ಹೈದರಾಬಾದ್: ನಟ ಪ್ರಭಾಸ್ ನಾಯಕನಾಗಿ, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಚಿತ್ರ 'ಸಲಾರ್'. ಅದ್ಧೂರಿ ಸಾಹಸ ದೃಶ್ಯಗಳೊಂದಿಗೆ ತಯಾರಾಗುತ್ತಿರುವ ಚಿತ್ರಕ್ಕಾಗಿ ರೆಬೆಲ್ ಸ್ಟಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಲಾರ್ ಮುಂದೂಡಿಕೆಯಾಗುತ್ತದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಕೆಲವು ನೆಟ್ಟಿಗರು ಚಿತ್ರತಂಡವನ್ನು ಟ್ಯಾಗ್ ಮಾಡಿ ಬಿಡುಗಡೆ ವಿಚಾರದಲ್ಲಿ ಸ್ಪಷ್ಟನೆ ನೀಡುವಂತೆಯೂ ಕೋರಿದ್ದರು.
ಆಧಾರವಿಲ್ಲದ ಸುದ್ದಿಗಳನ್ನು ನಂಬಬೇಡಿ. ಸಿನಿಮಾ ಸೆಪ್ಟೆಂಬರ್ 28 ರಂದು ಥಿಯೇಟರ್‌ಗೆ ಬರಲಿದೆ. ಅಪರೂಪದ ಸಿನಿಮಾವನ್ನು ಆನಂದಿಸಲು ಸಿದ್ಧರಾಗಿ ಎಂದು ಸಿನಿಮಾ ತಂಡ ಟ್ವೀಟ್ ಮಾಡಿದೆ. ಪ್ರಭಾಸ್ ಅಭಿಮಾನಿಗಳು ಈ ವಿಷಯವನ್ನು ರಿಟ್ವೀಟ್ ಮಾಡುತ್ತಿದ್ದಾರೆ.
ಮೊನ್ನೆಯಷ್ಟೇ ಕನ್ನಡದ ನಟ ದೇವರಾಜ್ ಸಲಾರ್ ಎರಡು ಭಾಗಗಳಲ್ಲಿ ಬರಲಿದೆ ಎಂದು ಖಚಿತಪಡಿಸಿರುವ ವಿಚಾರ ಗೊತ್ತಿದೆ. ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಅವರು, 'ಸಲಾರ್' ಮೊದಲ ಭಾಗಕ್ಕಿಂತ ಎರಡನೇ ಭಾಗದಲ್ಲಿ ನನ್ನ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಚಿತ್ರ ಎರಡು ಭಾಗಗಳಲ್ಲಿ ಬರುವುದು ಸ್ಪಷ್ಟ ಎಂದು ತಿಳಿಸಿದ್ದರು.
ಸದ್ಯ ಅಂತಿಮ ಹಂತದಲ್ಲಿರುವ ಚಿತ್ರದಲ್ಲಿ ಪ್ರಭಾಸ್ಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಹೊಂಬಾಳೆ ಫಿಲಂಸ್ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಮತ್ತೊಂದೆಡೆ, ಪ್ರಭಾಸ್ ಅಭಿನಯದ 'ಆದಿಪುರುಷ' (ಆದಿಪುರುಷ) ಟ್ರೇಲರ್ ಉತ್ತಮವಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇವುಗಳ ಹೊರತಾಗಿ ಪ್ರಭಾಸ್ 'ಪ್ರಾಜೆಕ್ಟ್ ಕೆ'ಯಲ್ಲೂ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಪಠಾಣ್ ನಿರ್ದೇಶಕರ ಸಿನಿಮಾದಲ್ಲಿ ಮೊದಲ ಬಾರಿ ಪ್ರಭಾಸ್ ಮತ್ತು ಹೃತಿಕ್ ರೋಶನ್?
ಪ್ರಶಾಂತ್-ಪ್ರಭಾಸ್ ಮತ್ತೊಂದು ಸಿನಿಮಾ: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಮತ್ತು ಸ್ಯಾಂಡಲ್ವುಡ್ನ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಶೂಟಿಂಗ್ ಭರದಿಂದ ಸಾಗುತ್ತಿದೆ. ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾವಾಗಿ ಮೂಡಿಬರಲಿದ್ದು, ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಸಿನಿಪ್ರಿಯರು ಸಾಕಷ್ಟು ಕಾತರತೆಯಿಂದ ಕಾಯುತ್ತಿರುವ ಈ ಹೊತ್ತಿನಲ್ಲಿ ನಿರ್ಮಾಪಕ ದಿಲ್ ರಾಜು ಸ್ವಾರಸ್ಯಕರ ಸುದ್ದಿ ಬಹಿರಂಗಪಡಿಸಿದ್ದರು. ಈ ಹಿಂದೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬಹುನಿರೀಕ್ಷಿತ 'ಸಲಾರ್' ನಂತರ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಶೀಘ್ರದಲ್ಲೇ ಮತ್ತೊಂದು ಚಿತ್ರ ಮಾಡಲಿದ್ದಾರೆ ಎಂದು ತಿಳಿಸಿದ್ದರು.
"ಶೀಘ್ರದಲ್ಲೇ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಪೌರಾಣಿಕ ಚಿತ್ರವೊಂದು ಮೂಡಿ ಬರಲಿದೆ. ಸ್ಕ್ರಿಪ್ಟ್ ಕೂಡಾ ರೆಡಿ ಆಗಿದೆ. ಆದರೆ ಸದ್ಯ ಇಬ್ಬರೂ 'ಸಲಾರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ನಂತರ ಪ್ರಶಾಂತ್ ನೀಲ್ ಅವರು ಜೂ.ಎನ್ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ. ಬಳಿಕ ಪ್ರಭಾಸ್ ಸಿನಿಮಾ ಶುರುವಾಗಲಿದೆ. ಪ್ರಸ್ತುತ ಈ ಚಿತ್ರವು ಮಾತುಕತೆಯ ಹಂತದಲ್ಲಿದೆ ಎಂದು ಹೇಳಿದ್ದರು.
ಈ ಸುದ್ದಿ ಕೇಳಿ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಕನ್ನಡದ ಪ್ರಶಾಂತ್ ನೀಲ್ ಸ್ಟಾರ್ ನಟರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಹೆಮ್ಮೆಯ ವಿಷಯ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು.