ನೇರ ಮಾತುಗಳು, ಬೇಸ್ ವಾಯ್ಸ್ ನಿಂದ ಕನ್ನಡ ಚಿತ್ರರಂಗದಲ್ಲಿ ತನ್ನ ಇಷ್ಟದಂತೆ ಬದುಕಿದ ರೆಬಲ್ ಸ್ಟಾರ್ ಅಂದ್ರೆ ಅದು ಮಂಡ್ಯದ ಗಂಡು ಅಂಬರೀಷ್. ಈ ಮಂಡ್ಯದ ಗಂಡು ಬದುಕಿದ್ದರೆ ಇದೇ ಮೇ ತಿಂಗಳು 29ಕ್ಕೆ 71ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಂಬರೀಷ್ ಸಿನಿಮಾ ಕೆರಿಯರ್ನಲ್ಲಿ ಮಾಸ್ಟರ್ ಪೀಸ್ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಚಿತ್ರ ಮರು ಬಿಡುಗಡೆ ಆಗುತ್ತಿದೆ.
ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ರೆಬಲ್ ಸ್ಟಾರ್ ಅನ್ನುವ ಬಿರುದು ತಂದುಕೊಟ್ಟ ಸಿನಿಮಾ ಯಾವುದು? ಎಂದು ಅಂಬಿ ಅಭಿಮಾನಿಗಳನ್ನು ಥಟ್ ಅಂತ ಹೇಳಿ ಎಂದು ಕೇಳಿದರೆ ಅದು ಅಂತ ಸಿನಿಮಾ ಅಂತಾರೆ. ಹೌದು, ಅಂತ ಸಿನಿಮಾ ಮೂಲಕವೇ ಅಂಬರೀಶ್ ಅವರಿಗೆ ರೆಬಲ್ ಸ್ಟಾರ್ ಅನ್ನುವ ಬಿರುದು ಬಂದಿತ್ತು. ಈ ಸಿನಿಮಾ ರಿಲೀಸ್ ಆಗಿ ಇದೀಗ 42 ವರ್ಷಗಳೇ ಕಳೆದಿವೆ. ಆದರೂ ಈ ಸಿನಿಮಾದ ಕ್ರೇಜ್ ಇನ್ನು ಹಾಗೇ ಇದೆ.
ಅಂಬರೀಶ್ ಅಂದ ಕೂಡಲೇ 'ಅಂತ' ಸಿನಿಮಾ ಕಣ್ಮುಂದೆ ಬರುತ್ತದೆ. 80 ರ ದಶಕದಲ್ಲಿ ಅಷ್ಟೊಂದು ಪ್ರಭಾವ ಬೀರಿರೋ ಈ ಚಿತ್ರದಲ್ಲಿ ಅಂಬರೀಶ್ ಡಬಲ್ ರೋಲ್ ಮಾಡಿದ್ದರು. ಅದನ್ನು ಕಂಡು ಜನ ತುಂಬಾ ಇಷ್ಟಪಟ್ಟಿದ್ದರು. ಅದರಲ್ಲೂ ವಿಲನ್ ಪಾತ್ರದ ಅಂಬಿ ರೋಲ್‌ನ ಕನ್ವರ್ ಲಾಲ್ ಡೈಲಾಗ್ ಈಗಲೂ ವಿಶೇಷವಾಗಿಯೇ ಎಲ್ಲರ ಸೆಳೆಯುತ್ತದೆ.
ಅಂಬರೀಶ್ ಸಿನಿ ಜೀವನದಲ್ಲಿ ಈ ಸಿನಿಮಾ ತುಂಬಾ ವಿಶೇಷವಾಗಿಯೇ ಇದೆ. ಅಂಬರೀಶ್ ಅವರೇ ಈ ಸಿನಿಮಾ ಬಗ್ಗೆ ಆಗಾಗ ಹೇಳಿಕೊಂಡಿದ್ದರು. ಅಂಬಿ ಚಿತ್ರ ಜೀವನದಲ್ಲಿ ಅಂತ ಎಂಬ ಸಿನಿಮಾ ಬರಲು ಅವರ ಆತ್ಮೀಯ ಗೆಳೆಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರೇ ಕಾರಣ ಅಂತ ಹೇಳಬಹುದು. ಈ ಎವರ್ ಗ್ರೀನ್ ಸಿನಿಮಾವನ್ನು ಇದೀಗಾ ರಾಜೇಂದ್ರಸಿಂಗ್ ಬಾಬು, ನೂತನ ತಂತ್ರಜ್ಞಾನ ಅಳವಡಿಸಿ ಮರು ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಈ ಸಿನಿಮಾದ ಬಗ್ಗೆ ಮಾತನಾಡಿರೋ ರಾಜೇಂದ್ರ ಸಿಂಗ್ ಬಾಬು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
1981 ಇಸವಿಯಲ್ಲಿ ತೆರೆ ಕಂಡ ಈ ಸಿನಿಮಾವನ್ನು ಬೇರೆಯವರು ನಿರ್ದೇಶಿಸಬೇಕಿತ್ತು. ಆದರೆ ಪತ್ರಕರ್ತ ಎಂ.ಬಿ ಸಿಂಗ್ ಅವರ ಮೂಲಕ ಕಥೆ ನನಗೆ ದೊರಕಿತು. ಪರಿಮಳ ಆರ್ಟ್ಸ್ ಮೂಲಕ ಮಾರುತಿ, ವೇಣು ಹಾಗೂ ಕೆ.ಸಿ.ಎನ್ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಚಿತ್ರದ ನಾಯಕ ಅಂಬರೀಶ್ ಹಾಗು ಲಕ್ಷ್ಮೀ ಅವರನ್ನು ನಾಯಕಿ ಎಂದು ತಿರ್ಮಾನಿಸಲಾಯಿತು. ಇವರ ಜೊತೆ ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ.
ಇಡೀ ಚಿತ್ರದ ಚಿತ್ರೀಕರಣ ಮೈಸೂರಿನಲ್ಲೇ ನಡೆದಿದ್ದು, ಹದಿನೆಂಟು ಅದ್ದೂರಿ ಸೆಟ್ ಹಾಕಲಾಗಿತ್ತು. ಅಂತ ಸಿನಿಮಾ ಬಿಡುಗಡೆಯಾದಾಗ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿತ್ತು. ನನಗೆ ತಿಳಿದಿರುವ ಪ್ರಕಾರ ಈ ಚಿತ್ರದ ಸ್ಪೂರ್ತಿಯಿಂದ ಸಾವಿರಾರು ಚಿತ್ರಗಳು ಬಂದಿದೆ. ಅಂತ ಆಗಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ಬೇರೆ ಬೇರೆ ಭಾಷೆಯಲ್ಲಿ ತುಂಬಾ ಬೇಡಿಕೆಯಿತ್ತು. ನನ್ನ ಪ್ರಕಾರ ಚಿತ್ರದ ನಿಜವಾದ ಹೀರೋ ಕಥೆ. ಆ ಕಥೆ ಚೆನ್ನಾಗಿತ್ತು ಎಂದರೆ ಯಶಸ್ಸು ಖಂಡಿತ. ಇಂತಹ ಅದ್ಭುತ ಅಂತ ಸಿನಿಮಾ ಮತ್ತೊಮ್ಮೆ ಇದೇ ತಿಂಗಳ ಮೇ 26 ಮರು ಬಿಡುಗಡೆಯಾಗುತ್ತಿದೆ ಎಂದು ರಾಜೇಂದ್ರಸಿಂಗ್ ಬಾಬು ಹೇಳಿದರು.
ಬಳಿಕ ಮಾತನಾಡಿದ ನಿರ್ಮಾಪಕ ವೇಣು, ಸಿನಿಮಾವನ್ನು ಜಯಣ್ಣ ಫಿಲಂಸ್ ಅವರು ಬಿಡುಗಡೆ ಮಾಡುತ್ತಿದ್ದು, 35 ಎಂಎಂ ನಿಂದ 70 ಎಂಎಂ ಮಾಡಲಾಗಿದೆ. ಸೌಂಡ್, ಕಲರಿಂಗ್ ಎಲ್ಲವನ್ನೂ ಈಗಿನ ರೀತಿಗೆ ಬದಲಿಸಲಾಗಿದೆ. ಇದೇ ಮೇ 29, ಅಂಬರೀಶ್ 71ನೇ ಹುಟ್ಟುಹಬ್ಬ ಇರುವುದರಿಂದ ಈ ಸಂದರ್ಭದಲ್ಲಿ ಮೇ 26 ರಂದು ಅಂತ ಚಿತ್ರವನ್ನು 70 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗುತ್ತಿದೆ ಎಂದರು.
ಇದನ್ನೂ ಓದಿ : ಸ್ಟಾರ್ ಚಿನ್ಹೆಯೇ ಚಿತ್ರದ ಟೈಟಲ್: ವಿಭಿನ್ನ ಪ್ರಯತ್ನಕ್ಕೆ ಸಿಕ್ತು ಶಾಸಕ ರವಿ ಸುಬ್ರಮಣ್ಯ ಸಪೋರ್ಟ್