ಅಭಿನಯ ಚಕ್ರವರ್ತಿ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುವ 'ಕನ್ನಡ ಬಿಗ್ ಬಾಸ್' ಖ್ಯಾತಿಯ ರೂಪೇಶ್ ಶೆಟ್ಟಿ ಮುಖ್ಯಭೂಮಿಕೆಯ 'ಅಧಿಪತ್ರ' ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಬಂಡೆ ಮಹಾಕಾಳಿ ದೇವಿಯ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಧುಮುಕ್ಕಿದ್ದ ಚಿತ್ರತಂಡವೀಗ ಕುಂದಾಪುರದ ಕೆರಾಡಿ ಭಾಗದಲ್ಲಿ ಚಿತ್ರೀಕರಣ ನಡೆಸುತ್ತಿದೆ. ಈಗಾಗಲೇ 10 ದಿನಗಳ ಶೂಟಿಂಗ್ ಪೂರ್ಣಗೊಂಡಿದೆ. ನಾಯಕ ನಟ ರೂಪೇಶ್ ಶೆಟ್ಟಿ ಖಾಕಿ ಖದರ್ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಫೋಟೋಗಳನ್ನು ಇತ್ತೀಚೆಗೆ ಸ್ವತಃ ರೂಪೇಶ್ ಶೆಟ್ಟಿ ಅವರೇ ಹಂಚಿಕೊಂಡಿದ್ದರು.
'ಅಧಿಪತ್ರ' ಸಿನಿಮಾದಲ್ಲಿ ಬ್ಯುಸಿ.... ಈಗಾಗಲೇ ತುಳು ಸಿನಿಮಾರಂಗದಲ್ಲಿ ಹೆಸರು ಮಾಡಿರುವ ರೂಪೇಶ್ ಶೆಟ್ಟಿ ಅವರಿಗೆ ಸಿನಿಮಾ ಸಂಬಂಧ ಸಾಕಷ್ಟು ಅನುಭವ ಇದೆ. ಸಿನಿಮಾದ ನಾನಾ ವಿಭಾಗಳಲ್ಲಿ ಕೆಲಸ ಮಾಡಿದ್ದಾರೆ. ನಟನಾಗಿ, ನಿರ್ದೇಶಕನಾಗಿ ನೆಲೆ ಕಂಡು ಕೊಂಡಿದ್ದಾರೆ. ಬಿಗ್ ಬಾಸ್ಗೆ ಕಾಲಿಟ್ಟ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಬಿಗ್ ಬಾಸ್ ಗೆದ್ದ ಬಳಿಕ ತುಳು ಭಾಷೆಯ 'ಸರ್ಕಸ್' ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದರು. ಈ ಸಿನಿಮಾದಿಂದ ನಟನಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಕನ್ನಡದಲ್ಲಿ ಸ್ವಲ್ಪ ತಡವಾಗಿ ಆದರೂ ಪರವಾಗಿಲ್ಲ, ಒಂದೊಳ್ಳೆ ಕಥೆಯ ಮೂಲಕ, ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಬೇಕು ಎಂಬುದು ರೂಪೇಶ್ ಶೆಟ್ಟಿ ಅವರ ಉದ್ದೇಶ ಆಗಿತ್ತು. ಈಗಾಗಲೇ ಕನ್ನಡ ಪ್ರೇಕ್ಷಕರಿಗೂ ಪರಿಚಯವಾಗಿರುವ ರೂಪೇಶ್ ಶೆಟ್ಟಿ ಸದ್ಯ 'ಅಧಿಪತ್ರ' ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.
ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ, ಕಿರುತೆರೆ ರಿಯಾಲಿಟಿ ಶೋಗಳಲ್ಲಿಯೂ ಮಿಂಚು ಹರಿಸಿ ಇದೀಗ ನೇರವಾಗಿ ಸಿನಿಮಾ ನಾಯಕಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ರೂಪೇಶ್ ಶೆಟ್ಟಿ ಅಧಿಪತ್ರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಕೆಲ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಚಯನ್ ಶೆಟ್ಟಿ, ಅಧಿಪತ್ರ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಕೆಆರ್ ಸಿನಿಕಂಬೈನ್ಸ್ ಬ್ಯಾನರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ.
ಇದನ್ನೂ ಓದಿ: 'ಉಗ್ರಂ' ಸಿನಿಮಾ ಕಥೆಯಂತಿದೆ 'ಸಲಾರ್' ಟ್ರೇಲರ್ ಎಂದ ಪ್ರೇಕ್ಷಕರು
ರೂಪೇಶ್ ಶೆಟ್ಟಿ ಪೋಸ್ಟ್: ಇತ್ತೀಚೆಗಷ್ಟೇ ತಮ್ಮ ಖಾಕಿ ಖದರ್ನ ಫೋಟೋಗಳನ್ನು ಹಂಚಿಕೊಂಡಿದ್ದ ರೂಪೇಶ್ ಶೆಟ್ಟಿ, ''ಅಧಿಪತ್ರ ಚಿತ್ರದಲ್ಲಿ ಅತ್ರೇಯನ ಪಯಣ ಶುರುವಾಗಿದೆ, ಆದಷ್ಟು ಬೇಗ ಭೇಟಿಯಾಗೋಣ, ನಿಮ್ಮ ಪ್ರೀತಿ, ಪ್ರೋತ್ಸಾಹ, ಹಾಗೂ ಆಶೀರ್ವಾದ ಸದಾ ಇರಲಿ'' ಎಂದು ಬರೆದುಕೊಂಡಿದ್ದರು. ಅಭಿಮಾನಿಗಳು ನಟನಿಗೆ ಶುಭ ಹಾರೈಸಿದ್ದರು.
ಇದನ್ನೂ ಓದಿ: ನಾನು ಟ್ರೆಂಡ್ ನೋಡಿಲ್ಲ, ಮಧ್ಯಪ್ರದೇಶ ಮತದಾರರ ಮೇಲೆ ನಂಬಿಕೆ ಇದೆ: ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್