2014ರಲ್ಲಿ 'ಉಗ್ರಂ' ಮೂಲಕ ನಿರ್ದೇಶಕರಾಗಿ ವೃತ್ತಿಜೀವನ ಆರಂಭಿಸಿದ ಪ್ರಶಾಂತ್ ನೀಲ್ ಸದ್ಯ ಸಲಾರ್ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. 'ಉಗ್ರಂ' ಬಳಿಕ ಮಾಡಿದ್ದು ಮೂರೇ ಸಿನಿಮಾ. ಆದ್ರೆ ಜನಪ್ರಿಯತೆ ಮಾತ್ರ ವರ್ಣನಾತೀತ. ಕೆಜಿಎಫ್ 1, 2 ಮೂಲಕ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರಾಗಿ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಪ್ರಶಾಂತ್ ನೀಲ್ ಸದ್ಯ ಆ್ಯಕ್ಷನ್ ಪ್ಯಾಕ್ಡ್ ಸಲಾರ್ ಸಿನಿಮಾವನ್ನು ಪ್ರೇಕ್ಷಕರೆದುರು ಇಟ್ಟಿದ್ದು, ಜೈಕಾರ ಹಾಕಿಸಿಕೊಳ್ಳುತ್ತಿದ್ದಾರೆ.
'ಕೆಜಿಎಫ್' ಸರಣಿ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಪ್ರಶಾಂತ್ ನೀಲ್ ಸದ್ಯ 'ಸಲಾರ್' ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ರೆಬೆಲ್ ಸ್ಟಾರ್ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಸೇರಿದಂತೆ ಮೊದಲಾದ ತಾರೆಯರಿರುವ ಸಲಾರ್ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟುತ್ತಿದೆ. ಈ ಯಶಸ್ಸಿನ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಡೈರೆಕ್ಚರ್, ತಮ್ಮ ಸಿನಿಮಾವನ್ನು ಬೆಂಬಲಿಸಿದ್ದಕ್ಕೆ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಸಲಾರ್ vs ಡಂಕಿ ಫೈಟ್ ಬಗ್ಗೆ ತಮ್ಮ ಅಸಮಧಾನ ಹೊರಹಾಕಿದ್ದಾರೆ.
''ಕೆಲ ಅಭಿಮಾನಿಗಳು ಇಬ್ಬರು ನಾಯಕರ ಸಿನಿಮಾಗಳ ನಡುವೆ ಪೈಪೋಟಿಗಿಳಿದು ಜಗಳವಾಡುತ್ತಾರೆ. ನಾನು ಅಂಥ ವಿಷಯಗಳನ್ನು ಪ್ರೋತ್ಸಾಹಿಸುವುದಿಲ್ಲ. ಅಂತಹ ವಿಷಯಗಳನ್ನು ಕೇಳಲು ಸಹ ಇಷ್ಟಪಡುವುದಿಲ್ಲ. ಈ ರೀತಿಯ ಟ್ರೆಂಡ್ ಚಿತ್ರರಂಗಕ್ಕೆ ಒಳ್ಳೆಯದಲ್ಲ. ಕಲಾವಿದರು ಒಬ್ಬರಿಗೊಬ್ಬರು ಪೈಪೋಟಿ ನಡೆಸುವುದಿಲ್ಲ. ಎಲ್ಲರೂ ಬಹಳ ಫ್ರೆಂಡ್ಲಿ ಆಗಿದ್ದಾರೆ. ಹಲವರು ಅಂದುಕೊಂಡಂತೆ 'ಸಲಾರ್' ಮತ್ತು 'ಡಂಕಿ' ನಡುವೆ ನಕಾರಾತ್ಮಕ ವಾತಾವರಣವಿರಬೇಕೆಂದು ನಾನು ಎಂದಿಗೂ ಯೋಚಿಸಲಿಲ್ಲ. ಡಂಕಿ ನಿರ್ಮಾಪಕರು ಕೂಡ ನಮ್ಮಂತೆಯೇ ಸಕಾರಾತ್ಮಕವಾಗಿ ಯೋಚಿಸಿರಬೇಕು. ಪ್ರೇಕ್ಷಕರನ್ನು ರಂಜಿಸುವ ಆಸೆ ನಮಗೆಲ್ಲರಿಗೂ ಇದೆ. ಇದು ಇಬ್ಬರ ನಡುವೆ ಪೈಪೋಟಿ ನಡೆಯುವ ಕ್ರಿಕೆಟ್ ಪಂದ್ಯವಲ್ಲ'' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ: ಹಲವು ದಾಖಲೆ ಮುರಿದ 'ಸಲಾರ್'; ₹600 ಕೋಟಿಯತ್ತ ಪ್ರಭಾಸ್ ಸಿನಿಮಾ
ಸಲಾರ್ ಸಿನಿಮಾವನ್ನು ಇನ್ನೂ ಚೆನ್ನಾಗಿ ಪ್ರಚಾರ ಮಾಡಿದರೆ ಒಳ್ಳೆಯದು. ಹಾಗೆ ಮಾಡಿದ್ದರೆ ಇನ್ನಷ್ಟು ಕಲೆಕ್ಷನ್ ಆಗುತ್ತಿತ್ತು ಎಂಬುದಾಗಿಯೂ ತಿಳಿಸಿದ್ದಾರೆ. ಡಂಕಿ ಜೊತೆಗೆ ಬಿಡುಗಡೆ ಆಗದೇ, ನಮ್ಮ ಚಿತ್ರವೊಂದೇ ತೆರೆಕಂಡಿದ್ದರೆ ಅಂಥಹ ಸುದ್ದಿಗಳು ಬರುತ್ತಿರಲಿಲ್ಲ ಎಂದರು.
ಇದನ್ನೂ ಓದಿ: ಚಿತ್ರರಂಗದಲ್ಲಿ 7 ವರ್ಷ ಪೂರೈಸಿದ ರಶ್ಮಿಕಾ ಮಂದಣ್ಣ: 'ಕಿರಿಕ್ ಪಾರ್ಟಿ' ಚೆಲುವೆಯ ಸಿನಿಪಯಣ
ಇನ್ನು ಸಲಾರ್ ಸಿನಿಮಾ ಡಿಸೆಂಬರ್ 22ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿದೆ. ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 550 ಕೋಟಿ ರೂ. ದಾಟಿದ್ದು, 600 ಕೋಟಿಯತ್ತ ದಾಪುಗಾಲು ಹಾಕಿದೆ. ದೇಶೀಯ ಮಾರುಕಟ್ಟೆಯಲ್ಲಿ ಸುಮಾರು 330 ಕೋಟಿ ರೂ. ಕಲೆಕ್ಷನ್ ಮಾಡಿದೆ.