2020ರಲ್ಲಿ ತೆರೆಕಂಡು ಯಶಸ್ವಿಯಾದ ಸಿನಿಮಾ ಶಿವಾಜಿ ಸುರತ್ಕಲ್. ರಮೇಶ್ ಅರವಿಂದ್ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದ ಮುಂದಿನ ಸರಣಿ, ಶಿವಾಜಿ ಸುರತ್ಕಲ್ 2 ಸಿನಿಮಾದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಯುವ ಮಹಿಳಾ ಪೊಲೀಸ್ ಅಧಿಕಾರಿಗಳ ಬಗ್ಗೆ ಅಧ್ಯಯನ ನಡೆಸಿ ನಿರ್ದೇಶಕರು ಈ ಪಾತ್ರವನ್ನು ಸೃಷ್ಟಿಸಿದ್ದಾರೆ.

ವಿಶೇಷವೇನೆಂದರೆ ನಿಜ ಜೀವನದಲ್ಲಿ ಮೇಘನಾ ತಂದೆ ಕೂಡ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಈ ಪಾತ್ರದ ತಯಾರಿಗೆ ಮತ್ತಷ್ಟು ಸಹಕಾರಿಯಾಗಿದೆ. ಚಿತ್ರದಲ್ಲಿ ಮೇಘನಾ ಅವರದ್ದು ಶಿವಾಜಿಯ ಮೇಲಧಿಕಾರಿಯ ಪಾತ್ರ. ತನಿಖೆಯ ಪ್ರತಿ ಹಂತದಲ್ಲಿ ಶಿವಾಜಿಯ ಜೊತೆಗಿದ್ದು ಚಿತ್ರಕ್ಕೆ ನಿಜವಾದ ಪೊಲೀಸ್ ಪವರ್ ಸಿಗುವಂತೆ ಮಾಡಿದ್ದಾರೆ.

ಶಿವಾಜಿ ಸುರತ್ಕಲ್ 2 ಚಿತ್ರತಂಡ ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬದ(ಸೆ.10) ದಿನ ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ. ಉಳಿದಂತೆ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಡಬ್ಬಿಂಗ್ ಕೆಲಸಗಳು ಶುರುವಾಗಿದೆ. ಚಿತ್ರಕ್ಕೆ ಜೂಡ ಸ್ಯಾಂಡಿರವರ ಸಂಗೀತ ಮತ್ತು ದರ್ಶನ್ ಅಂಬಟ್, ಗುರು ಪ್ರಸಾದ್ ಎಂ ಜಿ ಛಾಯಾಗ್ರಹಣವಿದೆ. ಅಂಜನಾದ್ರಿ ಸಿನಿ ಕ್ರಿಯೇಶನ್ಸ್ನಲ್ಲಿ ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆಕಾಶ್ ಶ್ರೀವತ್ಸ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಶಿವಾಜಿ ಸುರತ್ಕಲ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಮೇಘನಾ.. ವಿಶೇಷ ಪಾತ್ರದಲ್ಲಿ ಚಾರ್ ಮಿನಾರ್ ಬೆಡಗಿ..!