ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಂಥ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿವೆ. ಆ ನಂತರ ಆ ಶೈಲಿಯ ಸಿನಿಮಾಗಳು ಬಂದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸದ್ದು ಮಾಡಿದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಡೇರ್ ಡೆವಿಲ್ ಮುಸ್ತಫಾದಂಥ ಕಾಲೇಜು ಕೇಂದ್ರಿತ ಕಥೆಗಳು ಸೂಪರ್ ಹಿಟ್ ಆಗುವಲ್ಲಿ ಯಶ ಕಂಡಿವೆ. ಕಾಲೇಜು ಕೇಂದ್ರಿತ ಬಗೆಯ ಸಿನಿಮಾಗಳ ಕೊರತೆ ಒಂದು ಮಟ್ಟಿಗೆ ನೀಗಿದಂತಾಗಿದೆ. ಈ ಸಾಲಿಗೆ ಮತ್ತೊಂದು ಸಿನಿಮಾ ಶೀಘ್ರದಲ್ಲೇ ಸೇರ್ಪಡೆ ಆಗಲಿದೆ. ದೊಡ್ಡ ಗೆಲುವು ಸಾಧಿಸುವ ಉದ್ದೇಶದೊಂದಿಗೆ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅಂಡ್ ಟೀಮ್ ಗಾಂಧಿ ನಗರಕ್ಕೆ ಎಂಟ್ರಿ ಕೊಟ್ಟಿದೆ.
![Chandan Shetty starrer new movie announced](https://etvbharatimages.akamaized.net/etvbharat/prod-images/26-08-2023/19365006_newss.jpg)
''ವಿದ್ಯಾರ್ಥಿ ವಿದ್ಯಾರ್ಥಿನಿಯರೇ'' ಚಿತ್ರದ ಶೀರ್ಷಿಕೆ. ಯುವ ನಿರ್ದೇಶಕ ಅರುಣ್ ಅಮುಕ್ತ ಸಾರಥ್ಯದಲ್ಲಿ ಈ ತಂಡ ಶೂಟಿಂಗ್ ಅಖಾಡಕ್ಕಿಳಿದಿದೆ. ಈಗಾಗಲೇ ಚಂದನ್ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಹೊಸ ಸಿನಿಮಾದಲ್ಲಿ ಅಮರ್, ಭಾವನಾ, ಮಾನಸಿ, ವಿವಾನ್ ಎಂಬ ಯುವ ಪ್ರತಿಭೆಗಳ ಜೊತೆ ವಿದ್ಯಾರ್ಥಿಯಾಗಿದ್ದಾರೆ. ಇತ್ತೀಚೆಗೆ ಕಾಲೇಜ್ ವಿದ್ಯಾರ್ಥಿಗಳಿಂದ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಟೈಟಲ್ ಅನಾವರಣಗೊಳಿಸುವ ಮೂಲಕ ಚಿತ್ರತಂಡ ಸಂಭ್ರಮಿಸಿದೆ. ಇದೊಂದು ಕಾಲೇಜು ವಾತಾವರಣದಲ್ಲಿ ನಡೆಯುವ ವಿದ್ಯಾರ್ಥಿಗಳ ಕಥೆಯಾಗಿದೆ.
![Chandan Shetty starrer new movie announced](https://etvbharatimages.akamaized.net/etvbharat/prod-images/26-08-2023/19365006_sdvcvscf.jpg)
ಯುವ ನಿರ್ದೇಶಕ ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದ ಕುರಿತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಈ ಹಿಂದೆ ಶ್ರೀಮುರುಳಿ ನಾಯಕನಾಗಿ ನಟಿಸಿದ್ದ 'ಲೂಸ್ಗಳು' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಅವರೀಗ ಸದ್ಯದ ಟ್ರೆಂಡ್ಗೆ ತಕ್ಕಂತೆ ಹೊಸ ಬಗೆಯ ಕಥಾನಕದೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ರೂಪಿಸಲು ಮುಂದಾಗಿದ್ದಾರೆ. ಶೀರ್ಷಿಕೆ ಅನಾವರಣ ವಿಚಾರದಲ್ಲಿಯೇ ಚಿತ್ರತಂಡ ಒಂದಷ್ಟು ಕ್ರಿಯಾಶೀಲ ನಡೆಯನ್ನು ಅನುಸರಿಸಿದೆ. ರಾಜ್ಯದ ನಾನಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸ್ವತಃ ಈ ಶೀರ್ಷಿಕೆ ಬಿಡುಗಡೆಗೊಳಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಅದನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಕಾಲೇಜು ಕಥೆಯ ಸಿನಿಮಾಗಳ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವಂಥ ಅನೇಕ ಅಂಶಗಳು ಈ ಚಿತ್ರದಲ್ಲಿರಲಿವೆ ಎಂಬುದು ಚಿತ್ರತಂಡದ ಮಾತು.
ಇದನ್ನೂ ಓದಿ: ಅರ್ಜುನ್ ಕಪೂರ್ - ಮಲೈಕಾ ಅರೋರಾ ನಡುವೆ ಬಿರುಕು? ವದಂತಿಗೆ ಪುಷ್ಠಿ ಕೊಟ್ಟ ಪೋಸ್ಟ್!
ಚಂದನ್ ಶೆಟ್ಟಿ ಜೊತೆಗೆ ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಿಂದಲೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ಭಿನ್ನವಾಗಿ ಕಟ್ಟಿಕೊಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಇದನ್ನೂ ಓದಿ: Thalaivar 170: ಜೈಲರ್ ಸಕ್ಸಸ್ ಸೆಲೆಬ್ರೇಶನ್ - ರಜನಿಕಾಂತ್ ಮುಂದಿನ ಸಿನಿಮಾ ಶೂಟಿಂಗ್ ಶುರು