ಸಾಹಸಸಿಂಹ ದಿ.ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಭೂಮಿ ನೀಡುವ ವಿಚಾರವಾಗಿ ಸಮಸ್ಯೆ ಉದ್ಭವಿಸಿದೆ. ರಾಜಧಾನಿ ಬೆಂಗಳೂರಿನಲ್ಲೇ ಭೂಮಿ ನೀಡಬೇಕೆಂಬ ಒತ್ತಾಯ ಮಾಡಲಾಗುತ್ತಿದೆ. ಈ ಕುರಿತು ಕೆಲವು ದಿನಗಳ ಹಿಂದೆ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಿತ್ತು. ಇಂದು ಡಾ.ವಿಷ್ಣುವರ್ಧನ್ ಸಂಘ ಹಾಗು ಕನ್ನಡ ಒಕ್ಕೂಟ ಸಂಘಗಳು ಜೊತೆಗೂಡಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸಿದ್ದು, ಫಿಲ್ಮ್ ಚೇಂಬರ್ಗೆ ಮುತ್ತಿಗೆ ಹಾಕಲು ಮುಂದಾದರು.
ಫಿಲ್ಮ್ ಚೇಂಬರ್ ಸಮೀಪ ಪೊಲೀಸ್ ಬಂದೋಬಸ್ತ್ ಇದ್ದುದರಿಂದ ಪ್ರತಿಭಟನಾಕಾರರನ್ನು ತಡೆಯಲಾಯಿತು. ಬಳಿಕ ಚೇಂಬರ್ ಅಧ್ಯಕ್ಷ ಎಂ.ಎನ್.ಸುರೇಶ್ ಅವರಿಗೆ, ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವಂತೆ ಅಭಿಮಾನಿಗಳು ಮನವಿ ಪತ್ರ ನೀಡಿದರು.
ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಎಂ.ಎನ್.ಸುರೇಶ್, ವಿಷ್ಣುವರ್ಧನ್ ಟ್ರಸ್ಟ್ ವಿಚಾರ ಬಂದಾಗ ಮನೆಯವರ ನಿರ್ಧಾರದ ಮೇರೆಗೆ ಸರ್ಕಾರ ಮೈಸೂರಿನಲ್ಲಿ ಜಾಗ ಕೊಟ್ಟಿದೆ. ಆದರೂ ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಕೊಡಬೇಕು ಎಂದು ಹೋರಾಟ ಮುಂದುವರೆದಿದೆ. ಇದಕ್ಕೆ ಸ್ಪಂದಿಸುವಂತಹ ಕೆಲಸವಾಗುತ್ತದೆ. ನಾಳೆ ಸಭೆ ನಡೆಸಿ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಅವರಿಂದ ಏನು ಉತ್ತರ ಬರುತ್ತದೆಯೋ ಅದಕ್ಕೆ ಕಾಯಬೇಕು. ನಮ್ಮ ಬಳಿ ಮಾತನಾಡದೇ ವಾಣಿಜ್ಯ ಮಂಡಳಿ ಸ್ಪಂದಿಸುತ್ತಿಲ್ಲ ಎಂದು ದೂಷಣೆ ಮಾಡುವುದು ತಪ್ಪು. ಮಂಡಳಿಗೆ ಅದರದೇ ಅದ ಗೌರವ, ಘನತೆ ಇದೆ ಎಂದು ಹೇಳಿದರು.
ಇದನ್ನೂ ಓದಿ: ವಿಷ್ಣು ಸ್ಮಾರಕಕ್ಕೆ ಭೂಮಿ ವಿಚಾರ: ದನಿಯೆತ್ತಿದ ಕಿಚ್ಚ, ಡಾಲಿ