ವಿಶ್ವ ಪ್ರಸಿದ್ಧ ಮೈಸೂರು ದಸರಾಗೆ ಭಾನುವಾರ ಚಾಲನೆ ಸಿಗಲಿದೆ. ಕನ್ನಡ ಚಿತ್ರರಂಗದ ನಾದ ಬ್ರಹ್ಮ ಹಂಸಲೇಖ ಅವರು ಅ.15 ರಂದು ಬೆಳಗ್ಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡುವರು. ಬೆಳಗ್ಗೆ 10.15ರಿಂದ 10.36ರ ನಡುವಿನ ಶುಭ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ಅದ್ಧೂರಿ ದಸರಾ ಉದ್ಘಾಟನಾ ಸಮಾರಂಭ ನಡೆಯಲಿದೆ. ಜೊತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ.
ನಾಡಹಬ್ಬ ದಸರಾಗೆ ಚಾಲನೆ ನೀಡಲಿರುವ ನಾದ ಬ್ರಹ್ಮ ಹಂಸಲೇಖ ಅವರು 'ಈಟಿವಿ ಭಾರತ'ದ ಜೊತೆ ಮಾತನಾಡಿದ್ದು, ಸಾಕಷ್ಟು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿಯ ದಸರಾ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿರುವುದು ಒಂದು ಅನಿರೀಕ್ಷಿತ ಎನ್ನುತ್ತಲೇ ಮಾತು ಶುರುಮಾಡಿದ ಹಂಸಲೇಖ, ಈ ಸದಾವಕಾಶ ಸಿಕ್ಕಿರುವುದನ್ನು ನನ್ನ ಚಂದನವನದ ಸಿನಿಮಾ ಬರಹಗಾರರಿಗೆ ಅರ್ಪಿಸುತ್ತೇನೆ. ಇದು ಚಂದನವನಕ್ಕೆ ಸಿಕ್ಕ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.
ಇದಕ್ಕಿಂತ ದೊಡ್ಡ ಪ್ರಶಸ್ತಿ ಇಲ್ಲ: ''ನನ್ನ ಜೀವನದ ಪ್ರಯಾಣದಲ್ಲಿ ದಸರಾ ಉತ್ಸವ ಪರಿಪೂರ್ಣ ಆಗಲಿದೆ. ಯಾಕೆಂದರೆ ದಸರಾವನ್ನು ನಾಡಿನ ಸಾಂಸ್ಕೃತಿಕ ಅಸ್ಮಿತೆ ಅಂತಾ ಕರೆಯಲಾಗುತ್ತದೆ. ಆದರೆ ನನ್ನ ದೃಷ್ಟಿಯಲ್ಲಿ ದಸರಾವು ಜೀವಂತ ಮಹಾಕಾವ್ಯ. ಈ ಮಹಾಕಾವ್ಯವು ನಮಗೆ ದಸರಾ ಮೂಲಕ ಸಿಕ್ಕಿದೆ. ಇಂತಹ ಮಹಾಕಾವ್ಯವನ್ನು ಯಾವ ಕವಿಗಳೂ ಬರೆದಿಲ್ಲ. 375 ವರ್ಷಗಳ ಹಿನ್ನೆಲೆಯುಳ್ಳ ದಸರಾ ಬಗ್ಗೆ ದೊಡ್ಡ ಹಿರಣ್ಣಯ್ಯನವರು ಹೇಳುವಂತೆ ಚಿನ್ನದ ಮಳೆ ಸುರಿಸಿದ ಕಾಲ ಅದಾಗಿದೆ. ಅಂತಹ ದಸರಾವನ್ನು ಉದ್ಘಾಟನೆ ಹಾಗೂ ಸಂಗೀತದ ಮೂಲಕ ಸಮಾರೋಪ ಕಾರ್ಯಕ್ರಮ ನಡೆಸಿಕೊಡುವ ಜವಾಬ್ದಾರಿ ಹೆಗಲಿಗೆ ಹೊರಿಸಿರುವುದರಿಂದ ನನ್ನ ಜೀವನದ ಪರಿಪೂರ್ಣವಾಗಿದೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ಇನ್ಯಾವುದೂ ಇಲ್ಲ'' ಎಂದು ಹಂಸಲೇಖ ಹೇಳಿದರು.
ಜಯ ಹೇ ನಾಲ್ವಡಿ ಕಾರ್ಯಕ್ರಮ: ''ದಸರಾದಲ್ಲಿ ಸಿನಿಮಾ ಹಾಡುಗಳು ಮತ್ತು ಜಾನಪದ ಹಾಡುಗಳನ್ನು ಹಾಡುವುದು ಮೊದಲಿನಿಂದಲೂ ವಿಶೇಷವಾಗಿದೆ. ಆದರೆ ಈ ಬಾರಿ ನಾನು ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡುತ್ತೇನೆ. ಅದಕ್ಕೆ 'ಜಯ ಹೇ ನಾಲ್ವಡಿ' ಅಂತಾ ಹೆಸರಿಡಲಾಗಿದೆ. ನನ್ನ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಸೂಪರ್ ಹಿಟ್ ಹಾಡುಗಳನ್ನು ಬದಲಾಯಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಹಸ, ಜನಪರ ಕಾರ್ಯ, ಜೀವನ ಚರಿತ್ರೆಯ ಕುರಿತಂತೆ ಪ್ರಸ್ತುತಪಡಿಸಲಾಗುವುದು. ಇದಕ್ಕಾಗಿ 300ಕ್ಕೂ ಅಧಿಕ ಜನರು ಕೆಲಸ ಮಾಡಲಿದ್ದಾರೆ. 150 ಜನ ವಾದ್ಯದವರು, 100 ಮಂದಿ ನೃತ್ಯಗಾರರು, 50 ಜನ ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ. ದಸರಾ ಉತ್ಸವದಲ್ಲಿಯೇ ಇದೊಂದು ಸದಾ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವಾಗಿ ಮೂಡಿಬರಲಿದೆ'' ಎಂದು ಹಂಸಲೇಖ ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟಾರೆ, ದಸರಾದಲ್ಲಿ ನಾದಬ್ರಹ್ಮ ಹಂಸಲೇಖ ಅವರು ಬೃಹತ್ ಸಂಗೀತ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸಲು ಸಜ್ಜುಗೊಂಡಿದ್ದಾರೆ. ಇದರ ಜೊತೆಗೆ ಮೈಸೂರಿನ 119 ವೃತ್ತಗಳಲ್ಲಿ ಅಂದರೆ ಬರೋಬ್ಬರಿ 135 ಕಿ.ಮೀ ದೂರದವರೆಗೆ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಕೆ.ಆರ್.ವೃತ್ತ, ಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ಗನ್ಹೌಸ್ ವೃತ್ತ, ಎಲ್ಐಸಿ ವೃತ್ತ ಸೇರಿ ಮೈಸೂರು ನಗರದ ಹಲವು ಕಡೆ ದೀಪಾಲಂಕಾರ ಇರಲಿದೆ. ಅಲ್ಲದೆ, ಮೈಸೂರು ಅರಮನೆ, ವಿವಿಧ ಸರ್ಕಾರಿ ಕಟ್ಟಡಗಳೂ ವಿದ್ಯುತ್ ದೀಪಾಲಂಕಾರದಲ್ಲಿ ಝಗಮಗಿಸಲಿವೆ.
ಇದನ್ನೂ ಓದಿ: ನಾಳೆಯಿಂದ ಶರನ್ನವರಾತ್ರಿ ಸಂಭ್ರಮ: ರತ್ನಖಚಿತ ಸಿಂಹಾಸನದಲ್ಲಿ ಯದುವೀರ್ ಖಾಸಗಿ ದರ್ಬಾರ್