ಚೆನ್ನೈ (ತಮಿಳುನಾಡು): ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟ ವಿಜಯ್ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ಲಿಯೋ. ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ 'ಲಿಯೋ' ಇದೇ ಅಕ್ಟೋಬರ್ 19 ರಂದು ತೆರೆಗಪ್ಪಳಿಸಲಿದೆ.
ಇನ್ನೆರಡು ದಿನಗಳಲ್ಲಿ ಲಿಯೋ ಬಿಡುಗಡೆ ಆಗಲಿದ್ದು, ಅಭಿಮಾನಿಗಳಿಗೆ ಭರ್ಜರಿ ಸಿನಿಮೀಯ ಅನುಭವಗಳನ್ನು ನೀಡಲು ಚಿತ್ರ ತಯಾರಕರು ಪ್ರಯತ್ನಿಸುತ್ತಿದ್ದಾರೆ. ಹೌದು, ಬಹುನಿರೀಕ್ಷಿತ 'ಲಿಯೋ' ಸಿನಿಮಾ ಹಿಂದಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ 'ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಪ್ರೊಡಕ್ಷನ್' ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆ ಆಗುವ ಮೊದಲ ದಿನ (ಅ. 19) ಬೆಳಗ್ಗೆ 4 ಗಂಟೆಗೆ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಕೋರಿದೆ.
ಅಕ್ಟೋಬರ್ 19 ರಿಂದ ಅಕ್ಟೋಬರ್ 24ರ ವರೆಗೆ ಬೆಳಗ್ಗೆ 7 ಗಂಟೆಗೆ ಲಿಯೋ ಪ್ರದರ್ಶನಕ್ಕೆ ಅವಕಾಶ ನೀಡುವಂತೆಯೂ ಚಿತ್ರ ನಿರ್ಮಾಪಕರು ಮನವಿ ಮಾಡಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಇತ್ತೀಚಿನ ಸಿನಿಮಾಗಳಾದ ಪಠಾಣ್ ಹಾಗೂ ಜವಾನ್ ಮುಂಬೈನಲ್ಲಿ ಬೆಳಗಿನ ಆರರಿಂದ ಏಳು ಪ್ರದರ್ಶನಗಳೊಂದಿಗೆ ಮತ್ತು ದೆಹಲಿಯಲ್ಲಿ ಆರು ಪ್ರದರ್ಶನಗಳೊಂದಿಗೆ ತೆರೆಕಂಡಿವೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಸಿನಿಮಾಗಳ ಯಶಸ್ಸು ಮುಖ್ಯವಾಗಿ ಮೊದಲ ದಿನದ ಕಲೆಕ್ಷನ್ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಸ್ಪೆಷಲ್ ಶೋಗಳನ್ನು ಹೊಂದುವುದು ಮುಖ್ಯ. ಈ ಹಿನ್ನೆಲೆ, ಮುಂಜಾನೆಯ ಶೋಗಳಿಗೆ ಅನುಮತಿ ನೀಡಿ. ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು 'ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಪ್ರೊಡಕ್ಷನ್' ತಮ್ಮ ಅರ್ಜಿಯಲ್ಲಿ ತಿಳಿಸಿದೆ. ಮದ್ರಾಸ್ ಹೈಕೋರ್ಟ್ ಇಂದು ಅರ್ಜಿ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: ಕ್ಯಾನ್ಸರ್ ಜೊತೆ ಹೋರಾಡಿ 26ನೇ ವಯಸ್ಸಿಗೆ ಕೊನೆಯುಸಿರೆಳೆದ ಮಾಜಿ ವಿಶ್ವಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್
ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳಿರುವ ಲಿಯೋ ಸಿನಿಮಾ 2021ರ ಬ್ಲಾಕ್ಬಸ್ಟರ್ 'ಮಾಸ್ಟರ್' ಸಿನಿಮಾ ನಂತರ ವಿಜಯ್ ಮತ್ತು ಲೋಕೇಶ್ ಕನಕರಾಜ್ ಕಾಂಬಿನೇಶನ್ನ ಮತ್ತೊಂದು ಸಿನಿಮಾ. ಅಲ್ಲದೇ 14 ವರ್ಷಗಳ ಸುದೀರ್ಘ ಬ್ರೇಕ್ ಬಳಿಕ ವಿಜಯ್ ಹಾಗೂ ತ್ರಿಶಾ ಕೃಷ್ಣನ್ ತೆರೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 'ಪುನೀತ್ ರಾಜ್ಕುಮಾರ್ ಮನೆ ಮನೆಯ ಮಗ, ಸ್ಮಾರಕ ಪುನರಾಭಿವೃದ್ಧಿಗೆ ಸರ್ಕಾರ ಸಾಥ್': ಸಿಎಂ ಸಿದ್ದರಾಮಯ್ಯ
ಈ ಜೋಡಿ ಲಿಯೋ ಸಿನಿಮಾಗೂ ಮುನ್ನ ಗಿಲ್ಲಿ, ಕುರುವಿ, ತಿರುಪಾಚಿ, ಆತಿ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಲೋಕೇಶ್ ಕನಕರಾಜ್, ರತ್ನ ಕುಮಾರ್ ಮತ್ತು ದೀರಜ್ ವೈದಿ ಜಂಟಿಯಾಗಿ ಬರೆದಿರುವ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕೂಡ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ್ಯಕ್ಷನ್ ಪ್ಯಾಕ್ಡ್ ಲಿಯೋ ಚಿತ್ರದಲ್ಲಿ ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಪ್ರಿಯಾ ಆನಂದ್ ಹಾಗೂ ಮನ್ಸೂರ್ ಅಲಿ ಖಾನ್ ಸೇರಿದಂತೆ ಇತರ ನಟರು ಸಹ ಅಭಿನಯಿಸಿದ್ದಾರೆ.