ರವಿಚಂದ್ರನ್ ಅವರ 'ರವಿ ಬೋಪಣ್ಣ' ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಈಗ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಭರ್ಜರಿ ಎಂಟ್ರಿ ಕೊಡ್ತಾ ಇದ್ದಾರೆ. ಈ ಚಿತ್ರಕ್ಕೆ ಅಜಾಗ್ರತ ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ನೆರವೇರಿತು. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ.ಎಂ. ರತ್ನಂ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.
ಹೆಸರಾಂತ ವಿತರಕ ಟ್ಯಾಗೋರ್ ಮಧು ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ. ಇನ್ನು ಸೈಕಲಾಜಿಕಲ್ ಥ್ರಿಲ್ಲರ್ ಕತೆಯಿರುವ ಈ ಸಿನಿಮಾದಲ್ಲಿ ಬಾಲಿವುಡ್ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ನಾಯಕನಾಗಿ ನಟಿಸುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರಕ್ಕೆ ಬೇರೆ ಬೇರೆ ಭಾಷೆಯ ಚಿತ್ರರಂಗದಿಂದ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಚಿತ್ರರಂಗದಿಂದ ಸ್ಪರ್ಶ ರೇಖಾ, ದೇವರಾಜ್, ಸುಚೇಂದ್ರ ಪ್ರಸಾದ್, ವಿನಯ ಪ್ರಸಾದ್, ಚಿತ್ರ ಶೆಣೈ, ತೆಲುಗಿನ ರಾವ್ ರಮೇಶ್, ಪುಷ್ಪ ಸುನೀಲ್, ರಾಘವೇಂದ್ರ ಶ್ರವಣ್, ತಮಿಳಿನ ಆದಿತ್ಯ ಮೆನನ್, ಸಮುದ್ರ ಕಣಿ, ಜಯಪ್ರಕಾಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಎಂ. ಶಶಿಧರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸೈಕಲಾಜಿಕಲ್ ಚಿತ್ರಕ್ಕೆ ರವಿರಾಜ್ ಬಂಡವಾಳ ಹೂಡುತ್ತಿದ್ದಾರೆ.
ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸಾಮಾನ್ಯವಾಗಿ ಚಿತ್ರವನ್ನು ಒಂದು ಅಥವಾ ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಆದರೆ ಈ ಚಿತ್ರ ಏಳು ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಡಬ್ ಮಾಡದೆ, ಆಯಾ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ಮಾಡಲಾಗುವುದು ಈ ಚಿತ್ರದ ವಿಶೇಷವಾಗಿದೆ.
ಇದನ್ನೂ ಓದಿ: ಮಾಲಿವುಡ್ನಲ್ಲಿ ಹೊಸ ದಾಖಲೆ ಬರೆದ '2018 ಎವ್ರಿವನ್ ಈಸ್ ಎ ಹೀರೋ' ಸಿನಿಮಾ