ಕನ್ನಡದ ಬಿಗ್ ಬಾಸ್ ಶೋ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ ರೂಪೇಶ್ ಶೆಟ್ಟಿಯ 'ಸರ್ಕಸ್' ತುಳು ಸಿನಿಮಾ ಜೂನ್ 23ರಂದು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ತುಳುನಾಡು ಮಾತ್ರವಲ್ಲದೇ ಇಡೀ ಕರ್ನಾಟಕದ ಜನರನ್ನು ಹಾಸ್ಯ ಲೋಕದ ಮತ್ತೊಂದು ಮಜಲಿಗೆ ಕೊಂಡೊಯ್ದಿದೆ. ಶೆಟ್ರು ಬಿಗ್ ಬಾಸ್ ವಿನ್ನರ್ ಆದ ಬಳಿಕ ದೊಡ್ಡ ಮಟ್ಟದಲ್ಲಿ ಮೂಡಿಬಂದ ಈ ಸಿನಿಮಾವನ್ನು ಅಭಿಮಾನಿಗಳು ದೊಡ್ಡ ಮಟ್ಟದಲ್ಲೇ ಗೆಲ್ಲಿಸಿಕೊಟ್ಟಿದ್ದಾರೆ.
'ಸರ್ಕಸ್' ತುಳು ಸಿನಿಮಾ. ಆದರೆ ಈ ಚಿತ್ರ ತುಳು ಭಾಷೆ ಬಲ್ಲವರಿಗೆ ಮಾತ್ರವಲ್ಲ, ಬಾರದವರಿಗೂ ಅರ್ಥವಾಗುವಂತೆ ಕಥೆಯನ್ನು ಕಟ್ಟಿಕೊಡಲಾಗಿದೆ. ಇದಕ್ಕೂ ಮೊದಲು ರೂಪೇಶ್ ಶೆಟ್ಟಿ ಅಭಿನಯಿಸಿದ್ದ 'ಗಿರಿಗಿಟ್' ಎಂಬ ತುಳು ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು. ಅದಕ್ಕೂ ಮೊದಲು ಮತ್ತು ನಂತರದಲ್ಲಿ ಕೆಲವು ಸಿನಿಮಾಗಳಲ್ಲಿ ರೂಪೇಶ್ ಶೆಟ್ಟಿ ನಟಿಸಿದ್ದರೂ ಕೂಡ ಅದೃಷ್ಟ ಅವರ ಕೈಹಿಡಿದಿರಲಿಲ್ಲ. ಆದರೆ 'ಸರ್ಕಸ್' ನಿರೀಕ್ಷೆಗೂ ಮೀರಿ ಹಿಟ್ ಪಡೆದುಕೊಂಡಿದ್ದು, ಶೆಟ್ರಿಗೆ ನಿರೀಕ್ಷೆಗೂ ಮೀರಿದ ಯಶಸ್ಸನ್ನು ತಂದುಕೊಟ್ಟಿದೆ.
'ಸರ್ಕಸ್' ಸಿನಿಮಾ ಈಗಾಗಲೇ ಅನೇಕ ದಾಖಲೆಗಳನ್ನು ಬರೆದಿದೆ. ಈ ತುಳು ಚಿತ್ರ ಕರ್ನಾಟಕ ಮಾತ್ರವಲ್ಲದೇ, ಅಂತಾರಾಜ್ಯ ಮತ್ತು ವಿದೇಶಗಳಲ್ಲೂ ಪ್ರದರ್ಶನ ಕಂಡಿದೆ. ಮಸ್ಕತ್, ಕತಾರ್, ಬಹರೈನ್ ಸೇರಿದಂತೆ ಅನೇಕ ದೇಶಗಳಲ್ಲಿ ಸರ್ಕಸ್ ಬಿಡುಗಡೆಯಾಗಿ ಸಕ್ಸಸ್ ಆಗಿದೆ. ಅಲ್ಲಿರುವ ತುಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಸರ್ಕಸ್ ಎಂಬ ತುಳು ಸಿನಿಮಾ ಕಿರುತೆರೆಯಲ್ಲೂ ಪ್ರಸಾರವಾಗಲಿದೆ. ಈ ಮೂಲಕ ಸರ್ಕಸ್ ಮತ್ತೊಂದು ಯಶಸ್ಸು ಪಡೆದುಕೊಂಡಿದೆ.
ಇದನ್ನೂ ಓದಿ: ಸೊಗಸುಗಾತಿಯ ಬಣ್ಣಿಸಲು ಮಾಡ್ಬೇಕು 'ಸರ್ಕಸ್'... 'ತುಳು'ವಪ್ಪೆನ ಬಾಲೆ ರಚನಾ ರೈ
ಹೌದು, ಎಲ್ಲೆಡೆ ಭಾರೀ ಸದ್ದು ಮಾಡಿದ್ದ 'ಸರ್ಕಸ್' ಸಿನಿಮಾ ಪುಟ್ಟ ಪರದೆ ಮೇಲೆ ಹಂಗಾಮ ಮಾಡಲು ಬರುತ್ತಿದೆ. ಈ ಹಿಟ್ ಚಿತ್ರವನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಲು ಸ್ಟಾರ್ ಸುವರ್ಣ ವಾಹಿನಿ ಮುಂದೆ ಬಂದಿದೆ. 'ಸರ್ಕಸ್' ಸಿನಿಮಾ ಪ್ರೈಮ್ ಟೈಮ್ನಲ್ಲಿ ಪ್ರಸಾರವಾಗಲಿದೆ. ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಸೆಪ್ಟಂಬರ್ 10, ಭಾನುವಾರ ಅಂದರೆ ನಾಳೆ ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೊದಲ ತುಳು ಚಿತ್ರ ಇದಾಗಿದೆ.
ಚಿತ್ರತಂಡ ಹೀಗಿದೆ.. ತುಳು ಸಿನಿಮಾ ರಂಗದಲ್ಲಿ ಅತಿ ದೊಡ್ಡ ಸೂಪರ್ ಹಿಟ್ ಚಿತ್ರ 'ಗಿರಿಗಿಟ್' ಬಳಿಕ ರೂಪೇಶ್ ಶೆಟ್ಟಿ ನಿರ್ದೇಶಿಸಿರುವ 2ನೇ ಚಿತ್ರ ಸರ್ಕಸ್. ಗಿರಿಗಿಟ್ಗೆ ಸಂಭಾಷಣೆ ಬರೆದ ಪ್ರಸನ್ನ ಶೆಟ್ಟಿ ಬೈಲೂರು ಈ ಸಿನಿಮಾಕ್ಕೂ ಸಂಭಾಷಣೆ ಬರೆದಿದ್ದಾರೆ. ಸಲಗ ಖ್ಯಾತಿಯ ಯಶ್ ಶೆಟ್ಟಿ ಸರ್ಕಸ್ ಮೂಲಕ ತುಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಯುವ ಪ್ರತಿಭೆ ರಚನಾ ರೈ ನಾಯಕಿಯಾಗಿ ಮಿಂಚಿದ್ದಾರೆ.
ಚಿತ್ರದಲ್ಲಿ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ನಿತೇಶ್ ಶೆಟ್ಟಿ ಎಕ್ಕಾರ್, ರೂಪಾ ವರ್ಕಾಡಿ ಹಾಗು ಪಂಚಮಿ ಭೋಜರಾಜ್ ಇದ್ದಾರೆ. ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಲಾಂಛನದಡಿಯಲ್ಲಿ ಸರ್ಕಸ್ ತಯಾರಾಗಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾವರ ನಿರ್ಮಿಸಿದ್ದಾರೆ. ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ನಿರಂಜನ ದಾಸ್ ಕ್ಯಾಮರಾ ವರ್ಕ್, ರಾಹುಲ್ ವಶಿಷ್ಠ ಸಂಕಲನ, ಲೋಯ್ ಅವರ ಸಂಗೀತ ಚಿತ್ರಕ್ಕಿದೆ.
ಇದನ್ನೂ ಓದಿ: 'ಸರ್ಕಸ್' ಮಾಡಿ ಸಕ್ಸಸ್ ಆದ್ರು ರೂಪೇಶ್ ಶೆಟ್ಟಿ: ಇಂದಿನಿಂದ ವಿದೇಶದಲ್ಲೂ ತುಳುಸಿನಿಮಾ ಹವಾ!