ಉಪೇಂದ್ರ ಮತ್ತೆ ಬಾ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಓಂ ಸಿನಿಮಾ ಖ್ಯಾತಿಯ ಪ್ರೇಮಾ ಈ ಚಿತ್ರದ ಆದ್ಮಲೇ ಒಳ್ಳೆ ಕಥೆಯ ಸಿನಿಮಾ ಬಂದರೆ ಮಾಡ್ತೀನಿ ಅಂದಿದ್ದರು. ಇದೀಗ ವಿಭಿನ್ನ ಟೈಟಲ್ ಇರುವ ವರಾಹಚಕ್ರಂ ಎಂಬ ಸಂದೇಶ ಕೊಡುವ ಚಿತ್ರದಲ್ಲಿ ನಟಿ ಪ್ರೇಮಾ ಅಭಿನಯಿಸುವ ಮೂಲಕ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ. ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ದಶಕದ ಹಿಂದೆ ಮನಸುಗಳ ಮಾತು ಮಧುರ, ಯುಗಪುರುಷ, ಗೌರೀಪುತ್ರ ಚಿತ್ರಗಳನ್ನು ನಿರ್ದೇಶಿಸಿದ್ದ ಮಂಜು ಮಸ್ಕಲ್ ಮಟ್ಟಿ ಅವರು ಬಹಳ ವರ್ಷಗಳ ನಂತರ, ಆಧುನಿಕ ಪಂಚ ಪಾಂಡವರನ್ನಿಟ್ಟುಕೊಂಡು, ವಿಭಿನ್ನ ಕಥಾನಕದೊಂದಿಗೆ ಚಿತ್ರ ನಿರ್ದೇಶನ ಮಾಡಲಿದ್ದಾರೆ. ವರಾಹಚಕ್ರಂ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಈ ಹೊಸ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ, ನಾನು ನಟ ಆಗಬೇಕೆಂದೇ ಫಿಲಂ ಇಂಡಸ್ಟ್ರಿಗೆ ಬಂದವನು. ನಿರ್ಮಾಪಕನಾಗಿ ಒಂದಷ್ಟು ಕಳೆದುಕೊಂಡೆ, ಸಿನಿಮಾ ವಿತರಣೆ ಕೂಡ ಮಾಡಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ರೂಲ್ಸ್, ಸಂಸ್ಕೃತಿಯ ಕಗ್ಗೊಲೆ, ದೌರ್ಜನ್ಯಗಳಿಗೆ ಫುಲ್ ಸ್ಟಾಪ್ ಕೊಟ್ಟು ಅವೇರ್ನೆಸ್ ನೀಡುವ ಕಥೆ ಇಟ್ಟುಕೊಂಡು ವರಾಹಚಕ್ರಂ ಕಥೆ ಹೆಣೆದಿದ್ದೇನೆ. ಇದರಲ್ಲಿ ಸಾಕಷ್ಟು ಒಳ್ಳೆಯ ಅಂಶಗಳಿವೆ. ಪ್ರೇಮಾ ಅವರ ನಮ್ಮೂರ ಮಂದಾರ ಹೂವೆ ಸಿನಿಮಾ ನೋಡಿ ನಾನು ನಿರ್ದೇಶಕನಾಗಬೇಕೆಂದು ಕನಸು ಕಂಡಿದ್ದೆ. ಈಗ ಅವರನ್ನು ಹಾಕಿಕೊಂಡೇ ಸಿನಿಮಾ ಮಾಡುತ್ತಿದ್ದೇನೆ. ಅವರದು ಗಟ್ಟಿಯಾದ ಪಾತ್ರ, ಆ್ಯಕ್ಷನ್ ಕೂಡ ಮಾಡ್ತಿದ್ದಾರೆ. ಸಾಯಿಕುಮಾರ್ ಅವರೂ ಸಹ ಕಥೆ ಕೇಳಿ ಒಪ್ಪಿದರು. ಹಿಂದೆ ನನ್ನ ಯುಗಪುರುಷ ಸಿನಿಮಾದಲ್ಲಿ ನಟಿಸಿದ್ದ ಅರ್ಜುನ್ ದೇವ ನಾಯಕನಾಗಿ ನಟಿಸುತ್ತಿದ್ದಾರೆ. ಅವರ ಜೊತೆ ರಾಣಾ, ಇಮ್ರಾನ್ ಷರೀಫ್, ಆರ್ಯನ್, ಪ್ರತೀಕ್ ಗೌಡ ಪಂಚಪಾಂಡವರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರದ ಬಗ್ಗೆ ವಿವರಿಸಿದರು.
ಬಳಿಕ ನಟಿ ಪ್ರೇಮಾ ಮಾತನಾಡಿ, ನಿರ್ದೇಶಕರು ಮನೆಗೆ ಬಂದು ಈ ಕಥೆ ಹೇಳಿದರು. ಪೂರ್ತಿ ಕಥೆ ಕೇಳಿದಾಗ ಇನ್ಸ್ಪಿರೇಷನ್ ಆಯ್ತು. ಪಾತ್ರವೂ ನಾನು ಹಿಂದೆ ಮಾಡಿದ ಎಲ್ಲಾ ಪಾತ್ರಗಳಿಗಿಂತ ವಿಭಿನ್ನವಾಗಿದೆ ಅನಿಸಿತು. ಹಾಗಾಗಿ ಒಪ್ಪಿದೆ. ಈ ಸಿನಿಮಾ ನಿರ್ದೇಶಕರ ಕನಸು ಎಂದು ಹೇಳಿದರು.
ಈ ಚಿತ್ರಕ್ಕೆ ಸಾಹಿತ್ಯ, ಸಂಗೀತ ಸಂಯೋಜನೆಯ ಜೊತೆ ಪ್ರಮುಖ ಪಾತ್ರವನ್ನೂ ಸಹ ಮಾಡುತ್ತಿರುವ ಡಾ. ವಿ. ನಾಗೇಂದ್ರ ಪ್ರಸಾದ್ ಮಾತನಾಡಿ, ಮಂಜು ಬಹಳ ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದುಕೊಂಡು ಸಿನಿಮಾ ಪರಿಭಾಷೆ ಅರಿತಿದ್ದಾರೆ. ಒಂದಷ್ಟು ಜನ ಸ್ನೇಹಿತರನ್ನು ಸೇರಿಸಿಕೊಂಡು, ಸಮಾಜದಲ್ಲಿ ನಡೆಯುತ್ತಿರುವ ಅನೇಕ ವಿಷಯಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಕಥೆ ಆ್ಯಕ್ಷನ್, ಫ್ಯಾಮಿಲಿ ಜೊತೆಗೆ ಎಂಟರ್ಟೈನಿಂಗ್ ಆಗಿದೆ. ಬಹಳ ದಿನಗಳ ನಂತರ ಈ ಚಿತ್ರಕ್ಕೆ ಡೈಲಾಗ್ ಕೂಡ ಬರೆಯುತ್ತಿದ್ದೇನೆ. ಈ ಸಿನಿಮಾಗೋಸ್ಕರ ಎರಡು ತಿಂಗಳನ್ನು ಮೀಸಲಿಟ್ಟಿದ್ದೇನೆ. ಅಲ್ಲದೆ ನನ್ನ ಮೊದಲ ಚಿತ್ರ ಗಾಜಿನ ಮನೆಯಲ್ಲಿ ಅಭಿನಯಿಸಿದ್ದ ಪ್ರೇಮಾ ಅವರಿಗೆ ಡೈಲಾಗ್ ಬರೆಯಲು ಖುಷಿ ಅನ್ಸುತ್ತೆ. ಚಿತ್ರದಲ್ಲಿ ತುಂಬಾ ಸ್ಟ್ರೆಂತ್ ಇರುವಂಥ ಪಾತ್ರವನ್ನೂ ಸಹ ಮಾಡುತ್ತಿದ್ದೇನೆ ಎಂದರು.
ಈ ಚಿತ್ರವನ್ನು ಮನ್ವಂತರಿ ಮೂವಿ ಮೇಕರ್ಸ್ ಅಡಿಯಲ್ಲಿ ನಿರ್ಮಾಪಕ ಅರವಿಂದ್ ಗಗನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಶರತ್ ಕುಮಾರ್ ಜಿ. ಅವರ ಛಾಯಾಗ್ರಹಣ, ಭಾರ್ಗವ ಅವರ ಸಂಕಲನವಿದೆ. ಲಾವಣ್ಯ ಗ್ರೂಪ್, ನಾಗಭೂಷಣ್ ಎಂ. ರಾವ್, ಮಂಜುನಾಥ್ ಸಿ. ಗೌಡ್ರು, ಕೆ.ಎಸ್.ಜೈ ಸುರೇಶ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಬೆಂಗಳೂರು, ನೆಲ್ಲೂರು, ಪೊಲ್ಲಾಚ್ಚಿ, ಭಟ್ಕಳ, ಹಿರಿಯೂರು ಸೇರಿ ಹಲವಾರು ಲೊಕೇಶನ್ ಗಳಲ್ಲಿ ವರಾಹಚಕ್ರಂ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದ್ದು, ಸದ್ಯದಲ್ಲೇ ಶೂಟಿಂಗ್ ಶುರು ಆಗಲಿದೆ.
ಇದನ್ನೂ ಓದಿ: 'ರಣಹದ್ದು' ಫಸ್ಟ್ ಲುಕ್ ರಿಲೀಸ್ ಮಾಡಿದ ಜಂಭದ ಹುಡುಗಿ ಪ್ರಿಯಾ ಹಾಸನ್