ಕಲೆಗೆ ಭಾಷೆಯ ಹಂಗಿಲ್ಲ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಂದ ಮೇಲಂತೂ ಸಿನಿಮಾಗಳು ಭಾಷೆಯ ಗಡಿ ದಾಟಿವೆ. ಬಹು ಭಾಷೆಯ ಸಿನಿಮಾಗಳು ಎಲ್ಲೆಡೆ ತೆರೆ ಕಾಣುತ್ತಿವೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳು ಡಬ್ ಆಗಿ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ. ಅದರಂತೆ ಇದೀಗ ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಸಿನಿಮಾವನ್ನು ಜಾಕ್ ಮಂಜು ತಮ್ಮದೇ ಶಾಲಿನಿ ಆರ್ಟ್ ಬ್ಯಾನರ್ ಅಡಿ ರಿಲೀಸ್ ಮಾಡುತ್ತಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 'ರಾಯರು ಬಂದರು ಮಾವನ ಮನೆಗೆ' ಚಿತ್ರತಂಡ ಭಾಗಿಯಾಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ನಿರ್ಮಾಪಕರು ಹಾಗೂ ವಿತರಕರು ಆಗಿರುವ ಜಾಕ್ ಮಂಜು ಮಾತನಾಡಿ, ನಾವು ಕನ್ನಡ ಸಿನಿಮಾಗಳನ್ನು ಮಾಡಿ, ಅವನ್ನು ಅನ್ಯ ಭಾಷೆಗೆ ಡಬ್ ಮಾಡಿ, ಬೇರೆ ಕಡೆ ಹೋಗಿ ರಿಲೀಸ್ ಮಾಡಿದ ಬಹಳಷ್ಟು ಸಿನಿಮಾಗಳು ಗೆದ್ದು ಇಂದು ಕನ್ನಡದ ಗೌರವ ಹೆಚ್ಚಿದೆ. ಕನ್ನಡ ಸಿನಿಮಾಗಳಿಗೆ ದೇಶದ ಮೂಲೆ ಮೂಲೆಗಳಲ್ಲಿ ಗೌರವ ಸಿಕ್ಕಿದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಟ್ರೆಂಡ್ ಜೋರಾಗಿದೆ. ಅದೇ ರೀತಿ, ಒಂದು ಗುಜರಾತಿ ಸಿನಿಮಾ ಮಾಡಿ, ಆ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿ ಇಲ್ಲಿ ರಿಲೀಸ್ ಮಾಡಲು ಬಂದಿದ್ದಾರೆ. ಅವರಿಗೂ ಅದೇ ರೀತಿ ಸ್ವಾಗತವನ್ನು ಕನ್ನಡಿಗರು ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ.
ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಈ ಒಂದು ಸಿನಿಮಾ ಸಕ್ಸಸ್ ಆದರೆ, ಇತರ ಚಿತ್ರತಂಡಗಳು ಇದೇ ರೀತಿ ಡಬ್ ಮಾಡಿ ನಮ್ಮ ಕರ್ನಾಟಕದಲ್ಲಿ ರಿಲೀಸ್ ಮಾಡುತ್ತಾರೆ. ಕನ್ನಡಿಗರಿಗೆ ಬೇರೆ ರಾಜ್ಯಗಳ ಸಿನಿಮಾ ನೋಡುವ ಅವಕಾಶ ಸಿಗುತ್ತದೆ. ಥಿಯೇಟರ್ಗಳು ಮುಚ್ಚುವಂತಹ ಪರಿಸ್ಥಿತಿ ಬಂದಿದೆ, ಒಂದು ವೇಳೆ ಚಿತ್ರಮಂದಿರಗಳು ಮುಚ್ಚಿದರೆ, ಥಿಯೇಟರ್ನಲ್ಲಿ ಸಿನಿಮಾ ನೋಡಬೇಕೆಂದರೂ ನಿಮಗೆ ಆ ಅವಕಾಶ ಸಿಗಲ್ಲ, ಯಾವ ಹೀರೋಗೂ ಕೆಲಸ ಇರಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮಾತು ಆರಂಭಿಸಿದ ನಾಯಕ ತುಷಾರ್ ಸಾಧು, ಇದೊಂದು ಅದ್ಭುತ ಅನುಭವ. ನಾನು ಬೆಂಗಳೂರಿಗೆ 2ನೇ ಬಾರಿ ಬಂದಿದ್ದೇನೆ. ಜಾಕ್ ಮಂಜು ಸರ್ ನಮಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: 'The Trial' ಸೀರಿಸ್ನಲ್ಲಿ ಕಾಜೋಲ್: ಪ್ರಚಾರಕ್ಕಾಗಿ 'ಸೋಷಿಯಲ್ ಮೀಡಿಯಾದಿಂದ ಬ್ರೇಕ್' ಗಿಮಿಕ್
ಒಂದೇ ರೀತಿಯ ಗುಣಗಳಿರುವ ಜೋಡಿ ಪ್ರೀತಿಸಿ ಮದುವೆಯಾಗುತ್ತಾರೆ. ಮದುವೆಯಾದ ಹುಡುಗಿ ಗಂಡನ ಮನೆಗೆ ಬರುವುದು ಸಾಮಾನ್ಯ ವಿಷಯ. ಆದ್ರೆ ಹುಡುಗ ಮನೆ ಅಳಿಯನಾಗಿ ಹೋಗುವುದು ಅಪರೂಪ. ಇಲ್ಲಿ ಮನೆ ಅಳಿಯನಾಗಿ ಹೋಗುವ ನಾಯಕನ ವ್ಯಥೆ ಕಥೆ ಸುತ್ತ ಇಡೀ ಸಿನಿಮಾ ಸಾಗುತ್ತದೆ.
ರತ್ನಪುರ, ಜಿತಿ ಲೇ ಜಿಂದಗಿ ಎಂಬ ಎರಡು ಹಿಟ್ ಚಿತ್ರ ಕೊಟ್ಟಿರುವ ವಿಫುಲ್ ಶರ್ಮಾ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗಿದ್ದು, ಶೈಲೇಶ್ ಧಮೇಲಿಯಾ, ಅನಿಲ್ ಸಂಘವಿ, ಭರತ್ ಮಿಸ್ತ್ರೀ ಬಂಡವಾಳ ಹೂಡಿದ್ದಾರೆ. ಸಾಧುತುರ್ಷಾ, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಶಾಂತ್ ಬರೋಟ್, ಜಯ್ ಪಾಂಡ್ಯ ಮತ್ತು ಜೈಮಿನಿ ತ್ರಿವೇದಿ ಇತರರು ತಾರಾ ಬಳಗದಲ್ಲಿದ್ದಾರೆ. ಕೌಟುಂಬಿಕ ಕಥಾಹಂದರವುಳ್ಳ 'ರಾಯರು ಬಂದರು ಮಾವನ ಮನೆಗೆ' ಸಿನಿಮಾ ಜುಲೈ 7ರಂದು ಕನ್ನಡ ಪ್ರೇಕ್ಷಕರ ಎದುರು ಬರಲಿದೆ.
ಇದನ್ನೂ ಓದಿ: HBD Balakrishna: 'ಭಗವಂತ ಕೇಸರಿ' ಟೀಸರ್ ರಿಲೀಸ್, ಬಾಲಯ್ಯ ರಗಡ್ ಲುಕ್ಗೆ ಫ್ಯಾನ್ಸ್ ಫಿದಾ