ಚೆನ್ನೈ (ತಮಿಳುನಾಡು): ನಟಿ ತ್ರಿಶಾ ಕೃಷ್ಣನ್, ನಟಿ ಮತ್ತು ರಾಜಕಾರಣಿ ಕುಷ್ಬೂ ಸುಂದರ್ ಮತ್ತು ನಟ ಚಿರಂಜೀವಿ ವಿರುದ್ಧ ತಮಿಳು ನಟ ಮನ್ಸೂರ್ ಅಲಿ ಖಾನ್ ಶುಕ್ರವಾರ ಮದ್ರಾಸ್ ಹೈಕೋರ್ಟ್‌ನಲ್ಲಿ ಮಾನ ಹಾನಿ ಮೊಕದ್ದಮೆ ದಾಖಲಿಸಿದ್ದಾರೆ. 1 ಕೋಟಿ ರೂ.ಮಾನ ನಷ್ಟ ನೀಡಬೇಕು ಎಂದು ಅರ್ಜಿಯಲ್ಲಿ ಕೇಳಿದ್ದಾರೆ. ಸಂಪೂರ್ಣ ವಿಡಿಯೋ ನೋಡದೆ ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಮನ್ಸೂರ್ ಅಲಿ ಖಾನ್ ಆರೋಪಿಸಿದ್ದಾರೆ. ಈ ಪ್ರಕರಣವು ಡಿಸೆಂಬರ್ 11ರ ಸೋಮವಾರ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಸತೀಶ್ ಕುಮಾರ್ ಅವರ ಪೀಠದ ಎದುರು ವಿಚಾರಣೆಗೆ ಬರಲಿದೆ.
ಮನ್ಸೂರ್ ಖಾನ್ ನಟಿ ತ್ರಿಶಾ ಕೃಷ್ಣನ್ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ನಟಿ ತ್ರಿಶಾ ಕೃಷ್ಣನ್, ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್, ಮಾಳವಿಕಾ ಮೋಹನನ್, ಚಿರಂಜೀವಿ ಮತ್ತು ಇತರ ಕೆಲವು ನಟರು ಮತ್ತು ತಮಿಳು ನಟರ ಸಂಘಗಳು ಬಲವಾಗಿ ಖಂಡಿಸಿದ್ದವು. ಇದಾದ ನಂತರ, ನಟಿ ಕಮ್ ರಾಜಕಾರಣಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಕುಷ್ಬೂ ಅವರು ತಮಿಳುನಾಡು ಡಿಜಿಪಿಗೆ ದೂರು ನೀಡಿದ್ದರು. ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಡಿಜಿಪಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಚೆನ್ನೈ ಥೌಸಂಡ್ ಲೈಟ್ ಪೊಲೀಸರು ಮನ್ಸೂರ್ ಅಲಿ ಖಾನ್ ವಿರುದ್ಧ ಎರಡು ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ದೂರು ದಾಖಲಾಗುತ್ತಿದ್ದಂತೆ ಮನ್ಸೂರ್ ಅಲಿ ಖಾನ್ ಚೆನ್ನೈ ಪ್ರಧಾನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಮತ್ತೊಂದು ಕಡೆ ಮನ್ಸೂರ್ ಅಲಿಖಾನ್ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ನಟಿ ಬಳಿ ಕ್ಷಮೆ ಯಾಚಿಸಿದ್ದರು. ಖಾನ್ ಅವರ ಕ್ಷಮೆಯಾಚನೆಯನ್ನ ನಟಿ ಒಪ್ಪಿಕೊಂಡಿದ್ದರು.
ನಟ ವಿಜಯ್ ನಟನೆಯ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರ ಲಿಯೋದಲ್ಲಿ ತ್ರಿಷಾ, ಮನ್ಸೂರ್ ಅಲಿಖಾನ್ ಹಾಗೂ ಇತರ ನಟರು ಅಭಿನಯ ಮಾಡಿದ್ದರು. ಸಿನಿಮಾ ಅವಕಾಶವಿಲ್ಲದೇ ಕಾಲ ದೂಡುತ್ತಿದ್ದ ಮನ್ಸೂರ್ ಅಲಿಖಾನ್ಗೆ ಲೋಕೇಶ್ ಕನಕರಾಜ್ ಅವಕಾಶ ಕೊಟ್ಟಿದ್ದರು. ಆದರೆ, ಸಹ ಕಲಾವಿದೆಯ ಬಗ್ಗೆಯೇ ಅಲಿ ಖಾನ್ ಸಂದರ್ಶನವೊಂದರಲ್ಲಿ ವಿವಾದಾತ್ಮಕವಾಗಿ ಮಾತನಾಡಿದ್ದರು. ಇದು ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ನಟನ ಹೇಳಿಕೆಗೆ ಖಂಡನೆ ಕೂಡಾ ವ್ಯಕ್ತವಾಗಿದ್ದವು.