಿಗೆ 39,954 ಟಿಕೆಟ್‌ಗಳು ಮಾರಾಟವಾಗಿವೆ.
'ಸಲಾರ್' vs 'ಡಂಕಿ': ಭಾರತದ ಮುಂಗಡ ಟಿಕೆಟ್ ಬುಕ್ಕಿಂಗ್ನಲ್ಲಿ 'ಸಲಾರ್'ಗೆ ಹೋಲಿಸಿದರೆ 'ಡಂಕಿ' ಸ್ವಲ್ಪ ಕಡಿಮೆ ಕಲೆಕ್ಷನ್ ಮಾಡಿದೆ ಎಂದೇ ಹೇಳಬಹುದು. 'ಸಲಾರ್' ಈವರೆಗೆ 1.55 ಕೋಟಿ ರೂಪಾಯಿ ಗಳಿಸಿದ್ರೆ, 'ಡಂಕಿ' 1.44 ಕೋಟಿ ರೂಪಾಯಿ ಪಡೆದುಕೊಂಡಿದೆ. ಡಿಸೆಂಬರ್ 21ರಂದು 'ಡಂಕಿ' ತೆರೆ ಕಾಣಲಿದ್ದು, 'ಸಲಾರ್' ಮರುದಿನ ಡಿಸೆಂಬರ್ 22ರಂದು ತೆರೆಗೆ ಅಪ್ಪಳಿಸಲಿದೆ.
'ಸಲಾರ್' ರೂವಾರಿಗಳು: ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ 'ಸಲಾರ್'ಗೆ ಆ್ಯಕ್ಷನ್ ಕಟ್ ಹೇಳಿದ್ದು, ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಅವರಂತಹ ಸ್ಟಾರ್ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದು, 'ಕೆಜಿಎಫ್' ಚಿತ್ರತಂಡವೇ ಈ ಸಿನಿಮಾಗೂ ಕೆಲಸ ಮಾಡಿದೆ.
'ಡಂಕಿ' ಚಿತ್ರತಂಡ: ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ, ಅನಿಲ್ ಗ್ರೋವರ್, ವಿಕ್ಕಿ ಕೌಶಲ್, ತಾಪ್ಸಿ ಪನ್ನು, ಬೋಮನ್ ಇರಾನಿ ಮತ್ತು ವಿಕ್ರಮ್ ಕೊಚ್ಚಾರ್ ಕೂಡ ನಟಿಸಿದ್ದಾರೆ. ಕನಿಕಾ ಧಿಲ್ಲೋನ್, ರಾಜ್‌ಕುಮಾರ್ ಹಿರಾನಿ ಮತ್ತು ಅಭಿಜಿತ್ ಜೋಶಿ ಸೇರಿ ಬರೆದಿದ್ದಾರೆ. ಸಿನಿಮಾ ತಮ್ಮ ತಾಯ್ನಾಡಾದ ಭಾರತಕ್ಕೆ ಮರಳಲು ಬಯಸುವ ಜನರ ಗುಂಪಿನ ಕುರಿತಾಗಿದೆ. ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್‌ನಿಂದ ಡಂಕಿ ನಿರ್ಮಾಣಗೊಂಡಿದೆ.
ಇದನ್ನೂ ಓದಿ: 'ಸಿನಿಮಾ ಕ್ಷೇತ್ರಕ್ಕೆ ಬಾರದೇ ಇರ್ತಿದ್ರೆ___ಆಗುತ್ತಿದ್ದೆ': ಸಲಾರ್ ನಟ ಪೃಥ್ವಿರಾಜ್ ಸುಕುಮಾರನ್