ನಗುಮುಖದ ರಾಜಕುಮಾರ, ನಗುತ್ತಲೇ ಮರೆಯಾದ. ಪವರ್ ಸ್ಟಾರ್ ಜೀವಂತವಾಗಿ ಇದ್ದಿದ್ದರೆ ಬಹುಶಃ ಮೂರ್ನಾಲ್ಕು ಸಿನಿಮಾಗಳು ತೆರೆ ಕಾಣಲು ಸಿದ್ಧವಾಗುತ್ತಿದ್ದವು.. ಅವರ ಅಗಲಿಕೆಗಿಂತ ಮೊದಲೇ ಅದೆಷ್ಟೋ ಕಥೆಗಳು ಪುನೀತ್ಗೆಂದೇ ರೆಡಿಯಾಗಿತ್ತು. ಅಗಲಿದ ಬಳಿಕ ಆ ಕಥೆಗಳಿಗೂ ವಿರಾಮ ಬಿದ್ದಿತು. ಆದರೆ ಇದೀಗ ಮತ್ತೆ ಅಪ್ಪು ಓಕೆ ಮಾಡಿದ್ದ ಕಥೆಯೊಂದು ಬೆಳ್ಳಿ ತೆರೆಗೆ ಬರಲು ಸಿದ್ಧವಾಗಿದೆ. ಆ ಸ್ಟೋರಿ ಯಾವ್ದು..? ಅನ್ನೋ ಈ ಕುತೂಹಲ ಎಲ್ಲರಲ್ಲೂ ಹುಟ್ಟುಹಾಕಿರುವುದಂತೂ ನಿಜ.
ದೊಡ್ಮನೆ ಹುಡ್ಗ ಅಭಿಮಾನಿಗಳ ಪ್ರೀತಿಯ ಅಪ್ಪು. ಇವರು ಚಿಕ್ಕ ವಯಸ್ಸಲ್ಲೇ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ನಟನಿಗೆ ಸಮಾಜಕ್ಕಾಗಿ ಉತ್ತಮ ಸಂದೇಶವನ್ನು ನೀಡುವ ಸಿನಿಮಾ ಮಾಡಬೇಕೆಂಬ ತುಡಿತ ಇತ್ತು. ಹೀಗಾಗಿಯೇ 'ದ್ವಿತ್ವ' ಕಥೆಗೆ ಓಕೆ ಅಂದುಬಿಟ್ಟಿದ್ದರು. ಹೊಂಬಾಳೆ ಪ್ರೊಡಕ್ಷನ್ ಅಡಿಯಲ್ಲಿ, ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಚಿತ್ರ ಇದಾಗಿತ್ತು. ಸಿಗರೇಟ್ನಿಂದ ಆಗುವ ಅನಾಹುತ, ಧೂಮಪಾನದಿಂದ ಅರೋಗ್ಯದ ಮೇಲಾಗುವ ಪರಿಣಾಮದ ಸುತ್ತ 'ದ್ವಿತ್ವ' ಕಥೆಯನ್ನು ಹೆಣೆದಿದ್ರಂತೆ ಪವನ್. ಹೀಗಾಗಿಯೇ ಈ ಕಥೆಯನ್ನು ಒಪ್ಪಿ ಪುನೀತ್ ಸಿನಿಮಾಗೆ ರೆಡಿಯಾಗಿದ್ದರು. ಇನ್ನೇನೂ ಸಿನಿಮಾ ಶೂಟಿಂಗ್ ಶುರುವಾಗಬೇಕು ಅನ್ನುವಷ್ಟರಲ್ಲಿ ಅಪ್ಪು ಪರಮಾತ್ಮನಲ್ಲಿ ಲೀನರಾದರು. ಹೀಗಾಗಿ ದ್ವಿತ್ವ ಕಥೆಯೊಂದು ಹಾಗೆಯೇ ಉಳಿದುಕೊಂಡು ಬಿಟ್ಟಿತು.
ಆದರೆ ಇದೀಗ ಅಪ್ಪು ಪಾತ್ರಕ್ಕೆ, ಮತ್ತೊಬ್ಬ ನಟ ಜೀವ ತುಂಬಲಿದ್ದಾರೆ. ಸಮಾಜಕ್ಕೆ ಸಂದೇಶ ಸಾರುವ ಸಿನಿಮಾ ನಿಲ್ಲಬಾರದು. ಅಲ್ಲದೇ ಅಪ್ಪು ಕನಸು ನನಸಾಗಬೇಕು ಎಂಬ ಆಶಯದೊಂದಿಗೆ ಹೊಂಬಾಳೆ ದ್ವಿತ್ವ ಚಿತ್ರವನ್ನು ಹೊರತರಲಿದೆ. ಆದರೆ ಚಿತ್ರದ ಹೆಸರನ್ನು 'ಧೂಮಂ' ಎಂದು ಬದಲಾಯಿಸಲಾಗಿದೆ. ಅಪ್ಪು ಪಾತ್ರಕ್ಕೆ ಮಲಯಾಳಂ ಪ್ರತಿಭಾವಂತ ನಟ ಫಹಾದ್ ಫಾಜಿಲ್ ಜೀವ ತುಂಬಲಿದ್ದಾರೆ. ಇದು ಕನ್ನಡ ಮತ್ತು ಮಲಯಾಳಂ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ಸೆಟ್ಟೇರಿದ ಕಾಳಿ ಸಿನಿಮಾ.. ಅಭಿಷೇಕ್ಗೆ ಕಾಂತಾರದ ಸಪ್ತಮಿ ಗೌಡ ನಾಯಕಿ