ತಿರುವನಂತಪುರಂ (ಕೇರಳ): ಹೃದಯಾಘಾತದ ಹಿನ್ನೆಲೆ ಮಲಯಾಳಂ ಕಿರುತೆರೆ ಧಾರಾವಾಹಿ ನಟಿ ಡಾ. ಪ್ರಿಯಾ ಕೊನೆಯುಸಿರೆಳೆದಿದ್ದಾರೆ. ನಟಿಗೆ 35 ವರ್ಷ ವಯಸ್ಸಾಗಿತ್ತು. ಅಲ್ಲದೇ ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದ ಪ್ರಿಯಾ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.
ತುಂಬು ಗರ್ಭಿಣಿ ಆಗಿದ್ದ ಪ್ರಿಯಾ ಅವರು ಸಹಜ ತಪಾಸಣೆಗಾಗಿ ಆಸ್ಪತ್ರೆಗೆ ಬಂದಾಗ ಹೃದಯಾಘಾತವಾಗಿದೆ. ಆಪರೇಷನ್ ಮೂಲಕ ಉದರದಿಂದ ಹೊರತೆಗೆದ ಪ್ರಿಯಾ ಅವರ ಮಗು ಸದ್ಯ ಐಸಿಯುನಲ್ಲಿದೆ. ಐಸಿಯುನಲ್ಲಿರುವ ಮಗುವಿನ ಸುರಕ್ಷತೆಗಾಗಿ ಸ್ನೇಹಿತರು, ಸಂಬಂಧಿಕರು ಮತ್ತು ಸಹೋದ್ಯೋಗಿಗಳು ಪ್ರಾರ್ಥಿಸುತ್ತಿದ್ದಾರೆ.
ಮಲೆಯಾಳಂ ಚಿತ್ರರಂಗಕ್ಕೆ ತುಂಬಲಾರದ ನಷ್ಟ: ಪ್ರಿಯಾ ತಿರುವನಂತಪುರಂ ಜಿಲ್ಲೆಯ ಪೂಜಾಪುರದವರು. ನಟಿ ರಂಜೂಷಾ ಮೆನನ್ ನಿಧನದ ಬೆನ್ನಲ್ಲೇ ಮತ್ತೋರ್ವ ನಟಿ ಸಾವನಪ್ಪಿದ್ದು, ಮಲೆಯಾಳಂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಕುಟುಂಬಸ್ಥರಿಗೆ ಧೈರ್ಯ ತುಂಬುತ್ತಿದ್ದಾರೆ.
ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿಂದು ಪ್ರಿಯಾ ಕೊನೆಯುಸಿರೆಳೆದಿದ್ದಾರೆ. ಸಿನಿಮಾ, ಧಾರಾವಾಹಿ ನಟಿ ರಂಜೂಷಾ ಮೆನನ್ ಅವರು ಅಕ್ಟೋಬರ್ 30ರಂದು ತಿರುವನಂತಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಅಕ್ಟೋಬರ್ 31ರಂದು ಅಂದರೆ ನಿನ್ನೆ ಪ್ರಿಯಾ ಅವರ ಸಾವು ಸಂಭವಿಸಿದೆ. ವರದಿಗಳ ಪ್ರಕಾರ ಡಾ. ಪ್ರಿಯಾ, ತಿರುವನಂತಪುರಂನ ಪಿಆರ್ಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಮಲಯಾಳಂ ಚಿತ್ರರಂಗದ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಡಾಕ್ಟರ್ ಪ್ರಿಯಾ 'ಕರುತಮುತು' ಚಿತ್ರದ ಪಾತ್ರಕ್ಕಾಗಿ ಜನಪ್ರಿಯರಾಗಿದ್ದರು. ಮದುವೆಯಾದ ನಂತರ ಅವರು ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು.
ನಟ ಕಿಶೋರ್ ಸತ್ಯ ಪೋಸ್ಟ್: ಪ್ರಿಯಾ ಸಾವಿನ ಸುದ್ದಿಯನ್ನು ನಟ ಕಿಶೋರ್ ಸತ್ಯ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಮಲಯಾಳಂ ಟೆಲಿವಿಷನ್ ವಲಯದಲ್ಲಿ ಮತ್ತೊಂದು ಅನಿರೀಕ್ಷಿತ ಸಾವು. ಡಾ. ಪ್ರಿಯಾ ನಿನ್ನೆ ಹೃದಯ ಸ್ತಂಭನದಿಂದ ನಿಧನರಾದರು. ಅವರು 8 ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಸದ್ಯ ಮಗು ಐಸಿಯುನಲ್ಲಿದೆ. ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿರಲ್ಲಿಲ್ಲ" ಎಂದು ಬರೆದುಕೊಂಡಿದ್ದಾರೆ.
''ಏಕೈಕ ಪುತ್ರಿಯ ಸಾವನ್ನು ಸಹಿಸಲಾರದೇ ಅಳುತ್ತಿರುವ ತಾಯಿ. 6 ತಿಂಗಳಿಂದ ಎಲ್ಲೂ ಹೋಗದೇ ಪ್ರಿಯಾರ ಜೊತೆ ಪ್ರೀತಿಯ ಬಾಳಸಂಗಾತಿಯಾಗಿದ್ದ ಪತಿ ಪಡುತ್ತಿರುವ ನೋವು. ನಿನ್ನೆ ರಾತ್ರಿ ಆಸ್ಪತ್ರೆಗೆ ಹೋಗುವಾಗ ಮನದಲ್ಲಿ ದುಃಖದ ಮಳೆ ಸುರಿಯಿತು. ಅವರನ್ನು ಸಮಾಧಾನಪಡಿಸಲು ಏನು ಹೇಳುವಿರಿ?. ಆ ಮುಗ್ಧ ಮನಸ್ಸುಗಳಿಗೆ ದೇವರು ಏಕಿಷ್ಟು ಕ್ರೌರ್ಯ ತೋರಿದನು?'' ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
''ಮನಸ್ಸಿನಲ್ಲಿ ಪ್ರಶ್ನೆಗಳು ಮರುಕಳಿಸುತ್ತಲೇ ಇತ್ತು. ಉತ್ತರ ಸಿಗದ ಪ್ರಶ್ನೆಗಳು. ರಂಜುಷಾ ಸಾವಿನ ಆಘಾತಕಾರಿ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಸಾವು. ಕೇವಲ 35 ವರ್ಷದ ವ್ಯಕ್ತಿ ಇಹಲೋಕ ತ್ಯಜಿಸಿದ್ದು, ಸಾಂತ್ವನ ಹೇಳಲು ಮನಸ್ಸು ಬಿಡುತ್ತಿಲ್ಲ. ಈ ಕುಸಿತದಿಂದ ಪ್ರಿಯಾ ಅವರ ಪತಿ ಮತ್ತು ತಾಯಿ ಹೇಗೆ ಚೇತರಿಸಿಕೊಳ್ಳುತ್ತಾರೆ ಗೊತ್ತಿಲ್ಲ. ಅವರ ಶಕ್ತಿ ಸಿಗಲಿ'' ಎಂದು ನಟ ಕಿಶೋರ್ ತಮ್ಮ ಸುದೀರ್ಘ ಬರಹದಲ್ಲಿ ಬರೆದುಕೊಂಡಿದ್ದಾರೆ.
ನಟಿ ರಂಜುಷಾ ಮೆನನ್ ಸಾವು: ಆಗಸ್ಟ್ನಲ್ಲಿ ಮಲಯಾಳಂ ನಟಿ ಅಪರ್ಣಾ ನಾಯರ್ ಶವವಾಗಿ ಪತ್ತೆ ಆಗಿದ್ದರು. ಅಕ್ಟೋಬರ್ 30ರಂದು ನಟಿ ರಂಜುಷಾ ಮೆನನ್ ಅವರು ತಿರುವನಂತಪುರಂನ ಶ್ರೀಕಾರ್ಯಂ ಕರಿಯಂನಲ್ಲಿರುವ ಫ್ಲಾಟ್ನಲ್ಲಿ ಶವವಾಗಿ ಪತ್ತೆಯಾದರು. ನಟಿ ಕೇವಲ 35ರ ಹರೆಯದಲ್ಲೇ ಇಹಲೋಕ ತ್ಯಜಿಸಿದರು. ಇದೀಗ 35ರ ಹರೆಯದ ಮತ್ತೋರ್ವ ನಟಿ ಪ್ರಿಯಾ ಸಾವನಪ್ಪಿರುವುದನ್ನು ಒಪ್ಪಿಕೊಳ್ಳಲಾಗದಂತಹ ಪರಿಸ್ಥಿತಿಯಲ್ಲಿ ಮಲಯಾಳಂ ಚಿತ್ರರಂಗವಿದೆ.
ಇದನ್ನೂ ಓದಿ: ಮಲಯಾಳಂ ಖ್ಯಾತ ಧಾರಾವಾಹಿ ನಟಿ ರಂಜುಷಾ ಮೆನನ್ ಶವವಾಗಿ ಪತ್ತೆ