ಪುಣೆ (ಮಹರಾಷ್ಟ್ರ): ಇಲ್ಲಿ ಆಯೋಜಿಸಲಾಗಿದ್ದ ದಿಗ್ಗಜ ಸಂಗೀತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮವನ್ನು ಪೊಲೀಸರು ಸಮಯದ ಮಿತಿ ಕಾರಣ ನೀಡಿ ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಸಂಗೀತ ಸಂಜೆಗೆ ಬಂದಿದ್ದ ಸಾವಿರಾರು ಅಭಿಮಾನಿಗಳಿಗೆ ಇದರಿಂದ ನಿರಾಸೆ ಉಂಟಾಯಿತು.
ರಾಜ್‌ಬಹದ್ದೂರ್ ಮಿಲ್ಸ್ ಬಳಿಯ ವಿಶಾಲವಾದ ಬಯಲು ಪ್ರದೇಶದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಆರ್ ರೆಹಮಾನ್ ಅವರ ತಂಡ ಅತ್ಯುತ್ತಮ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸುತ್ತಿತ್ತು. ರೆಹಮಾನ್ ಅವರು ತಮ್ಮ ನಿರ್ದೇಶನದ ಜನಪ್ರಿಯ ಹಿಂದಿ ಹಾಡಾದ ಚಲೆ ಚಯ್ಯಾ, ಚಯ್ಯಾ ಹಾಡುತ್ತಿದ್ದಾಗ, ವೇದಿಕೆ ಮೇಲೆ ಬಂದ ಪೊಲೀಸ್ ಅಧಿಕಾರಿ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಸೂಚಿಸಿದರು.
ಸಾರ್ವಜನಿಕವಾಗಿ ರಾತ್ರಿ 10 ಗಂಟೆಗೆ ಸದ್ದು ಮಾಡುವುದು ನಿಷೇಧವಿರುವ ಕಾರಣ ಪೊಲೀಸ್ ಅಧಿಕಾರಿ ನಿಯಮವನ್ನು ಎಆರ್ ರೆಹಮಾನ್ ಅವರಿಗೆ ತಿಳಿಹೇಳಿದರು. ವೇದಿಕೆಯ ಮೇಲೆಯೇ ಹತ್ತಿ ಬಂದ ಅಧಿಕಾರಿ ರೆಹಮಾನ್ ಜೊತೆ ಮಾತುಕತೆ ನಡೆಸಿದರು. ಇದಕ್ಕೆ ಸಂಗೀತ ನಿರ್ದೇಶಕ ಒಪ್ಪಿಗೆಯನ್ನೂ ಸೂಚಿಸಿದರು. ಇದೇ ವೇಳೆ ವಾದ್ಯಕಾರನೊಬ್ಬ ಅಧಿಕಾರಿಯ ಸೂಚನೆ ಮೀರಿ ನುಡಿಸುತ್ತಿದ್ದಾಗ ಅಲ್ಲಿಗೆ ತೆರಳಿದ ಪೊಲೀಸರು ಎಚ್ಚರಿಕೆ ನೀಡಿದ್ರು.
ಸಮಯದ ಮಿತಿ ದಾಟಿದ್ದರಿಂದ ಪ್ರದರ್ಶನವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಸಂಘಟಕರಿಗೆ ಪೊಲೀಸರು ಆದೇಶಿಸಿದರು. ಸಮಯದ ನಿಯಮಗಳನ್ನು ಉಲ್ಲಂಘಿಸಿ ಮುಂದುವರಿಸಿದರೆ, ಕ್ರಮ ಜರುಗಿಸಬೇಕಾಗುತ್ತದೆ ಎಂದೂ ಇದೇ ವೇಳೆ ಪೊಲೀಸ್ ಅಧಿಕಾರಿ ಎಚ್ಚರಿಸಿದರು.
ಇದರಿಂದ 2 ಗಂಟೆಗಳಿಂದ ನಡೆಯುತ್ತಿದ್ದ ಸಂಗೀತ ರಸಸಂಜೆಯಲ್ಲಿ ಮಿಂದೇಳುತ್ತಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಯಿತು. ಪ್ರದರ್ಶನ ಸ್ಥಗಿತಕ್ಕೆ ಸೂಚಿಸಿದ್ದರಿಂದ ಅಭಿಮಾನಿಗಳು ಕೂಗುತ್ತಲೇ ವಿರೋಧ ವ್ಯಕ್ತಪಡಿಸಿದರು. ಆದರೆ, ಕಾನೂನು ಮೀರಿ ಕಾರ್ಯಕ್ರಮ ನಡೆಸಲು ಸಾಧ್ಯವಿರದ ಕಾರಣ ಸಂಗೀತಗಾರ ರೆಹಮಾನ್ ಮತ್ತು ಆಯೋಜಕರು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದರು.
ರೆಹಮಾನ್ ಅರ್ಜಿ ವಜಾ: ಕೆಲ ದಿನಗಳ ಹಿಂದೆ ಜಿಎಸ್ಟಿ ಪಾವತಿ ಸಂಬಂಧ ಖ್ಯಾತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿತ್ತು. 2013 ರಿಂದ 2017ರವರೆಗೆ ಎ ಆರ್ ರೆಹಮಾಸ್ ಜಿಎಸ್ಟಿ ತೆರಿಗೆ ಪಾವತಿ ಮಾಡಿಲ್ಲ ಎಂದು ಆರೋಪಿಸಿ ಜಿಎಸ್ಟಿ ಆಯುಕ್ತರು, ಸಂಗೀತ ಮಾಂತ್ರಿಕನಿಗೆ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಎಆರ್ ರಹಮಾನ್ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ತಿರಸ್ಕರಿಸಿದೆ.
ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರು 2013 ರಿಂದ 2017ರವರೆಗೆ ತಮ್ಮ ಸಂಗೀತ ಕಾರ್ಯಕ್ರಮಗಳಿಗೆ ಮೂರು ಕಂಪನಿಗಳೊಂದಿಗೆ ಸಹಿ ಹಾಕಿದ್ದು, ಈ ಸಂಬಂಧ ಸೇವಾ ತೆರಿಗೆಯನ್ನು ಪಾವತಿಸಿಲ್ಲ ಎಂದು ಜಿಎಸ್ಟಿ ಆಯುಕ್ತರು ನೋಟಿಸ್ ರವಾನೆ ಮಾಡಿದ್ದರು. ಈ ಸಂಬಂಧ ಮದ್ರಾಸ್ ಹೈಕೋರ್ಟ್ಗೆ ಜಿಎಸ್ಟಿ ಆಯುಕ್ತರು ಮನವಿ ಅರ್ಜಿಯನ್ನೂ ಸಲ್ಲಿಸಿದ್ದರು.
ಇದರ ಆಧಾರದ ಮೇಲೆ ತೆರಿಗೆ ವಂಚನೆ ಮಾಡಿರುವ ಆರೋಪದ ಮೇಲೆ ಎಆರ್ ರೆಹಮಾನ್ಗೆ ನೋಟಿಸ್ ನೀಡಲಾಗಿತ್ತು. ಇನ್ನು ಇದೇ ವೇಳೆ, ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಕುಮಾರ್ ಕೂಡ 1 ಕೋಟಿ 84 ಲಕ್ಷ ರೂ. ಸೇವಾ ತೆರಿಗೆ ಕಟ್ಟುವ ಸಂಬಂಧ ಜಿಎಸ್ಟಿ ಆಯುಕ್ತರು ನೀಡಿದ್ದ ನೋಟಿಸ್ ವಿರುದ್ಧ ಅರ್ಜಿಯನ್ನು ಸಲ್ಲಿಸಿದ್ದರು.
ಇದನ್ನೂ ಓದಿ: ನೀವು ಸಾಕಿದ, ಬೆಳೆಸಿದ ದ್ವಾರಕೀಶ್ ಗಟ್ಟಿಮುಟ್ಟಾಗಿದ್ದೇನೆ.. ಸಾವಿನ ವದಂತಿಗೆ ಕರುನಾಡ ಕುಳ್ಳನ ಪ್ರತಿಕ್ರಿಯೆ