ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ, ವಿಭಿನ್ನ ಕಥಾಹಂದರವುಳ್ಳ ಸಿನಿಮಾಗಳು ಬರುತ್ತಿವೆ. ಈ ಸಾಲಿನಲ್ಲಿ ಮಾಸ್ ಟೈಟಲ್ ಹೊಂದಿರುವ 'Mr. ನಟ್ಟರ್ ಲಾಲ್' ಸಿನಿಮಾ ಕೂಡ ಒಂದು. ಈ ಹಿಂದೆ ನಂಜುಂಡಿ ಕಲ್ಯಾಣ ಹಾಗೂ ಮಡಮಕ್ಕಿ ಚಿತ್ರಗಳನ್ನು ಮಾಡಿ ಗಮನ ಸೆಳೆದಿದ್ದ ತನುಷ್ ಶಿವಣ್ಣ ಬಹಳ ದಿನಗಳ ಬಳಿಕ ನಟ್ಟರ್ ಲಾಲ್ ಎಂಬ ಶೀರ್ಷಿಕೆಯಿಟ್ಟ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗಿರೋ ನಟ್ಟರ್ ಲಾಲ್ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕುಣಿಗಲ್ ಶಾಸಕರಾದ ರಂಗನಾಥ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ ಹರೀಶ್, ಮಾಸ್ತಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು.
- " class="align-text-top noRightClick twitterSection" data="">
ಮೊದಲಿಗೆ ಮಾತನಾಡಿದ ನಟ, ನಿರ್ಮಾಪಕ ತನುಷ್ ಶಿವಣ್ಣ, ಈ ಸಿನಿಮಾ ಕ್ರಿಮಿನಲ್ ಮಿಥಿಲೇಶ್ ಕುಮಾರ್ ಶ್ರೀವಾತ್ಸವಗೆ ಸಂಬಂಧಪಟ್ಟದ್ದಾಗಿದೆ. ಈತ ಭಾರತದ ಸಾಲವನ್ನೆಲ್ಲ ತೀರಿಸುತ್ತೇನೆಂದು ಹೇಳಿದ್ದನಂತೆ. ಈ ವಿಷಯ ಸೇರಿದಂತೆ ಅನೇಕ ಕುತೂಹಲಕಾರಿ ಅಂಶಗಳು ನಮ್ಮ ಚಿತ್ರದ ಕಥೆಯಲ್ಲಿ ಇರುತ್ತದೆ ಎಂದು ನಿರ್ದೇಶಕ ಲವ ಚಿತ್ರದ ಕಥೆ ಬಗ್ಗೆ ಹೇಳಿದಾಗ, ನನಗೆ ತುಂಬಾ ಇಂಪ್ರೆಸ್ ಆಯ್ತು. ಇಡೀ ತಂಡದ ಸಹಕಾರದಿಂದ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಧರ್ಮವಿಶ್ ಅವರ ಸಾರಥ್ಯದಲ್ಲಿ ರೀರೆಕಾರ್ಡಿಂಗ್ ಅದ್ಭುತವಾಗಿ ಬಂದಿದೆ. ಛಾಯಾಗ್ರಾಹಕ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಸುಂದರವಾಗಿದೆ. ನಿರ್ದೇಶಕ ಲವ ಅವರಂತೂ ಬ್ಯೂಟಿಫುಲ್ ಫಿಲಂ ಮೇಕರ್ ಎಂದು ತಿಳಿಸಿದರು.
ತನುಷ್ ಜೋಡಿಯಾಗಿ ಸೋನಲ್ ಮೊಂಥೆರೋ: ಇನ್ನೂ ತನುಷ್ ಶಿವಣ್ಣ ಜೋಡಿಯಾಗಿ ಸೋನಲ್ ಮೊಂಥೆರೋ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಾನು ಮೊದಲ ಬಾರಿಗೆ ಸೋಶಿಯಲ್ ವರ್ಕರ್ ಪಾತ್ರ ಮಾಡಿದ್ದೇನೆ. ಇಲ್ಲಿ ನನ್ನ ಪಾತ್ರದ ಹೆಸರು ನಂದಿನಿ. ತನುಷ್ ಸಿನಿಮಾ ಬಿಟ್ಟು ಬೇರೇನೂ ಯೋಚಿಸುವವರಲ್ಲ. ಅವರಿಗೆ ಶುಭವಾಗಲಿ. ಇದು ನನ್ನ ಎರಡನೇ ಪ್ಯಾನ್ ಇಂಡಿಯಾ ಸಿನಿಮಾ ಎಂದು ತಿಳಿಸಿದರು.
ನಟ್ಟರ್ ಲಾಲ್ ಕಲಾವಿದರು: ತನುಷ್ ಓರ್ವ ಅತ್ಯುತ್ತಮ ಸ್ನೇಹಿತ. ಈ ಬಾರಿ ಯಶಸ್ಸು ಕಾಣಲೇಬೇಕೆಂದು ನಿರ್ಧರಿಸಿ ಬಹಳ ಪ್ರಯತ್ನ ಹಾಕಿದ್ದಾರೆ. ಇದು ಎಲ್ಲ ವರ್ಗದವರೂ ಇಷ್ಟಪಡುವಂತಹ ಚಿತ್ರ ಎಂದು ನಟ ರಾಜೇಂದ್ರ ಕಾರಂತ್ ಹೇಳಿದರು. ಉಳಿದಂತೆ ಹರಿಣಿ, ವಿಜಯ್ ಚೆಂಡೂರ್, ಕಾಕ್ರೋಚ್ ಸುಧಿ, ಕಾಂತರಾಜ್ ಕಡ್ಡಿಪುಡಿ ಚಿತ್ರದ ಯಶಸ್ವಿ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಇವರಲ್ಲದೇ ಯಶ್ ಶೆಟ್ಟಿ, ರಾಜೇಶ್ ನಟರಂಗ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.
ಹ್ಯಾಕರ್ಸ್ ಕುರಿತ ಚಿತ್ರ: ನಿರ್ದೇಶಕ ವಿ. ಲವ ಮಾತನಾಡಿ, ಈ ಹಿಂದೆ ಅಯೋಧ್ಯಾಪುರ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಈಗ ನಾನೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಇದೊಂದು ಕ್ರೈಂ ಥ್ರಿಲ್ಲರ್ ಹಾಗೂ ಆ್ಯಕ್ಷನ್ ಜಾನರ್ ಚಿತ್ರವಾಗಿದ್ದು, ನಮ್ಮ ಸುತ್ತ-ಮುತ್ತ ನಡೆಯುವ ನೈಜ ಘಟನೆಗಳನ್ನಿಟ್ಟುಕೊಂಡೇ ಕಥೆ ಮಾಡಿದ್ದೀನಿ. ಉದಾಹರಣೆಗೆ ಮೆಡಿಕಲ್ ಮಾಫಿಯಾ, ಪೊಲಿಟಿಕಲ್ ಮಾಫಿಯಾ ಸೇರಿದಂತೆ ಹಲವು ವಿಷಯಗಳಿವೆ. ಬೆಂಗಳೂರು, ಮೈಸೂರು ಸಕಲೇಶಪುರ, ಮಂಗಳೂರು, ಸುತ್ತಮುತ್ತ 65 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ನಮ್ಮ ಜನರನ್ನು ಹ್ಯಾಕರ್ಸ್ ಹೇಗೆಲ್ಲಾ ವಂಚಿಸುತ್ತಾರೆ ಎಂಬುದು ಸಹ ಚಿತ್ರದಲ್ಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಟಿ ಪರ್ವೀನ್ ಬಾಬಿ ಪುಣ್ಯಸ್ಮರಣೆ: ದೇಶವನ್ನೇ ಬೆಚ್ಚಿ ಬೀಳಿಸಿತ್ತು ನಿಗೂಢ ಸಾವು!
ಇನ್ನು ಇದೊಂದು ಉತ್ತಮ ಕಥೆಯುಳ್ಳ ಚಿತ್ರ. ಎಲ್ಲರೂ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ಛಾಯಾಗ್ರಾಹಕ ವಿಲಿಯಂ ಡೇವಿಡ್ ತಿಳಿಸಿದರು. ಸಂಗೀತ ನಿರ್ದೇಶಕ ಧರ್ಮ ವಿಶ್ ಮಾತನಾಡಿ, ಚಿತ್ರದಲ್ಲಿ 2 ಹಾಡುಗಳಿವೆ. ಎರಡು ಹಾಡುಗಳು ಅದ್ಭುತವಾಗಿದೆ ಎಂದರು. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.