ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಂಟೆಂಟ್ವುಳ್ಳ ಸಿನಿಮಾಗಳು ಹೆಚ್ಚು ಬರುತ್ತಿವೆ. ಅವುಗಳ ಸಾಲಿಗೆ 'ಮೈ ಹೀರೋ' ಚಿತ್ರವು ಸೇರ್ಪಡೆಯಾಗಲಿದೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭವು ಬಸವನಗುಡಿಯ ರೇಣುಕಾದೇವಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಮಹಾಲಕ್ಷ್ಮಿ ಆರಂಭ ಫಲಕ ತೋರಿದರು. ನಟ ದತ್ತಣ್ಣ ಕ್ಯಾಮೆರಾ ಚಾಲನೆ ಮಾಡಿದರು.
ಇದೀಗ ಸಿನಿಮಾ ಬಗ್ಗೆ ನಿರ್ದೇಶಕ ಅವಿನಾಶ್ ವಿಜಯಕುಮಾರ್ ಮಾತನಾಡಿದ್ದು, ನಾನು ಮೂಲತಃ ರಂಗಭೂಮಿ ಕಲಾವಿದ. ಸ್ಯಾನ್ ಫ್ರಾನ್ಸಿಸ್ಕೊ ಫಿಲಂ ಸ್ಕೂಲ್ನಲ್ಲಿ ನಿರ್ದೇಶನದ ಕುರಿತು ಹಾಗೂ ಬಾಂಬೆ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ಅಭಿನಯ ತರಬೇತಿ ಪಡೆದಿದ್ದೇನೆ. ನಮ್ಮದೇ ಆದ ಎವಿ ಸ್ಟುಡಿಯೋಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ ಎಂದರು.
ಇದು ಬರೀ ಕರ್ನಾಟಕ, ಭಾರತ ಮಾತ್ರವಲ್ಲ. ಇಡೀ ಪ್ರಪಂಚದಲ್ಲಿರುವ ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದಿರುವ ಕಥೆ. ಅಮೆರಿಕಾದಿಂದ ಬಂದ ಅಧಿಕಾರಿಯೊಬ್ಬರು ಭಾರತಕ್ಕೆ ಬಂದಾಗ ಹುಡುಗನೊಬ್ಬನ ಪರಿಚಯವಾಗುತ್ತದೆ. ಇವರಿಬ್ಬರ ನಡುವೆ ಹೆಚ್ಚಿನ ಕಥೆ ಸಾಗುತ್ತದೆ. ಕೆಲವು ಚಿತ್ರಗಳಲ್ಲಿ ಭಾರತವನ್ನು ಬಡ ರಾಷ್ಟ್ರ ಎಂದು ಬಿಂಬಿಸಿ ತೋರಿಸಲಾಗುತ್ತದೆ. ಆದರೆ ನಮ್ಮ ಚಿತ್ರದಲ್ಲಿ ಭಾರತವನ್ನು ಬೇರೆಯದೇ ರೀತಿಯಲ್ಲಿ ತೋರಿಸುತ್ತಿದ್ದೇವೆ. ಚಿತ್ರ ನೋಡಿದ ಮೇಲೆ ಭಾರತವನ್ನು ನೋಡುವ ರೀತಿ ಬದಲಾಗಬಹುದು ಎಂಬುದು ನನ್ನ ಅನಿಸಿಕೆ ಎಂದು ಹೇಳಿದರು.
ಇದನ್ನೂ ಓದಿ: 'ಪ್ರಭಾಸ್ - ಕೃತಿ ನಟನೆ ಪ್ರೇಕ್ಷಕರನ್ನು ತಲುಪಲಿದೆ': ಆದಿಪುರುಷ್ ಎಡಿಟರ್ ಆಶಿಶ್ ವಿಶ್ವಾಸ
ಸಿನಿಮಾದಲ್ಲಿ ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಕಾಶ್ ಬೆಳವಾಡಿ ಅವರು ಜಿಲ್ಲಾಧಿಕಾರಿಯಾಗಿ ಮತ್ತು ದತ್ತಣ್ಣ ಪುರೋಹಿತರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಿರಂಜನ್ ದೇಶಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಮಧ್ಯಪ್ರದೇಶ ಹಾಗೂ ಯುಎಸ್ಎನಲ್ಲೂ ನಡೆಯಲಿದೆ. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ. ಮುಂದೆ ಬೇರೆ ಭಾಷೆಗಳಲ್ಲೂ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಮೂರು ಹಾಡುಗಳಿರುವ ಈ ಚಿತ್ರಕ್ಕೆ ಗಗನ್ ಬಧಾರಿಯಾ ಸಂಗೀತ ನೀಡಲಿದ್ದಾರೆ. ಎರಡು ಕನ್ನಡ ಹಾಗೂ ಒಂದು ಇಂಗ್ಲಿಷ್ ಹಾಡು ಚಿತ್ರದಲ್ಲಿರಲಿದೆ. ಕುಮಾರಗೌಡ ಈ ಚಿತ್ರದ ಛಾಯಾಗ್ರಹಣ ಮಾಡಲಿದ್ದಾರೆ. ಚಿತ್ರಕಥೆಯನ್ನು ನಾನು ಮತ್ತು ಮುತ್ತುರಾಜ್ ಬರೆದಿದ್ದೇವೆ. ಜೆಮ್ ಶಿವು ಸಂಭಾಷಣೆ ಬರೆದಿದ್ದಾರೆ. ಹಾಲಿವುಡ್ನ ತಂತ್ರಜ್ಞರು ಸಹ ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನುಡಿದರು.
ಈ ಚಿತ್ರದ ಬಗ್ಗೆ ಹಾಲಿವುಡ್ ನಟ ಜಿಲಾಲಿ ಮಾತನಾಡಿ, ನಾನು ಕೂಡ ರಂಗಭೂಮಿ ಕಲಾವಿದ. ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಕೆಲವು ವೆಬ್ಸೀರೀಸ್ಗಳಲ್ಲಿ ನಟಿಸಿದ್ದೇನೆ. ಈ ಚಿತ್ರದ ಕಥೆ ಇಷ್ಟವಾಯಿತು. ಅದಕ್ಕೆ ಪಾತ್ರವನ್ನು ಒಪ್ಪಿಕೊಂಡಿದ್ದೇನೆ ಎಂದರು. ಈ ವೇಳೆ ಕಲಾವಿದರಾದ ಪ್ರಕಾಶ್ ಬೆಳವಾಡಿ, ದತ್ತಣ್ಣ, ನಿರಂಜನ್ ದೇಶಪಾಂಡೆ ಹಾಗೂ ಸಂಗೀತ ನಿರ್ದೇಶಕ ಗಗನ್ ಬಧಾರಿಯಾ ಉಪಸ್ಥಿತರಿದ್ದರು.
ಇದನ್ನೂ ಓದಿ: ಸ್ಯಾಂಡಲ್ವುಡ್ನಲ್ಲಿ ಹೊಸ ಪ್ರಯೋಗ: ಶೀಘ್ರದಲ್ಲೇ ಜೂಲಿಯೆಟ್ 2 ತೆರೆಗೆ, ಪಾರ್ಟ್ 1 ಶೂಟಿಂಗ್ ಚುರುಕು!