ಹೈದರಾಬಾದ್ (ತೆಲಂಗಾಣ): ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ಸಂಬಂಧ ಬಾಲಿವುಡ್ ಗಾಯಕ ಲಕ್ಕಿ ಅಲಿ ಕ್ಷಮೆಯಾಚಿಸಿದ್ದಾರೆ. ''ಬ್ರಾಹ್ಮಣ'' ಎಂಬ ಪದವು ''ಅಬ್ರಾಹಂ'' ಎಂಬ ಶಬ್ಧದಿಂದ ಬಂದಿದೆ ಎಂದು ಲಕ್ಕಿ ಅಲಿ ಪೋಸ್ಟ್ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿ ಟೀಕೆಗೂ ಗುರಿಯಾಗಿತ್ತು. ಇದರ ಬೆನ್ನಲ್ಲೇ ಕ್ಷಮೆ ಕೋರಿದ್ದಾರೆ.
ಈ ಸಂಬಂಧ ಇದೀಗ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ನಾಯಕ ಲಕ್ಕಿ ಅಲಿ, ''ನನ್ನ ಹಿಂದಿನ ಪೋಸ್ಟ್ ವಿವಾದ ಹುಟ್ಟುಹಾಕಿದೆ. ನನ್ನ ಉದ್ದೇಶ ಯಾರಿಗೂ ನೋವುಂಟು ಮಾಡುವ ಅಥವಾ ಕೋಪವನ್ನು ಉಂಟುಮಾಡುವುದಾಗಿರಲಿಲ್ಲ. ಅದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ. ಎಲ್ಲರನ್ನೂ ಒಂದು ಮಾಡಬೇಕು ಅನ್ನೋದು ನನ್ನ ಉದ್ದೇಶ ಆಗಿತ್ತು'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಹಿ ಘಟನೆಗಳಿಂದ ಕಲಿತ ಪಾಠ ಮರೆಯುವುದಿಲ್ಲ: ನಟಿ ಸಮಂತಾ
ಮುಂದುವರೆದು, ''ನಾನಂದುಕೊಂಡ ರೀತಿಯಲ್ಲಿ ಜನರು ಅದನ್ನು ಅರ್ಥಮಾಡಿಕೊಂಡಿಲ್ಲ. ಇದು ನನ್ನ ಹಿಂದೂ ಗೆಳೆಯರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಅದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆ ಕೇಳುತ್ತೇನೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ'' ಎಂದು ಪೋಸ್ಟ್ ಮಾಡಿದ್ದಾರೆ. ಈ ಹಿಂದಿನ ಪೋಸ್ಟ್ ನನ್ನ ಅನೇಕ ಹಿಂದೂ ಸಹೋದರರು ಮತ್ತು ಸಹೋದರಿಯರನ್ನು ನೋಯಿಸಿದೆ. ನಾನು ಏನು ಪೋಸ್ಟ್ ಮಾಡುತ್ತೇನೆ, ನನಗೆ ತಿಳಿದಿರುವ ವಿಷಯಗಳನ್ನು ನಾನು ಹೇಗೆ ಪೋಸ್ಟ್ ಮಾಡುತ್ತೇನೆ ಎಂಬುದರ ಕುರಿತು ನಾನು ಹೆಚ್ಚು ಗಮನ ಹರಿಸುತ್ತೇನೆ. ನಾನು ನಿಮ್ಮೆಲ್ಲರಲ್ಲಿ ಕ್ಷಮೆಯಾಚಿಸುತ್ತೇನೆ'' ಎಂದು ತಿಳಿಸಿದ್ದಾರೆ.
ಏನಿದು ಲಕ್ಕಿ ಅಲಿ ಪೋಸ್ಟ್ ವಿವಾದ?: ತಮ್ಮ ಹಿಂದಿನ ಪೋಸ್ಟ್‌ನಲ್ಲಿ ''ಬ್ರಾಹ್ಮಣ'' ಪದವು ''ಅಬ್ರಾಹಂ'' ಹೆಸರಿನಿಂದ ಬಂದಿದೆ ಎಂದು ಲಕ್ಕಿ ಅಲಿ ಪೋಸ್ಟ್ ಮಾಡಿದ್ದರು. ''ಧಾರ್ಮಿಕ ಗ್ರಂಥಗಳ ಪ್ರಕಾರ, ಅಬ್ರಾಮ್ ಅಕಾ ಅಬ್ರಹಾಂ ಅಕಾ ಇಬ್ರಾಹಿಂ ಎಲ್ಲ ರಾಷ್ಟ್ರಗಳ ತಂದೆ ಎಂದು ಪರಿಗಣಿಸಲಾಗಿದೆ. 'ಬ್ರಾಹ್ಮಣ' ಎಂಬ ಹೆಸರು 'ಬ್ರಹ್ಮ'ದಿಂದ ಬಂದಿದೆ. ಬ್ರಹ್ಮ ಪದವು 'ಅಬ್ರಾಮ್'ನಿಂದ ಬಂದಿದೆ. ಅಲ್ಲದೇ, ಇದು ಅಬ್ರಹಾಂ ಅಥವಾ ಇಬ್ರಾಹಿಂನಿಂದ ಬಂದಿರಬಹುದು. ಅಲ್ಲಾಹಿ ಸಲಾಂ ಎಲ್ಲ ರಾಷ್ಟ್ರಗಳ ಪಿತಾಮಹ.. ಹಾಗಾದರೆ ಜನರು ಪರಸ್ಪರ ತರ್ಕಿಸುವ ಬದಲು ಏಕೆ ಜಗಳವಾಡುತ್ತಿದ್ದಾರೆ?'' ಎಂದು ಅವರು ಬರೆದುಕೊಂಡಿದ್ದರು.
ಲಕ್ಕಿ ಅಲಿ ದಿವಂಗತ ಬಾಲಿವುಡ್ ನಟ ಮೆಹಮೂದ್ ಅವರ ಮಗ. ದೀರ್ಘ ಕಾಲದವರೆಗೆ ಯಾವುದೇ ಚಿತ್ರದಲ್ಲಿ ಲಕ್ಕಿ ಅಲಿ ಕಾಣಿಸಿಕೊಂಡಿಲ್ಲವಾದರೂ ದೇಶ ಮತ್ತು ವಿದೇಶಗಳಲ್ಲಿ ಸಂಗೀತ ಪ್ರದರ್ಶನವನ್ನು ನೀಡಿದ್ದಾರೆ. ''ಓ ಸನಮ್'', ''ಏಕ್ ಪಾಲ್ ಕಾ ಜೀನಾ'', ''ಸಫರ್ನಾಮ'' ಮತ್ತು ಇತರ ಹಿಟ್ ಹಾಡುಗಳ ಮೂಲಕ ಸಂಗೀತ ಅಭಿಮಾನಿಗಳಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಲಕ್ಕಿ ಅಲಿ ತಮ್ಮ ಬೆಂಗಳೂರಿನ ಜಮೀನನ್ನು ಭೂ ಮಾಫಿಯಾ ಮೂಲಕ ಐಎಎಸ್ ಅಧಿಕಾರಿಯೊಬ್ಬರ ಕುಟುಂಬದ ಸದಸ್ಯರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡುವ ಮೂಲಕ ಸುದ್ದಿಯಾಗಿದ್ದರು.
ಇದನ್ನೂ ಓದಿ: ಲಕ್ಕಿ ಅಲಿ ವಿರುದ್ಧ ಕಾನೂನು ಕ್ರಮ: ರೋಹಿಣಿ ಸಿಂಧೂರಿ