ಸುದಿಪ್ತೋ ಸೇನ್ ನಿರ್ದೇಶನದ, ಅದಾ ಶರ್ಮಾ ಅಭಿನಯದ 'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗೆಗೂ ಮುನ್ನವೇ ವಿವಾದಕ್ಕೆ ಸಿಲುಕಿತ್ತು. ಚಿತ್ರ ತೆರೆಕಂಡ ಮೇಲೂ ಭಾರೀ ಆಕ್ರೋಶ ವ್ಯಕ್ತವಾಗಿದ್ದರೂ, ಸಿನಿಮಾ ಚಿತ್ರಮಂದಿರಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ವಿರೋಧದ ನಡುವೆಯೂ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. 2023ಲ್ಲಿ ಅತಿ ಹೆಚ್ಚು ಗಳಿಕೆಯ ಸಿನಿಮಾಗಳಲ್ಲಿ 'ದಿ ಕೇರಳ ಸ್ಟೋರಿ' ಕೂಡ ಒಂದು.
'ದಿ ಕೇರಳ ಸ್ಟೋರಿ' ಕುರಿತು ಈಗಾಗಲೇ ಪರ ವಿರೋಧದ ಚರ್ಚೆ ನಡೆದಿದೆ. ರಾಜಕೀಯ, ಸಿನಿಮಾ ಗಣ್ಯರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬ್ಯಾನ್ ಬಿಸಿ ಕೂಡ ತಾಗಿದೆ. ಇದೀಗ ನಟ ನಾಸಿರುದ್ದೀನ್ ಶಾ ಕೂಡ ಈ ವಿವಾದಾತ್ಮಕ ಚಿತ್ರ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನಾಸಿರುದ್ದೀನ್ ಶಾ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು 'ದಿ ಕೇರಳ ಸ್ಟೋರಿ' ಯಶಸ್ಸಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 2023ರ ಯಶಸ್ವಿ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿರುವ ಅದಾ ಶರ್ಮಾ ಅಭಿನಯದ ಚಿತ್ರವು 200 ಕೋಟಿ ರೂಪಾಯಿಗಳ ಗಡಿ ದಾಟಿದ್ದು, ನಾಸಿರುದ್ದೀನ್ ಶಾ ಕಿಡಿ ಕಾರಿದ್ದಾರೆ.
'ಡೇಂಜರೆಸ್ ಟ್ರೆಂಡ್' .... ಮಾಧ್ಯಮ ಸಂದರ್ಶನವೊಂದರಲ್ಲಿ 'ದಿ ಕೇರಳ ಸ್ಟೋರಿ' ಯಶಸ್ಸನ್ನು ಉಲ್ಲೇಖಿಸಿ ಮಾತನಾಡಿದ ನಟ ನಾಸಿರುದ್ದೀನ್ ಶಾ, 'ಭೀದ್, ರೂಮರ್, ಫರಾಜ್ ನಂತಹ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಕುಸಿದಿವೆ. ಯಾರೂ ಆ ಸಿನಿಮಾಗಳನ್ನು ನೋಡಲು ಹೋಗಿಲ್ಲ. ಆದರೆ ಅವರು ನಾನು ಇನ್ನೂ ನೋಡದ ದಿ ಕೇರಳ ಸ್ಟೋರಿ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಆದರೂ ನಾನು ಈ ಚಿತ್ರವನ್ನು ನೋಡುವ ಉದ್ದೇಶ ಹೊಂದಿಲ್ಲ. ಏಕೆಂದರೆ ನಾನು ಅದರ ಬಗ್ಗೆ ಸಾಕಷ್ಟು ಓದಿದ್ದೇನೆ. ಇದು 'ಡೇಂಜರೆಸ್ ಟ್ರೆಂಡ್' ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಲವ್ ಜಿಹಾದ್ನಲ್ಲಿ ಸಿಲುಕಿದ್ದೇನೆ, ನನ್ನನ್ನು ರಕ್ಷಿಸಿ': ಪಿಎಂ ಮೋದಿಗೆ ಮನವಿ ಮಾಡಿದ ಮಾಡೆಲ್
ನಾಸಿರುದ್ದೀನ್ ಶಾ ಈ ಟ್ರೆಂಡ್ ಅನ್ನು ನಾಜಿ ಜರ್ಮನಿಗೆ ಹೋಲಿಸಿದ್ದಾರೆ. 'ಒಂದೆಡೆ ಇದು ಅಪಾಯಕಾರಿ ಪ್ರವೃತ್ತಿಯಾಗಿದೆ, ಇದರಲ್ಲಿ ಯಾವುದೇ ಸಂದೇಹವಿಲ್ಲ. ನಾವು ನಾಜಿ ಜರ್ಮನಿಯ ಕಡೆಗೆ ಹೋಗುತ್ತಿರುವಂತೆ ತೋರುತ್ತಿದೆ. ಜರ್ಮನಿಯ ಅನೇಕ ಮಾಸ್ಟರ್ ಫಿಲ್ಮ್ ಮೇಕರ್‌ಗಳು ತಮ್ಮ ಸ್ಥಾನವನ್ನು ತೊರೆದು ಹಾಲಿವುಡ್‌ಗೆ ಬಂದು ಅಲ್ಲಿ ಚಲನಚಿತ್ರಗಳನ್ನು ನಿರ್ಮಿಸಿದರು. ಇಲ್ಲಿಯೂ ಅದೇ ರೀತಿ ನಡೆಯುವಂತೆ ತೋರುತ್ತಿದೆ' ಎಂದು ತಮ್ಮ ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೆಂಗುಲಾಬಿಯಂತೆ ಕಂಗೊಳಿಸಿದ ರಾಗಿಣಿ ದ್ವಿವೇದಿ: ಚೆಲುವೆಯ ಚಿತ್ತಾರ ನೋಡಿ
ನಂತರದ ದಿನಗಳಲ್ಲಿ ಪರಿಸ್ಥಿತಿಗಳು ಉತ್ತಮವಾಗಿ ಬದಲಾಗುತ್ತವೆ. ಈ ದ್ವೇಷದ ವಾತಾವರಣವು ದಣಿಯಲಿದೆ ಎಂದು ನಾನು ಭಾವಿಸುತ್ತೇನೆ. ನೀವು ಎಷ್ಟು ದಿನ ದ್ವೇಷವನ್ನು ಹರಡುತ್ತೀರಿ? ಎಲ್ಲವೂ ಶೀಘ್ರವೇ ಮರೆಯಾಗಲಿ ಎಂದು ನಾನು ಆಶಿಸುತ್ತೇನೆ ಎಂದು ತಿಳಿಸಿದರು.