ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ 'ಕಾಂತಾರ'. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಕಳೆದ ವರ್ಷ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿ, ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿತ್ತು. ಕರಾವಳಿ ಭಾಗದ ದೈವಾರಾಧನೆ ಕಥೆ ಹೊಂದಿರುವ ಕಾಂತಾರ ಅಪಾರ ಸಂಖ್ಯೆಯ ಅಭಿಮಾನಿಗಳು ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ದಿಗ್ಗಜರಿಂದ ಅಪಾರ ಮೆಚ್ಚುಗೆ ಗಳಿಸಿತ್ತು.
ಕಾಂತಾರ 2 ಚಿತ್ರಕ್ಕೆ ಸಿದ್ಧತೆ: ಸೂಪರ್ ಹಿಟ್ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಎಂದು ಜನಪ್ರಿಯರಾದರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿಯೂ ಹೊರಹೊಮ್ಮಿದ್ದಾರೆ. ಈ ಸಕ್ಸಸ್ ಶೆಟ್ಟಿ ಅವರಿಗೆ ಕಾಂತಾರ 2 ನಿರ್ಮಿಸಲು ಸ್ಫೂರ್ತಿ ನೀಡಿದೆ. ಕಾಂತಾರ 2ಗೆ ಬೇಕಾದ ಎಲ್ಲ ಅಗತ್ಯ ಸಿದ್ಧತೆಗಳು ಈಗ ನಡೆಯುತ್ತಿವೆ.
ತೂಕ ಇಳಿಸಿಕೊಂಡ ನಟ: ರಿಷಬ್ ಶೆಟ್ಟಿ ಆಪ್ತರು ಹೇಳುವಂತೆ, ಕಾಂತಾರ 2 ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಕಥೆ ಮಾಡುವುದರ ಜೊತೆಜೊತೆಗೆ ಪಾತ್ರಕ್ಕೆ ಬೇಕಾದ ಒಂದಿಷ್ಟು ದೈಹಿಕ ಕಸರತ್ತುಗಳನ್ನೂ ಮಾಡುತ್ತಿದ್ದಾರೆ. ಚಿತ್ರಕ್ಕಾಗಿ ಶೆಟ್ಟಿ 11 ಕೆ.ಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಹೌದು, ಕಾಂತಾರ 2 ಚಿತ್ರದಲ್ಲಿನ ಅವರ ಪಾತ್ರಕ್ಕೆ ತೂಕ ಕಡಿಮೆ ಮಾಡಿಕೊಳ್ಳುವ ಅವಶ್ಯಕತೆ ಇದೆಯಂತೆ. ಹೀಗಾಗಿ, ರಿಷಬ್ ಕಳೆದ ಕೆಲ ತಿಂಗಳುಗಳಿಂದ ಡಯಟ್ ಹಾಗೂ ವರ್ಕೌಟ್ ಅಂತಾ ಫಿಟ್ನೆಸ್‌ಗೆ ವಿಶೇಷ ಒತ್ತು ಕೊಡುತ್ತಿದ್ದಾರೆ. ಸುಮಾರು 11 ಕೆ.ಜಿಯಷ್ಟು ತೂಕ ಕಡಿಮೆ ಮಾಡಿಕೊಳ್ಳುವುದರೊಂದಿಗೆ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ನಡೆಸಿದ್ದಾರೆ ಎಂಬ ಮಾಹಿತಿ ನಟನ ಆಪ್ತ ವಲಯದಿಂದ ಕೇಳಿ ಬಂದಿದೆ.
ಬಿಗ್ ಬಜೆಟ್‍ನಲ್ಲಿ ಕಾಂತಾರ 2: 'ಕಾಂತಾರ' ಮೊದಲ ಭಾಗ 16 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣವಾಗಿದೆ. ಆದರೆ, ಬಾಕ್ಸ್ ಆಫೀಸ್‍ನಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಪ್ರೇಕ್ಷಕರು ಮಾತ್ರವಲ್ಲದೇ ಚಿತ್ರರಂಗದವರ ಹುಬ್ಬೇರಿಸಿತ್ತು. ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಕಾಂತಾರ 2 ಸಿನಿಮಾವನ್ನು ಹೊಂಬಾಳೆ ಫಿಲಂಸ್ ದೊಡ್ಡ ಮಟ್ಟದಲ್ಲಿ ನಿರ್ಮಿಸಲು ಮುಂದಾಗಿದೆ. ಇದರ ಬಜೆಟ್ ಮೊದಲ ಚಿತ್ರಕ್ಕಿಂತಲೂ ನಾಲ್ಕೈದು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಸೈಮಾ 2023: ದುಬೈಗೆ ಹಾರಿದ ರಿಷಬ್ ಶೆಟ್ಟಿ ಕಪಲ್ ಕಾಂತಾರ, ಕೆಜಿಎಫ್ 2 ಮೇಲೆ ಬೆಟ್ಟದಷ್ಟು ನಿರೀಕ್ಷೆ
ಯುಗಾದಿ ಹಬ್ಬದ ಸಂದರ್ಭದಲ್ಲಿ ಕಾಂತಾರ 2 ಚಿತ್ರದ ಬರವಣಿಗೆ ಕೆಲಸ ಅಧಿಕೃತವಾಗಿ ಪ್ರಾರಂಭವಾಗಿದೆ. ಈ ಕುರಿತು ಟ್ವೀಟ್ ಮಾಡಿದ್ದ ರಿಷಬ್ ಶೆಟ್ಟಿ, ಚಿತ್ರದ ಕೆಲಸಗಳನ್ನು ಶುರು ಮಾಡಿರುವುದಾಗಿ ಅಧಿಕೃತವಾಗಿ ಘೋಷಿಸಿಸಿದ್ದರು. ಮುಂದಿನ ಕೆಲ ತಿಂಗಳುಗಳ ಕಾಲ ಬರವಣಿಗೆ ಕೆಲಸ ಮುಂದುವರೆಯಲಿದ್ದು, ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ: ಬಾಲಿವುಡ್ ಪವರ್ಫುಲ್ ಕಪಲ್ ಭೇಟಿಯಾದ ಅಫ್ಘನ್ ಕ್ರಿಕೆಟಿಗ: ರಾಲಿಯಾ ಜೊತೆ ರಶೀದ್ ಖಾನ್ ಫೋಟೋ
ಮೊದಲ ಚಿತ್ರದಲ್ಲಿ ನಟಿಸಿದವರ ಪೈಕಿ ಯಾರೆಲ್ಲಾ ಇರಲಿದ್ದಾರೆ? ಹೊಸದಾಗಿ ಯಾರು ಸೇರ್ಪಡೆಯಾಗಲಿದ್ದಾರೆ? ಎಂಬ ವಿಷಯ ಇನ್ನಷ್ಟೇ ಹೊರಬೀಳಬೇಕಿದೆ. ಈ ವರ್ಷದ ಕೊನೆಗೆ ಕಾಂತಾರ 2 ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಂದು ಮತ್ತು ನಾಳೆ ದುಬೈನಲ್ಲಿ ಸೈಮಾ 2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ರಿಷಬ್ ಶೆಟ್ಟಿ ದಂಪತಿ ದುಬೈಗೆ ಪ್ರಯಾಣಿಸಿದ್ದಾರೆ.