ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಅದೃಷ್ಟದ ಜೊತೆಗೆ ಟ್ಯಾಲೆಂಟ್ ಇದ್ರೆ ಯಾರು ಏನು ಬೇಕಾದರೂ ಆಗಬಹುದು ನಟ ಪ್ರಶಾಂತ್ ಸಿದ್ದಿ ಅವರೇ ಸಾಕ್ಷಿ. ನಿರ್ದೇಶಕರಾದ ಯೋಗರಾಜ್ ಭಟ್, ದುನಿಯಾ ಸೂರಿ ಸಿನಿಮಾಗಳ ಖಾಯಂ ಪಾತ್ರದಾರಿ ಪ್ರಶಾಂತ್ ಸಿದ್ದಿ, ಸದ್ಯ ಚಿತ್ರರಂಗದ ಬ್ಯುಸಿ ಸೆಲೆಬ್ರಿಟಿಗಳಲ್ಲಿ ಒಬ್ಬರು. ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಪ್ರಶಾಂತ್, ರಂಗಭೂಮಿ ಹಿನ್ನೆಲೆಯ ಬಹುಮುಖ ಪ್ರತಿಭೆ ಹೌದು. ಇದೀಗ ಅವರು ತಮ್ಮ ಪ್ರತಿಭೆಯ ಮತ್ತೊಂದು ಮುಖವನ್ನ ಪರಿಚಯಿಸಿದ್ದಾರೆ. ಪೃಥ್ವಿ ಅಂಬರ್ ಅಭಿನಯದ ದೇವರಾಜ್ ಪೂಜಾರಿ ನಿರ್ದೇಶನದ 'ಮತ್ಸ್ಯಗಂಧ' ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.
- " class="align-text-top noRightClick twitterSection" data="">
ಹೌದು, ಇತ್ತೀಚೆಗಷ್ಟೇ 'ಮತ್ಸ್ಯಗಂಧ' ಸಿನಿಮಾದ ಭಾಗೀರಥಿ ಎಂಬ ಹಾಡೊಂದನ್ನು ಬಿಡುಗಡೆ ಮಾಡಿದ್ದು ಈ ಹಾಡಿಗೆ ಸಿನಿಪ್ರಿಯರಿಂದ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ. ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯೂಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ನೆಟಿಜನ್ಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಸಿನಿಮಾ ಬಗ್ಗೆ ಕಿರು ಮಾಹಿತಿಯನ್ನು ಹಂಚಿಕೊಂಡಿದ್ದ ಚಿತ್ರ ತಂಡ, ಪ್ರಶಾಂತ್ ಸಿದ್ದಿ ಅವರನ್ನು ಸಂಗೀತ ನಿರ್ದೇಶಕನಾಗಿ ಪರಿಚಯಿಸಿರುವ ಕೆಲಸವನ್ನು ಮಾಡಿತ್ತು.
ವೃತ್ತಿ ಬದುಕಿಗೆ ಹೊಸ ಮೈಲಿಗಲ್ಲು: ಹೊಸ ಜವಾಬ್ದಾರಿ ಬಗ್ಗೆ ಅನುಭವ ಹಂಚಿಕೊಂಡಿರುವ ಪ್ರಶಾಂತ್ ಸಿದ್ದಿ, ತಮ್ಮ ಮನೆ ಪರಿಸರ ಬದುಕೇ ಸಂಗೀತ ನಾಟಕದಿಂದ ಕೂಡಿತ್ತು. ಹುಟ್ಟಿನಿಂದಲೇ ಮೈಯೊಳಗಿದ್ದ ರಿದಮ್ ಮತ್ತು ಅಮ್ಮನ ಹಾಡುಗಾರಿಕೆ ನನ್ನನ್ನು ಇಲ್ಲಿಯವರೆಗೂ ತಂದಿದೆ ಎಂದು ತಮ್ಮ ಸಂಗೀತ ಪ್ರತಿಭೆಯ ಹಿಂದಿನ ವಿಚಾರವನ್ನು ಹಂಚಿಕೊಂಡರು. ಹಾಗೆ 'ಮತ್ಸ್ಯಗಂಧ' ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ, ತಮ್ಮ ವೃತ್ತಿ ಬದುಕಿಗೆ ಹೊಸ ಮೈಲಿಗಲ್ಲಾಗಿ, ಹೊಸ ದಾರಿಯಾಗಲಿದೆ ಎಂದು ಹೇಳಿದರು.
ಕೇಳೋದಕ್ಕೆ ಸಖತ್ ಕ್ಯಾಚಿಯಾಗಿರೋ ಈ ಹಾಡನ್ನು ಪ್ರಶಾಂತ್ ದೇಸಿ ಪೆಪ್ಪಿ ಸ್ಟೈಲಲ್ಲಿ ಕಂಪೋಸ್ ಮಾಡಿದ್ದಾರೆ. ದೇವರಾಜ್ ಪೂಜಾರಿ ಸಾಹಿತ್ಯ ರಚಿಸಿದ್ದು, ಇಂದು ನಾಗರಾಜ್ ಹಾಗೂ ಪ್ರಶಾಂತ್ ಸಿದ್ದಿ ಮತ್ತು ಸಂಗಡಿಗರು ಹಾಡಿದ್ದಾರೆ. ಈ ಹಾಡಲ್ಲಿ ಅಂಜಲಿ ಪಾಂಡೆ ಮೈ ಬಳುಕಿಸಿ, ಕುಲುಕಿಸಿದ್ರೆ, ಪೃಥ್ವಿ ಅಂಬರ್, ನಾಗರಾಜ್ ಬೈಂದೂರು ಜೊತೆಗೆ ಹೆಜ್ಜೆ ಹಾಕಿದ್ದಾರೆ. ಧನಂಜಯ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಸಿನಿಮಾ: ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬಿ.ಎಸ್ ವಿಶ್ವನಾಥ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಹಾಡಿನೊಂದಿಗೆ ಪ್ರಚಾರ ಕಾರ್ಯವನ್ನಾರಂಭಿಸಿರೋ ಚಿತ್ರತಂಡ, ಫೆಬ್ರವರಿ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
ಇದನ್ನೂ ಓದಿ: ಬಹು ನಿರೀಕ್ಷಿತ ಮ್ಯಾಕ್ಸ್ ಚಿತ್ರದಲ್ಲಿ ಕಿಚ್ಚನ ಪಾತ್ರ ರಿವೀಲ್.. ಫಿದಾ ಆದ ಫ್ಯಾನ್ಸ್ !