ರಾಣಿ ಮುಖರ್ಜಿ.... ಬಹು ಸಮಯದಿಂದ ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ನಟಿ. ಹಿಂದಿ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಮಿಂಚಿದ್ದ ಇವರು ಸದ್ಯ ಕೆಲ ಸೆಲೆಕ್ಟೆಡ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಚಿತ್ರದಲ್ಲಿ ಕೊನೆ ಬಾರಿಗೆ ಕಾಣಿಸಿಕೊಂಡ ರಾಣಿ ಮುಖರ್ಜಿ ಇದೀಗ ತಮ್ಮ ಗರ್ಭಪಾತದ ಬಗ್ಗೆ ಬಹಿರಂಗಪಡಿಸಿದ್ದಾರೆ.
ನಟಿಯ ಭಾವನಾತ್ಮಕ ಪ್ರಯಾಣ... ಗರ್ಭದಲ್ಲಿದ್ದ ಐದು ತಿಂಗಳ ಮಗು ಗರ್ಭಪಾತದ ಮೂಲಕ ಮೃತಪಟ್ಟಿದ್ದು, ಭಾವನಾತ್ಮಕ ವಿಷಯಗಳನ್ನು ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಬಹಿರಂಗಪಡಿಸಿದ್ದಾರೆ. ಇಂತಹ ಕಠಿಣ ವಿಷಯವನ್ನು ಇದೇ ಮೊದಲ ಬಾರಿಗೆ ನಟಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.
ಕೋವಿಡ್ ಹಿನ್ನೆಲೆ ಗರ್ಭಪಾತ: ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಗರ್ಭಪಾತ ಸಂಭವಿಸಿತು ಎಂದು ರಾಣಿ ಮುಖರ್ಜಿ ಬಹಿರಂಗಪಡಿಸಿದ್ದಾರೆ. ಸವಾಲಿನ ಸಂದರ್ಭದ ಹೊರತಾಯೂ, ತಮ್ಮ ಕೊನೆಯ ಚಿತ್ರ ಪ್ರಚಾರ ಮಾಡುವ ವೇಳೆ, ವೈಯಕ್ತಿಕ ವಿಚಾರವನ್ನು ಹಂಚಿಕೊಳ್ಳದಿರಲು ನಿರ್ಧರಿಸಿದರು. ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಪ್ರಮೋಶನ್ ವೇಳೆ ಈ ಕಠಿಣ ವಿಚಾರವನ್ನು ಬಹಿರಂಗಪಡಿಸಿದರೆ, ಅದು ತಮ್ಮ ಸಿನಿಮಾದತ್ತ ಗಮನ ಸೆಳೆಯುವ ಒಂದು ಪ್ರಯತ್ನ ಎಂದು ಜನರು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದರು. ಇದೀಗ ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ತಮ್ಮ ಭಾವನಾತ್ಮಕ ಪ್ರಯಾಣದ ಬಗ್ಗೆ ಬಹಿರಂಗಪಡಿಸಿದ್ದಾರೆ.
ಸಂಭವನೀಯ ತಪ್ಪು ತಿಳಿವಳಿಕೆ ತಪ್ಪಿಸಲು ಈವರೆಗೆ ಮಾತನಾಡಿರಲಿಲ್ಲ... ''ಇದೇ ಮೊದಲ ಬಾರಿಗೆ ನನ್ನ ಗರ್ಭಪಾತದ ಬಗ್ಗೆ ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿದ್ದೇನೆ. ಏಕೆಂದರೆ ಪ್ರಸ್ತುತ ಜಗತ್ತಿನಲ್ಲಿ ವೈಯಕ್ತಿಕ ಅಂಶಗಳನ್ನು ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಹಾಗಾಗಿ ಸಿನಿಮಾ ಪ್ರಮೋಶನ್ ವೇಳೆ ಸಂಭವನೀಯ ತಪ್ಪು ತಿಳಿವಳಿಕೆಗಳನ್ನು ತಪ್ಪಿಸುವ ಸಲುವಾಗಿ ಈ ವಿಚಾರದ ಬಗ್ಗೆ ಮಾತನಾಡಲು ನಿರ್ಧರಿಸಿದ್ದೆ'' ಎಂದು ರಾಣಿ ಮುಖರ್ಜಿ ತಿಳಿಸಿದ್ದಾರೆ.
6 ವರ್ಷಗಳ ಬಳಿಕ ಎರಡನೇ ಮಗುವಿಗಾಗಿ ಗರ್ಭದಾರಣೆ: ನಿರ್ಮಾಪಕ ಆದಿತ್ಯಾ ಚೋಪ್ರಾ ಅವರನ್ನು ವಿವಾಹವಾಗಿ ಸುಖ ಸಂಸಾರ ನಡೆಸುತ್ತಿರುವ ರಾಣಿ ಮುಖರ್ಜಿ, ಫಿಲ್ಮ್ ಫೆಸ್ಟಿವಲ್ನಲ್ಲಿ ತಮ್ಮ ವೈಯಕ್ತಿಕ ಪ್ರಯಾಣವನ್ನು ತೆರೆದಿಟ್ಟರು. 2020 ಕೋವಿಡ್ ಸಂದರ್ಭ ಇಂತಹ ಒಂದು ದುರ್ಘಟನೆ ನಡೆದಿದೆ. ಮದುವೆಯಾಗಿ ಆರು ವರ್ಷಗಳ ಬಳಿಕ ಎರಡನೇ ಮಗುವಿಗಾಗಿ ಗರ್ಭ ಧರಿಸಲಾಗಿತ್ತು. ಆದರೆ ಗರ್ಭಾವಸ್ಥೆಯ ಐದನೇ ತಿಂಗಳ ಸಂದರ್ಭ ತಾನು ಮಗುವನ್ನು ಕಳೆದುಕೊಂಡೆ ಎಂದು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಅಭಿನಯದ ಓಎಂಜಿ 2 ಬಿಡುಗಡೆ: ಗದರ್ 2 ಜೊತೆ ಪೈಪೋಟಿ
ಗರ್ಭಪಾತ ಆದ ಕೇವಲ ಹತ್ತೇ ದಿನಗಳ ನಂತರ ನಟಿ ರಾಣಿ ಮುಖರ್ಜಿ ಅವರಿಗೆ ನಿರ್ಮಾಪಕ ನಿಖಿಲ್ ಅಡ್ವಾಣಿ ಅವರಿಂದ ಫೋನ್ ಕರೆ ಬಂದಿತು. ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಚಿತ್ರಕ್ಕಾಗಿ ನಟಿಯನ್ನು ಸಂಪರ್ಕಿಸಿದರು. ಈ ಚಿತ್ರಕಥೆ ಮಕ್ಕಳಿಗಾಗಿ ತಾಯಿ ಅಧಿಕಾರಿಗಳೊಡನೆ ಹೋರಾಟ ನಡೆಸುವ ಕಥೆ ಆಗಿದೆ. ಆ ಕಠಿಣ ಸಂದರ್ಭ ಇಂತಹ ಒಂದು ಪಾತ್ರ ಸಿಗುವುದು ಪೂರ್ವಾಪೇಕ್ಷಿತವಲ್ಲದಿದ್ದರೂ ಕೂಡ, ಕೆಲವೊಮ್ಮೆ ಸಿನಿಮಾಗಳು, ಪಾತ್ರಗಳು ವೈಯಕ್ತಿಕ ಸನ್ನಿವೇಶಗಳಿಂದಾಗಿ ಗಾಢವಾಗಿ ಪ್ರತಿಧ್ವನಿಸುತ್ತದೆ ಎಂದು ನಟಿ ತಿಳಿಸಿದ್ದಾರೆ.
ಇದನ್ನೂ ಓದಿ: 'ಸತ್ಯಕ್ಕೆ ದೂರವಾದ ವಿಚಾರ': ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ವದಂತಿ ಬಗ್ಗೆ ನಟ ವಿಶಾಲ್ ಸ್ಪಷ್ಟನೆ
ಇನ್ನೂ ನಟಿಯ ಕೊನೆ ಸಿನಿಮಾದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಈ ವಿಷಯ ನಟಿ ಸಾರ್ವಜನಿಕವಾಗಿ ಬಹಿರಂಗಪಡಿಸುವವರೆಗೂ ತಿಳಿದಿಲ್ಲ. ಸಂದರ್ಶನ ಸಂದರ್ಭ ರಾಣಿ ಭಾವನಾತ್ಮಕ ಪ್ರಯಾಣವನ್ನು ಪ್ರಪಂಚಕ್ಕೆ ತೆರೆದಿಟ್ಟಿದ್ದು, ಅವರ ಪ್ರತಿಕ್ರಿಯೆ ಆಶ್ಚರ್ಯವಾಗಿರುತ್ತದೆ. ರಾಣಿ ಆದಿತ್ಯಾ ದಂಪತಿಗೆ ಸದ್ಯ ಎಂಟು ವರ್ಷದ ಅದಿರಾ (ಮೊದಲ ಮಗು) ಎಂಬ ಮಗಳಿದ್ದಾಳೆ.