ಸ್ಯಾಂಡಲ್ ವುಡ್ನಲ್ಲಿ ಹೆಡ್ ಬುಷ್ ಸಿನಿಮಾ ವಿವಾದದ ಬಳಿಕ ನಿರ್ದೇಶಕ ರವೀಂದ್ರ ವಂಶಿ ನಿರ್ದೇಶನದ ಮಠ ಚಿತ್ರ ಈಗ ಹಿಂದೂ ಸ್ವಾಮೀಜಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಿರ್ದೇಶಕ ಗುರು ಪ್ರಸಾದ್ ಹಾಗೂ ರಮೇಶ್ ಭಟ್, ತಬಲ ನಾಣಿ ಅಭಿನಯಿಸಿರುವ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿತ್ತು. ಈ ಟ್ರೇಲರ್ನಲ್ಲಿ ಹಿಂದೂ ಸ್ವಾಮಿಗಳ ಬಗ್ಗೆ ಬಹಳ ತಾತ್ಸಾರ ರೀತಿಯಲ್ಲಿ ತೋರಿಸಲಾಗಿದೆ ಎಂದು ಕಾಳಿ ಮಠದ ರಿಷಿ ಕುಮಾರ್ ಸ್ವಾಮೀಜಿ ಗರಂ ಆಗಿದ್ದಾರೆ.
ಮೌಲ್ವಿಗಳ ಬಗ್ಗೆ ಸಿನಿಮಾ ಮಾಡಲಿ, ಚರ್ಚ್ ಫಾದರ್ಗಳ ಬಗ್ಗೆ ಸಿನಿಮಾ ಮಾಡಲಿ. ಆದರೆ ಹಿಂದೂ ಸ್ವಾಮಿಗಳ ಬಗ್ಗೆ ಸಿನಿಮಾ ಮಾಡಿ ಕಾಸು ಮಾಡಬೇಡಿ. ಈ ಸಿನಿಮಾ ರಿಲೀಸ್ ಆಗದಂತೆ ನೋಡಿಕೊಳ್ಳಿ ಎಂದು ಸ್ವಾಮೀಜಿಗಳಿಗೆ ರಿಷಿ ಕುಮಾರ್ ಮನವಿ ಮಾಡಿದ್ದಾರೆ. ಅಲ್ಲದೇ ಸಿನಿಮಾವನ್ನು ಸ್ವಾಮೀಜಿಗಳಿಗೆ ತೋರಿಸಿ ಆಮೇಲೆ ರಿಲೀಸ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಹಿಂದೂ ಮಠ ಹಾಗೂ ಸ್ವಾಮೀಜಿಗಳ ಬಗ್ಗೆ ತಾತ್ಸಾರ ಹೆಚ್ಚಾಗುತ್ತಿದೆ. ಕಲಾವಿದರ ಮೂಲಕ ಮಠಗಳ ಬಗ್ಗೆ ತಪ್ಪು ಹೇಳಿಕೆಗಳನ್ನ ಹೇಳಿಸುತ್ತಿದ್ಧಾರೆ. ಇತ್ತೀಚೆಗೆ ಬಿಡುಗಡೆಯಾದ ಕಾಂತಾರ ಸಿನಿಮಾ ನೋಡಿ ರಿಷಬ್ ಕಾಲಿಗೆ ಬಿದ್ದು ಬನ್ನಿ ಎಂದು ನಿರ್ದೇಶಕರ ವಿರುದ್ಧ ಕಿಡಿಕಾರಿದ್ದಾರೆ.
ಸಾವಿರ ಮಠಗಳ ಕಥೆ ಅಂತಾ ಹೇಳಿದ್ದೀರಾ. ಅದು ಯಾವ ಯಾವ ಮಠಗಳು?, ಯಾವ ಯಾವ ಸ್ವಾಮಿಗಳು ಅಂತಾ ಪಟ್ಟಿ ಕೊಡಿ. ನೀವು ಅಂದುಕೊಂಡಂತೆ ಎಲ್ಲಾ ಮಠಗಳಲ್ಲಿ ಕೆಟ್ಟ ಸಂಪ್ರದಾಯ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪುಟಾಣಿ ಸಫಾರಿ, ವರ್ಣಮಯ, ವಾಸಂತಿ ನಲಿದಾಗ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ರವೀಂದ್ರ ವಂಶಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಫಿಲಾಸಫಿಕಲ್ ಹಾಗೂ ಕಾಮಿಡಿ ಮಿಶ್ರಿತ ಕಥಾಹಂದರ ಸಿನಿಮಾದಲ್ಲಿದೆ. ಕರ್ನಾಟಕದಲ್ಲಿರುವ ಮಠಗಳ ಬಗ್ಗೆ ಹಾಗೂ ಅಲ್ಲಿ ನಡೆದ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ರವೀಂದ್ರ ವಂಶಿ ಚಿತ್ರಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ಸಂತೋಷ್ ದಾವಣಗೆರೆ ನಾಯಕ ನಟನಾಗಿ ನಟಿಸಿದ್ದಾರೆ. ಸಾಧುಕೋಕಿಲ, ರಮೇಶ್ ಭಟ್, ತಬಲ ನಾಣಿ, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ಧನ್, ರಾಜು ತಾಳಿಕೋಟೆ, ಮಂಡ್ಯ ರಮೇಶ್, ಗುರುಪ್ರಸಾದ್, ಬಿರಾದರ್ ಒಳಗೊಂಡ ತಾರಾಗಣವಿದೆ. ನ. 18 ರಂದು ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ: 'ಮಠ' ಟ್ರೈಲರ್ ಬಿಡುಗಡೆ.. ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್