ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ಸಾವು ಸಂಭವಿಸಿ ಇಂದಿಗೆ ಎರಡು ವರ್ಷವಾಗುತ್ತಿದೆ. ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸುವ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದವರು ಅಪ್ಪು. ಹಾಗಾಗಿ ಇಂದಿಗೂ ಅಭಿಮಾನಿಗಳ ಮನದಲ್ಲಿ ಅವರು ಅಚ್ಚಳಿಯದ ನೆನಪಾಗಿದ್ದಾರೆ.
ಪುಣ್ಯಸ್ಮರಣೆ ವಿಧಿವಿಧಾನಕ್ಕೆ ಸಿದ್ಧತೆ: ಅಪ್ಪು ಪುಣ್ಯಸ್ಮರಣೆಗೆ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಬಳಿ ಶನಿವಾರವೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರಾಜ್ ಕುಟುಂಬಸ್ಥರು ಈ ಸಮಾಧಿ ನಿರ್ಮಿಸಿದ್ದಾರೆ. ಬಿಳಿ ಮಾರ್ಬಲ್ನಲ್ಲಿ ಸಮಾಧಿ ನಿರ್ಮಿಸಲಾಗಿದೆ. ಇದರ ಮೇಲೆ ನಗುಮೊಗದ ಪುನೀತ್ ಫೋಟೋ ನೋಡಬಹುದು. ಸಮಾಧಿ ಸುತ್ತಲ ಪ್ರದೇಶಕ್ಕೆ ಬಿಳಿ ಬಣ್ಣದ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ. ಅಣ್ಣಾವ್ರ ಸ್ಮಾರಕದಂತೆಯೇ ಪುತ್ರನ ಸ್ಮಾರಕವನ್ನೂ ರಚಿಸಲಾಗಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಮಕ್ಕಳು ಸಮಾಧಿ ಬಳಿ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್, ಶಿವ ರಾಜ್‌ಕುಮಾರ್ ಸೇರಿದಂತೆ ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಸರತಿ ಸಾಲಿನಲ್ಲಿ ನಿಂತ ಅಭಿಮಾನಿಗಳು: ಡಾ.ರಾಜ್‌ಕುಮಾರ್, ಪಾರ್ವತಮ್ಮ ಹಾಗು ಪುನೀತ್ ರಾಜ್‌ಕುಮಾರ್ ಸಮಾಧಿಗಳನ್ನು ವಿವಿಧ ಹೂಗಳಿಂದ ಶೃಂಗರಿಸಲಾಗಿದೆ. ಪ್ರಾರ್ಥನೆ ಸಲ್ಲಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಸಮಾಧಿಯತ್ತ ಆಗಮಿಸುತ್ತಿದ್ದಾರೆ. ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡುಬಂತು.
ಇದನ್ನೂ ಓದಿ: ಅಪ್ಪು ಮರೆಯಾಗಿ ಇಂದಿಗೆ 2 ವರ್ಷ: ಸಾಮಾಜಿಕ ಕಳಕಳಿಯ ಸಿನಿಮಾಗಳಲ್ಲಿ 'ಗಂಧದ ಗುಡಿ'ಯ 'ರಾಜಕುಮಾರ' ಅಮರ
ಅಭಿಮಾನಿಗಳಿಗೆ ಅನ್ನದಾನ ವ್ಯವಸ್ಥೆ: ಸಮಾಧಿ ದರ್ಶನಕ್ಕೆ ಆಗಮಿಸುವ ಅಭಿಮಾನಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಸುಮಾರು ಒಂದು ಲಕ್ಷ ಜನರಿಗೆ ಪುಲಾವ್, ಮೊಸರುಬಜ್ಜಿ, ಕೇಸರಿ ಬಾತ್ ವಿತರಿಸಲು ಸಿದ್ಧತೆ ನಡೆದಿದೆ. ಹನುಮಂತ ಎಂಬವರ ನೇತೃತ್ವದ 20 ಜನರ ತಂಡದಿಂದ ಅಡುಗೆ ತಯಾರಿಯಾಗಿದೆ. ಇಡೀ ದಿನ ಅನ್ನದಾನದ ವ್ಯವಸ್ಥೆ ಇರಲಿದೆ. ಯುವ ರಾಜ್‌ಕುಮಾರ್ ಇದನ್ನು ನೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಅಪ್ಪು ನಮ್ಮನ್ನಗಲಿ 2 ವರ್ಷ; ರಾಜ್ ಕುಟುಂಬದಿಂದ 'ಪರಮಾತ್ಮ'ನ ಸ್ಮಾರಕ ನಿರ್ಮಾಣ
ಪುನೀತ್ ರಾಜ್‌ಕುಮಾರ್ ನಿವಾಸದಲ್ಲಿ ಪೂಜೆ: ಅಪ್ಪು ನಿವಾಸದಲ್ಲಿ ಸರಳವಾಗಿ ಪೂಜೆ ನಡೆದಿದೆ. ಕುಟುಂಬದವರು, ಆಪ್ತರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ.
'ಗಂಧದ ಗುಡಿ' ಸಿನಿಮಾಗೆ ಒಂದು ವರ್ಷ: ಅಪ್ಪು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಇಂದು ಇಡೀ ದಿನ ರಕ್ತದಾನ, ನೇತ್ರ ತಪಾಸಣೆ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ. ಅಪ್ಪು ಸಿನಿಮಾ ಮತ್ತು ಸಮಾಜ ಸೇವೆಯನ್ನು ಸ್ಮರಿಸಿ, 'ಗಂಧದ ಗುಡಿ'ಯ ವರ್ಷದ ಸಂಭ್ರಮವನ್ನೂ ಆಚರಿಸಲಾಗುತ್ತದೆ. ಅಪ್ಪು ಕನಸಿನ ಯೋಜನೆ 'ಗಂಧದ ಗುಡಿ' ತೆರೆಕಂಡು ಇಂದಿಗೆ ಒಂದು ವರ್ಷವಾಗಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿಶೇಷ ವಿಡಿಯೋ ಅನಾವರಣಗೊಳಿಸಿದ್ದಾರೆ.