ಮರ್ಕೆಚ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (Marrakech International Film Festival) ಬಾಲಿವುಡ್ ತಾರೆ ರಣ್ವೀರ್ ಸಿಂಗ್ ಭಾಗಿಯಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ. ಎಟೊಯಿಲ್ ಡಿ'ಓರ್ ಪ್ರಶಸ್ತಿ ( Etoile d'Or award) ಪಡೆದ ಗಲ್ಲಿಭಾಯ್ ವೇದಿಕೆಯಲ್ಲಿ ನೃತ್ಯ ಮಾಡಿ ಗಣ್ಯರ ಗಮನ ಸೆಳೆದಿದ್ದಾರೆ.
ಮಾಹಿತಿ ಪ್ರಕಾರ, ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ, ರಣ್ವೀರ್ ಸಿಂಗ್ ಅದ್ಭುತ ನೃತ್ಯ ಮಾಡಿದ್ದಾರೆ. ಬಳಿಕ ನಟನಿಗೆ ಮರ್ಕೆಚ್‌ನ ಎಟೊಯಿಲ್ ಡಿ'ಒರ್ ಟ್ರೋಫಿಯನ್ನು ನೀಡಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು, "ನಾನು ನನ್ನ ಸುತ್ತಲಿನ ಪ್ರಪಂಚವನ್ನು ನೋಡಿದಾಗ, ಅದು ಅತ್ಯಂತ ಕರಾಳ ಅವಧಿ ಎನಿಸಿತು. ನಾನು ಎಲ್ಲಾ ರೀತಿಯ ನೋವು ಮತ್ತು ಸಂಕಟಗಳನ್ನು ನೋಡಿದ್ದೇನೆ. ನನ್ನ ಸಾಮರ್ಥ್ಯದಲ್ಲಿ, ಮನೋರಂಜನಾಕಾರನಾಗಿ ನಾನು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಜನರ ಹೊರೆಯನ್ನು ಹಗುರಗೊಳಿಸುವುದು, ನಾನು ಆ ಕೆಲಸವನ್ನು ಮಾಡುತ್ತಿದ್ದೇನೆಂದು ನಂಬಿದ್ದೇನೆ" ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದ ನಂತರ ಅವರು ಮರ್ಕೆಚ್‌ನ ಪ್ರಸಿದ್ಧ ಜೆಮಾ ಎಲ್ ಎಫ್‌ನಾ ಸ್ಕ್ವೇರ್‌ಗೆ ತೆರಳಿದರು. ಅಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ರಣ್ವೀರ್ ಅಭಿನಯದ 'ಬಾಜಿರಾವ್ ಮಸ್ತಾನಿ' ಚಿತ್ರವನ್ನು ಪ್ರದರ್ಶಿಸಲಾಯಿತು. ಅಲ್ಲಿ 'ಗಲ್ಲಿ ಬಾಯ್' ರ್ಯಾಪ್ಗೆ ಮತ್ತೊಮ್ಮೆ ಹೆಜ್ಜೆ ಹಾಕಿದರು.
ಇದನ್ನೂ ಓದಿ: ಬಾಲಿವುಡ್ ಸೂಪರ್ಸ್ಟಾರ್ ರಣ್ವೀರ್ ಸಿಂಗ್ಗೆ ಅಂತಾರಾಷ್ಟ್ರೀಯ ''ಡಿ'ಓರ್'' ಪ್ರಶಸ್ತಿ
ಮರ್ಕೆಚ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಈ ಹಿಂದೆ ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಸೇರಿದಂತೆ ಭಾರತೀಯ ತಾರೆಯರನ್ನು ಗೌರವಿಸಿದೆ. 2012ರಲ್ಲಿ ಭಾರತೀಯ ಚಿತ್ರರಂಗದ 100 ವರ್ಷಗಳ ಸಾಧನೆಯನ್ನು ಗುರುತಿಸಿ ಗೌರವಿಸಿದೆ.