ಕನ್ನಡ ಚಿತ್ರರಂಗದಲ್ಲಿ ಟೈಟಲ್, ಹಾಡು, ಟ್ರೈಲರ್ನಿಂದಲೇ ಟಾಕ್ ಆಗುತ್ತಿರುವ ಚಿತ್ರ 'ಮಾನ್ಸೂನ್ ರಾಗ'. ನಟ ಡಾಲಿ ಧನಂಜಯ್ ಹಾಗು ನಟಿ ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಾಗಿ ಸ್ಕ್ರೀನ್ ಹಂಚಿಕೊಂಡಿರುವ ಬಹು ನಿರೀಕ್ಷೆಯ ಸಿನಿಮಾವಿದು. ಶೇ.80ರಷ್ಟು ಮಳೆಯಲ್ಲೇ ಚಿತ್ರೀಕರಣವಾಗಿರೋ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಿದೆ.
ಚಿತ್ರತಂಡದ ಯೋಜನೆಯಂತೆ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಸಿನಿಮಾ ಈಗಾಗಲೇ ಪ್ರೇಕ್ಷಕರಿಗೆ ದರ್ಶನ ನೀಡಬೇಕಿತ್ತು. ಆದರೆ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೆಚ್ಚು ಒತ್ತು ನೀಡಿದ ಕಾರಣ ಸಿನಿಮಾ ಬಿಡುಗಡೆ ದಿನಾಂಕವನ್ನು ನಿರ್ಮಾಪಕ ವಿಖ್ಯಾತ್ ಮುಂದಕ್ಕೆ ಹಾಕಿದರು. ಇದೀಗ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ 16ಕ್ಕೆ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.
ಟ್ರೈಲರ್ನಲ್ಲಿ, ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಕೆಲ ದೃಶ್ಯಗಳಲ್ಲಿ ಧನಂಜಯ್, ರಚಿತಾ ರಾಮ್ ಸಖತ್ ಚಾಲೆಂಜಿಂಗ್ ಆಗಿ ನಟಿಸಿದ್ದಾರೆ. ಉಳಿದ ಕಲಾವಿದರಾದ ಸುಹಾಸಿನಿ, ಅಚ್ಯುತ್ ಕುಮಾರ್ ಅವರ ಕಾಂಬಿನೇಶನ್ ಅದ್ಭುತವಾಗಿ ಬಂದಿದೆ. ಯಶಾ ಶಿವಕುಮಾರ್ 'ರಾಗ ಸುಧಾ' ಹಾಡಿನಲ್ಲಿ ಮಿಂಚಿದ್ದಾರೆ.
ಇದನ್ನೂ ಓದಿ: ಸ್ಪೂಕಿ ಕಾಲೇಜ್ ಸಿನಿಮಾ: 'ಮೆಲ್ಲುಸಿರೆ ಸವಿಗಾನ..' ಹಾಡಿಗೆ ಹೆಜ್ಜೆ ಹಾಕಿದ ರೀಷ್ಮಾ ನಾಣಯ್ಯ
ಸಿನಿಮಾದ ಶೇ.80ರಷ್ಟು ದೃಶ್ಯಗಳನ್ನು ಮಳೆಯಲ್ಲೇ ಶೂಟಿಂಗ್ ಮಾಡಿರೋದು ಇದರ ವಿಶೇಷತೆ. ಜೊತೆಗೆ ಎಸ್ಕೆ ರಾವ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಮಾನ್ಸೂನ್ ರಾಗ ಚಿತ್ರದ ಹೈಲೆಟ್ಸ್. ಸಿನಿಮಾ 70-80ರ ದಶಕದಲ್ಲಿ ನಡೆಯುವಂಥ ಕಥೆಯನ್ನು ಹೊಂದಿದ್ದು ಗುರು ಕಶ್ಯಪ್ ಅವರು ಚಿತ್ರದ ಸಂಭಾಷಣೆ ಬರೆದಿದ್ದರು. ಆದರೆ ಅವರು ಇಂದು ನಮ್ಮೊಂದಿಗಿಲ್ಲ. ಚಿತ್ರ ಇನ್ನೇನು ಕೆಲ ದಿನಗಳಲ್ಲಿ ಬಿಡುಗಡೆ ಆಗಲಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಿದೆ.