ಅಯೋಧ್ಯೆಯಲ್ಲಿ 'ರಾಮಮಂದಿರ' ಉದ್ಘಾಟನೆಗೆ ಸಮಯ ಸಮೀಪಿಸುತ್ತಿದೆ. 2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ದೇವಸ್ಥಾನದ ಟ್ರಸ್ಟ್ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳು ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈಗಾಗಲೇ ದೇಶದ ಅನೇಕ ಗಣ್ಯರಿಗೆ ಆಹ್ವಾನ ಕಳುಹಿಸಿದೆ. ಚಿತ್ರರಂಗದ ಹಲವು ಗಣ್ಯರಿಗೂ ಆಹ್ವಾನ ನೀಡಲಾಗಿದೆ. ಈ ಸಾಲಿನಲ್ಲಿ ಸಲಾರ್ ಮೂಲಕ ಸಖತ್ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಪ್ರಭಾಸ್, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ರಾಕಿಂಗ್ ಸ್ಟಾರ್ ಯಶ್ ಕೂಡ ಇದ್ದಾರೆ.
ಕಲಾವಿದರಿಗೆ ಆಹ್ವಾನ: ಬಾಲಿವುಡ್ ದಿಗ್ಗಜರಾದ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ಅನುಪಮ್ ಖೇರ್, ಅಕ್ಷಯ್ ಕುಮಾರ್, ಸೌತ್ ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಸಂಜಯ್ ಲೀಲಾ ಬನ್ಸಾಲಿ, ಮೋಹನ್ ಲಾಲ್, ಧನುಷ್, ರಿಷಬ್ ಶೆಟ್ಟಿ ಅವರನ್ನು ಈಗಾಗಲೇ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಇತ್ತೀಚೆಗೆ, ಟ್ರಸ್ಟ್ ಇನ್ನೂ ಕೆಲ ಚಲನಚಿತ್ರ ನಟರನ್ನು ಆಹ್ವಾನಿಸಿದೆ. ರಣ್ಬೀರ್ ಕಪೂರ್, ಆಲಿಯಾ ಭಟ್, ಅಜಯ್ ದೇವಗನ್, ಸನ್ನಿ ಡಿಯೋಲ್, ಟೈಗರ್ ಶ್ರಾಫ್, ಜಾಕಿ ಶ್ರಾಫ್, ಆಯುಷ್ಮಾನ್ ಖುರಾನಾ, ಪ್ರಭಾಸ್, ಕೆಜಿಎಫ್ ಖ್ಯಾತಿಯ ಯಶ್ ಕೂಡ ಈ ಪಟ್ಟಿಯಲ್ಲಿದ್ದಾರೆ.
ಕ್ರಿಕೆಟಿಗರಿಗೆ ಆಹ್ವಾನ: ಈ ಶುಭ ಸಮಾರಂಭಕ್ಕೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗಿದೆ. ಟ್ರಸ್ಟ್ ಕ್ರಿಕೆಟಿಗರಿಗೂ ಆಹ್ವಾನ ನೀಡಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರನ್ನು ಈಗಾಗಲೇ ಆಹ್ವಾನಿಸಲಾಗಿದೆ. ಇವರಲ್ಲದೇ, ಪ್ರಸಿದ್ಧ ಟಿವಿ ಸೀರಿಯಲ್ 'ರಾಮಾಯಣ'ದಲ್ಲಿ ರಾಮ ಮತ್ತು ಸೀತೆ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್, ದೀಪಿಕಾ ಚಿಖ್ಲಿಯಾ, ಪ್ರಮುಖ ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ ಸೇರಿದಂತೆ ದೇಶದ ನ್ಯಾಯಾಧೀಶರುಗಳು, ವಿಜ್ಞಾನಿಗಳು, ಬರಹಗಾರರು ಮತ್ತು ಕವಿಗಳಿಗೂ ಆಹ್ವಾನ ಕಳುಹಿಸಲಾಗಿದೆ.
ಇದನ್ನೂ ಓದಿ: 'ಸಲಾರ್' ಸ್ಪೀಡ್ಗಿಲ್ಲ ಬ್ರೇಕ್: ಕಲೆಕ್ಷನ್ ಕಂಡು ಹುಬ್ಬೇರಿಸಿದ ಪ್ರೇಕ್ಷಕರು!
ಇವರಲ್ಲದೇ ಟ್ರಸ್ಟ್ ಈಗಾಗಲೇ ಸಂತರು, ಪುರೋಹಿತರು, ಧಾರ್ಮಿಕ ಮುಖಂಡರು, ಮಾಜಿ ನಾಗರಿಕ ಸೇವಕರು, ನಿವೃತ್ತ ಸೇನಾ ಅಧಿಕಾರಿಗಳು, ವಕೀಲರು, ಸಂಗೀತಗಾರರು, ವಿವಿಧ ದೇಶಗಳ ಹಿಂದೂ ಕುಟುಂಬಗಳು, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಿಗೆ ಆಹ್ವಾನ ನೀಡಲಾಗಿದೆ. ಸುಮಾರು 15,000 ಜನರಿಗೆ ಅವಕಾಶ ಕಲ್ಪಿಸಲು ಟೆಂಟ್ ಸಿಟಿಯನ್ನು ಸ್ಥಾಪಿಸಲಾಗುತ್ತಿದೆ.
ಇದನ್ನೂ ಓದಿ: 'ಮೇರಿ ಕ್ರಿಸ್ಮಸ್' ಟೈಟಲ್ ಟ್ರ್ಯಾಕ್; ಕತ್ರಿನಾ, ವಿಜಯ್ ಸೇತುಪತಿ ಸಿನಿಮಾ ಶೀಘ್ರದಲ್ಲೇ ತೆರೆಗೆ