ಬೆಂಗಳೂರು: ಕನ್ನಡ ಚಿತ್ರರಂಗದ ಸ್ಟಾರ್ ನಟ ಸುದೀಪ್ ಮತ್ತು ನಿರ್ಮಾಪಕ ಎನ್ ಎಂ ಕುಮಾರ್ ನಡುವೆ ಮನಸ್ತಾಪ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಕುಮಾರ್ ಆರೋಪಕ್ಕೆ ಪ್ರತಿಯಾಗಿ ಕಿಚ್ಚ ಕ್ರಿಮಿನಲ್ ಡಿಫಾಮೇಷನ್ (ಮಾನನಷ್ಟ) ಮೊಕದ್ದಮೆ ಹೂಡಿದ್ದಾರೆ. ಸಮಸ್ಯೆಯನ್ನು ಕಾನೂನಿನ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ. ಕುಮಾರ್ ಅವರು ಕೆಲ ದಿನಗಳ ಹಿಂದೆ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸುದೀಪ್ ವಿರುದ್ಧ ಆರೋಪ ಮಾಡಿದ್ದರು. ಇದೀಗ ಮತ್ತೆ ಕುಮಾರ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ಕುಳಿತಿದ್ದಾರೆ.
ಈ ವೇಳೆ ಕುಮಾರ್ ಅವರಿಗೆ ನಿರ್ಮಾಪಕ ಪ್ರವೀಣ್ ಕುಮಾರ್, ಎ ಗಣೇಶ್ ಮತ್ತು ಸಂಗಡಿಗರು ಸಾಥ್ ನೀಡಿದ್ದಾರೆ. ಕೆಲ ಹೊತ್ತು ಚೇಂಬರ್ ಮುಂದೆ ಧರಣಿ ಕುಳಿತಿದ್ದ ಕುಮಾರ್ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, "ನನಗೆ ಆಗಿರುವ ಸಮಸ್ಯೆ ಎಲ್ಲರಿಗೂ ಗೊತ್ತಿದೆ. ಫಿಲ್ಮ್ ಚೇಂಬರ್ ಚಿತ್ರರಂಗಕ್ಕೆ ಒಂದು ಮನೆ ಇದ್ದಂತೆ. ಹೀಗಾಗಿ ಇಲ್ಲಿಯೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಬಂದಿದ್ದೇನೆ. ನಾನು ಸುದೀಪ್ ಅವರ ಬಗ್ಗೆ ಎಲ್ಲಿಯೂ ಕೆಟ್ಟದಾಗಿ ಮಾತನಾಡಿಲ್ಲ. ನಮಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂಬುದಷ್ಟೇ ಹೇಳಿದ್ದೀನಿ. ಈ ಸಮಸ್ಯೆಯನ್ನು ಫಿಲ್ಮ್ ಚೇಂಬರ್ನಲ್ಲಿ ಬಗೆಹರಿಸಿಕೊಳ್ಳಬೇಕು ಎಂಬುದೇ ನನ್ನ ಉದ್ದೇಶ" ಎಂದರು.
ಮುಂದುವರೆದು, "ಸಮಸ್ಯೆ ಬಗೆಹರಿಸಿಕೊಳ್ಳುವ ತನಕ ಇಲ್ಲಿಯೇ ಧರಣಿ ಕುಳಿತುಕೊಳ್ಳುತ್ತೇನೆ. ನಾನು ಯಾರ ಸಹಾಯವನ್ನು ಕೇಳಿಲ್ಲ. ನಮ್ಮದು ಏನಿದೆಯೋ ಅದನ್ನು ಕ್ಲಿಯರ್ ಮಾಡಿದ್ರೆ ಸಾಕು. ನಾವು ನಿರ್ಮಾಪಕರು, ಸಾಕಷ್ಟು ಜನರನ್ನು ಬೆಳೆಸಿದ್ದೀವಿ. ಸುದೀಪ್ ಸಭೆಗೆ ಬರಲಿ, ಸಭೆಯ ಮುಂದೆ ಎಲ್ಲಾ ದಾಖಲೆಗಳನ್ನು ನೀಡುತ್ತೇನೆ. ಯಾರಿಗೂ ಅಗೌರವ ಆಗಬಾರದು, ಗೌರವ ಉಳಿಯಬೇಕು. ಮಾಧ್ಯಮದವರ ಮುಂದೆಯೇ ಕೇಳಬೇಕು. ದಾಖಲೆಗಳು ಖಂಡಿತ ಇದೆ ಕೊಡ್ತೀನಿ" ಎಂದು ತಿಳಿಸಿದರು.
ಇದನ್ನೂ ಓದಿ: ನಿರ್ಮಾಪಕ ಕುಮಾರ್ ಅವರಿಂದ ಸುದೀಪ್ ಒಂದು ರೂಪಾಯಿಯನ್ನೂ ಪಡೆದಿಲ್ಲ: ಪ್ರಕರಣದ ಬಗ್ಗೆ ಜಾಕ್ ಮಂಜು ಮಾಹಿತಿ
"ರಾಜಿ ಸಂಧಾನದ ಮಾಡಿಕೊಳ್ಳಲು ನಾವು ತಯಾರಿದ್ದೀವಿ. ಅವರು ಕರೆಯಬೇಕು, ಆದರೆ ನಾವೇ ಕರೆಯುತ್ತೀದ್ದೀವಿ. ಪ್ರೀತಿಯಿಂದ ನಡೆದರೆ ಮಾತ್ರ ವ್ಯವಹಾರ. ಯಾರನ್ನು, ಯಾವುದಕ್ಕೂ ಬಲವಂತ ಮಾಡುವುದಕ್ಕೆ ಆಗಲ್ಲ. ನಮ್ಮಲ್ಲಿರುವ ಹಿರಿಯರು ಅವರಿಗೆ ಮಾರ್ಗದರ್ಶನ ನೀಡಬೇಕು. ಶಿವಣ್ಣ ಭೇಟಿಗೆ ಫಿಲ್ಮ್ ಚೇಂಬರ್ ಅಧ್ಯಕ್ಷರು ಬಂದ ಮೇಲೆ ನಿರ್ಧಾರ ಮಾಡುತ್ತೇವೆ" ಎಂದು ಹೇಳಿದರು.
"ನನ್ನ ಬಳಿ ಮೂರು ದಾಖಲೆಗಳಿವೆ, ನಾಳೆಯೇ ಅದನ್ನ ಕೊಡುತ್ತೇನೆ. ಇದರ ಜೊತೆಗೆ ನಾನು ರಾಜಿ ಸಂಧಾನದ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಸಿದ್ಧನಿದ್ದೇನೆ" ಎಂದು ಇದೇ ವೇಳೆ ತಿಳಿಸಿದರು. ಈ ಸಮಸ್ಯೆ ನಟರಾದ ಶಿವ ರಾಜ್ಕುಮಾರ್ ಹಾಗೂ ರವಿಚಂದ್ರನ್ ಮಧ್ಯಸ್ಥಿಕೆಯಲ್ಲಿ ಬಗೆಹರಿಯುತ್ತಾ ಅಥವಾ ಸುದೀಪ್ ಕಾನೂನು ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರಾ ಅನ್ನೋದು ಕಾದು ನೋಡಬೇಕಿದೆ.
ಇದನ್ನೂ ಓದಿ: ನಿರ್ಮಾಪಕರಿಂದ ಆರೋಪ: ಶಿವಮೊಗ್ಗದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳ ಆಕ್ರೋಶ