ಶಿವಮೊಗ್ಗ: ಕನ್ನಡ ಸಿನಿಮಾ ರಂಗದಲ್ಲಿ ಹೊಸ ಪ್ರತಿಭೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಸಿನಿಮಾಗಳೇ ಬಿಡುಗಡೆಯಾಗುತ್ತಿದ್ದು, ಜನರ ಮನ ಮುಟ್ಟುತ್ತಿದೆ. ಹಾಡುಗಳ ಜೊತೆಗೆ ಚಿತ್ರದ ಕಥೆಯನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ರಚಿಸಲಾಗುತ್ತಿದೆ. ಇದೀಗ ಮತ್ತೊಂದು ಸಿನಿಮಾ ಆ ಪಟ್ಟಿಗೆ ಸೇರಲು ಸಿದ್ಧವಾಗಿದೆ.
ರಾಜ್ಯ ಗಡಿಭಾಗದ ಕಾಲೇಜ್ ಕ್ಯಾಂಪಸ್ ವಿದ್ಯಾರ್ಥಿಗಳ ಮಧ್ಯೆ ನಡೆಯುವ ಘಟನಾಧಾರಿತ ಸಿನಿಮಾ 'ಕ್ಯಾಂಪಸ್ ಕ್ರಾಂತಿ' ಇದೇ ಬರುವ ಫೆಬ್ರವರಿ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರ ಕಥೆಯನ್ನು ವಿಭಿನ್ನವಾಗಿ ಹೆಣೆಯಲಾಗಿದ್ದು, ಪ್ರೇಕ್ಷಕರ ಮನ ಗೆಲ್ಲಲಿದೆ ಎಂದು ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್ ಕುಮಾರ್ ತಿಳಿಸಿದರು.
ಸೋಮವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, "ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗದ ಅಗ್ನಿರಾಂಪುರ ಎಂಬ ಕಾಲ್ಪನಿಕ ಊರೊಂದರ ಸುತ್ತ ಕಥೆ ಸಾಗುತ್ತದೆ. ಗಡಿಗ್ರಾಮದಲ್ಲಿ ಲೋಕಲ್ ಕ್ರೈಮ್ಗಳು ಹೇಗೆ ನಡೆಯುತ್ತವೆ? ಅದು ಅಲ್ಲಿನ ಹುಡುಗರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಇದನ್ನೆಲ್ಲಾ ಕಾಲೇಜು ಹುಡುಗರು ಹೇಗೆ ತಡೆಯುತ್ತಾರೆ ಎಂಬುದನ್ನು ಸಿನಿಮಾದಲ್ಲಿ ಹೇಳಿದ್ದೇವೆ" ಎಂದರು.
ಇದನ್ನೂ ಓದಿ: ವೇದ ಹಾಫ್ ಸೆಂಚುರಿ!: ಚಿತ್ರತಂಡಕ್ಕೆ ಗೀತಾ ಪಿಕ್ಚರ್ಸ್ ಅಭಿನಂದನೆ
ಕನ್ನಡ ಭಾಷಾಭಿಮಾನ ಸಾರುವ ಸಿನಿಮಾ: ಕ್ಯಾಂಪಸ್ ಕ್ರಾಂತಿ ಚಿತ್ರದಲ್ಲಿ ಕನ್ನಡ ಭಾಷೆಗೆ ಹೆಚ್ಚು ಆಧ್ಯತೆಯನ್ನು ನೀಡಲಾಗಿದೆ. ಅಗ್ನಿರಾಂಪುರ ಕಾಲ್ಪನಿಕ ಗ್ರಾಮದಲ್ಲಿ 21 ವರ್ಷದಲ್ಲಿ ಒಮ್ಮೆಯೂ ಕನ್ನಡ ರಾಜ್ಯೋತ್ಸವ ಆಚರಣೆ ನಡೆದಿರುವುದಿಲ್ಲ. ಆದರೆ ಈ ಹುಡುಗರೆಲ್ಲರೂ ಜೊತೆ ಸೇರಿ ಮತ್ತೆ ರಾಜ್ಯೋತ್ಸವ ಆಚರಣೆಯನ್ನು ಪ್ರಾರಂಭಿಸುತ್ತಾರೆ ಅದು ಹೇಗೆ? ಎಂಬುದು ಚಿತ್ರದ ಪ್ರಮುಖ ವಿಷಯವಾಗಿದೆ. ಮನರಂಜನೆಯ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿ, ಕನ್ನಡತನದ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ. ಪ್ರೀತಿ, ಆಕ್ಷನ್, ಕಾಮಿಡಿ, ಥಿಲ್ಲರ್ ದೃಶ್ಯಗಳನ್ನು ವರ್ಣರಂಜಿತವಾಗಿ ಚಿತ್ರಿಸಲಾಗಿದೆ. ಅಷ್ಟೇ ಅಲ್ಲದೆ ಗಡಿ ಸಮಸ್ಯೆ ವಿದ್ಯಾರ್ಥಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಎಂಬುದನ್ನು ಸಿನಿಮಾದಲ್ಲಿ ಹೇಳಲಾಗಿದೆ" ಎಂದು ತಿಳಿಸಿದರು.
ಚಿತ್ರತಂಡ ಹೀಗಿದೆ: "ಸಿನಿಮಾ ನಾಯಕರಾಗಿ ಆರ್ಯ, ಅಲಂಕಾರ್, ನಾಯಕಿಯರಾಗಿ ಈಶಾನಾ, ಆರತಿ ಅಭಿನಯಿಸಿದ್ದಾರೆ. ಖಳನಾಯಕನಾಗಿ ರಣವೀರ್ ಮಂಗಳೂರು ಕಾಣಿಸಿಕೊಂಡಿದ್ದಾರೆ. ಕೀರ್ತಿರಾಜ್ ಮತ್ತು ವಾಣಿ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದು, ಹನುಮಂತೇಗೌಡ್ರು, ಭವಾನಿ, ಪ್ರಕಾಶ್, ಧನಂಜಯ್ ಇನ್ನಿತರ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ" ಎಂದರು.
ವಿ ಮನೋಹರ್ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ. ಪಿಕೆಹೆಚ್ ದಾಸ್ ಅವರ ಕ್ಯಾಮರಾ ಕೈ ಚಳಕ ಚಿತ್ರಕ್ಕಿದೆ. ಇನ್ನೂ ಸಿನಿಮಾದಲ್ಲಿ 5 ಸಾಹಸ ದೃಶ್ಯಗಳಿದ್ದು, ಕುಂಗ್ ಫು ಚಂದ್ರು ಸಾಹಸ ಸಂಯೋಜನೆ ಮಾಡಿದ್ದಾರೆ. ಫ್ಯಾಷನ್ ಮೂವಿಮೇರ್ಸ್ ಮೂಲಕ ನಿರ್ದೇಶಕ ಸಂತೋಷ್ ಕುಮಾರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ ನಾಯಕ ಆರ್ಯ, ನಾಯಕಿ ಈಶಾನಾ, ಖಳನಟ ರಣವೀರ್ ಮಂಗಳೂರು, ವಾಟಾಳ್ ಮಂಜು ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ‘ತತ್ಸಮ ತದ್ಭವ’ ಮೂಲಕ ಮೇಘನಾ ರಾಜ್ ರೀ ಎಂಟ್ರಿ; ಪೋಸ್ಟರ್ ರಿಲೀಸ್ ಮಾಡಿದ 100ಕ್ಕೂ ಹೆಚ್ಚು ನಟ-ನಟಿಯರು