'ಟಗರು' ಚಿತ್ರದ ಪಾತ್ರಕ್ಕಾಗಿ ಹೆಸರುವಾಸಿಯಾಗಿರುವ ನಟಿ ಮಾನ್ವಿತಾ ಕಾಮತ್. ಸಿನಿಮಾಗಳಿಂದ ಕೊಂಚ ಗ್ಯಾಪ್ ತೆಗೆದುಕೊಂಡಿದ್ದ ಅವರು ಇದೀಗ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ. ಲೋಹಿತ್ ನಿರ್ದೇಶನದ 'ಕ್ಯಾಪ್ಚರ್' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ನಟಿ ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಅವರ ಮಗಳಾಗಿ ಮಾನ್ವಿತಾ ಕಾಣಿಸಿಕೊಳ್ಳಲಿದ್ದಾರೆ.
'ಕ್ಯಾಪ್ಚರ್' ಇದೊಂದು ಹಾರರ್ ಸಿನಿಮಾ. ಸಂಪೂರ್ಣ ಚಿತ್ರವನ್ನು ಸಿಸಿಟಿವಿ ಕಾನ್ಸೆಪ್ಟ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನವೊಂದು ನಡೆದಿದೆ. ಈಗಾಗಲೇ ಚಿತ್ರತಂಡ ಪ್ರಿಯಾಂಕಾ ಉಪೇಂದ್ರ ಅವರ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದೆ. ಇದೀಗ ಸಿನಿಮಾದಲ್ಲಿ ಮಾನ್ವಿತಾ ಕೂಡ ನಟಿಸುತ್ತಿದ್ದು, 'ಕ್ಯಾಪ್ಚರ್' ಮೇಲಿನ ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ಸ್ನೇಹಾ ಎಂಬ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳಲಿದ್ದು, ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾನ್ವಿತಾ ಕಾಮತ್, "ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಿದ್ದೇನೆ. ಪ್ರಾರಂಭದಲ್ಲಿ ತುಂಬಾ ಭಯವಿತ್ತು. ಆದರೆ ಪಾತ್ರ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. 15 ದಿನಗಳು ಗೋವಾದಲ್ಲಿ ಶೂಟಿಂಗ್ ಮಾಡಿದ್ದೆವು. ಪ್ರಿಯಾಂಕಾ ಮೇಡಮ್ ಜೊತೆ ಕೆಲಸ ಮಾಡಿದ್ದು ತುಂಬಾ ಇಷ್ಟವಾಯಿತು. ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ತುಂಬಾ ದೃಷ್ಟಿ ಆಗಿತ್ತು ಅನಿಸುತ್ತೆ. ಜ್ವರ ಕೂಡ ಬಂದಿತ್ತು. ದೃಷ್ಟಿ ತೆಗಿಸಿಕೊಂಡ ಮೇಲೆ ಸರಿ ಆಯಿತು" ಎಂದು ಹೇಳಿದರು.
ಇದನ್ನೂ ಓದಿ: ಐಪಿಎಸ್ ಅಧಿಕಾರಿಯ ನೈಜ ಕಥೆ "12th ಫೇಲ್".. ಕನ್ನಡದಲ್ಲಿ ಕೆಆರ್ಜಿ ಸ್ಟುಡಿಯೋಸ್ ವಿತರಣೆ
ಮಾನ್ವಿತಾ ಕಾಮತ್ ಕೊನೆಯದಾಗಿ 'ಶಿವ 143' ಸಿನಿಮಾದಲ್ಲಿ ನಟಿಸಿದ್ದರು. ಇದೀಗ ವರ್ಷದ ಬಳಿಕ ತೆರೆ ಮೇಲೆ ಬರುತ್ತಿದ್ದಾರೆ. ಕ್ಯಾಪ್ಚರ್ ಸಿನಿಮಾದಲ್ಲಿ ಮಾನ್ವಿತಾ ಲುಕ್ ಹೇಗಿರಲಿದೆ ಎನ್ನುವುದು ಸದ್ಯದಲ್ಲೇ ರಿವೀಲ್ ಆಗಲಿದೆ. ಈ ಕ್ಯಾಪ್ಚರ್ ಸಿನಿಮಾಗೆ ಮಮ್ಮಿ, ದೇವಕಿ ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಿಯಾಂಕಾ ಹಾಗೂ ಲೋಹಿತ್ ಕಾಂಬಿನೇಷನ್‌ನ 3ನೇ ಸಿನಿಮಾ ಇದು.
ರವಿರಾಜ್ ಅವರು ತಮ್ಮ ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ ಮೂಲಕ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಚಿತ್ರವಿದು. ರವಿರಾಜ್ ಅವರು ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ. ಚಿತ್ರಕ್ಕೆ ಎಸ್ ಪಾಂಡಿಕುಮಾರ್ ಕ್ಯಾಮರಾ ವರ್ಕ್ ಮಾಡಿದ್ದು, ರವಿಚಂದ್ರನ್ ಅವರ ಸಂಕಲನವಿದೆ. ಪ್ರಿಯಾಂಕಾ ಉಪೇಂದ್ರ ಅವರ ಜೊತೆಗೆ ಇನ್ನೂ ಸಾಕಷ್ಟು ಸ್ಟಾರ್ ಕಲಾವಿದರು ಸಿನಿಮಾದಲ್ಲಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಸಿನಿಮಾ ತಂಡ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಕಾಲಿಡಲಿದೆ.
ಇದನ್ನೂ ಓದಿ: 'ಸ್ನೇಹರ್ಷಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಿರಣ್ ನಾರಾಯಣ್ ಪ್ರವೇಶ