ಕರ್ನಾಟಕದ ರಾಜರತ್ನ ಎಂದೇ ಖ್ಯಾತರಾಗಿದ್ದ ನಟ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಒಂದೂವರೆ ವರ್ಷ ಕಳೆದಿದೆ. ದಿನಗಳು ಉರುಳುತ್ತಿದ್ದರೂ ಆ ಪರಮಾತ್ಮನ ನೆನಪು ಅಭಿಮಾನಿಗಳ ಮನದಲ್ಲಿ ಜೀವಂತವಾಗಿದೆ. ಅಪ್ಪು ಇಂದು ನಮ್ಮೊಂದಿಗಿದ್ದಿದ್ದರೆ 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದ್ರೆ ವಿಧಿಯಾಟದಿಂದಾಗಿ ಅವರಿಂದು ನಮ್ಮೊಂದಿಗಿಲ್ಲ. ಹಾಗಾಗಿ ಅಭಿಮಾನಿಗಳೇ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಪುಣ್ಯ ಕಾರ್ಯಗಳು ಜರುಗುತ್ತಿವೆ.
2021ರ ಅಕ್ಟೋಬರ್ 29ರಂದು ಪುನೀತ್ ರಾಜ್ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು. ಚಿಕಿತ್ಸೆ ಫಲಕರಿಯಾಗದೇ ತೀವ್ರ ಹೃದಯಾಘಾತದಿಂದ ಪುನೀತ್ ರಾಜ್ಕುಮಾರ್ ಕೊನೆಯುಸಿರೆಳೆದರು. ಹಠಾತ್ತಾಗಿ ಕಾಣಿಸಿಕೊಂಡ ಹೃದಯಾಘಾತ ಹಿನ್ನೆಲೆ ಅಂದು ಪವರ್ ಸ್ಟಾರ್ ಇಹಲೋಕ ತ್ಯಜಿಸಿದರು. ಈ ಕಹಿ ಸುದ್ದಿ ತಿಳಿದು ಇಡೀ ಭಾರತ ದೇಶವೇ ಕಂಬನಿ ಮಿಡಿದಿತ್ತು. ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗ, ಗಣ್ಯರು ಸಹ ಕಣ್ಣೀರಿಟ್ಟಿದ್ದರು. ಮೆಚ್ಚಿನ ನಟನ ಸಾವಿನ ಸುದ್ದಿ ಕೇಳಿ ಹಲವು ಅಭಿಮಾನಿಗಳ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಸಾವಿನ ಬಹು ದಿನಗಳವರೆಗೂ ನೀರವ ಮೌನ ಆವರಿಸಿತ್ತು. ಬಳಿಕ ಅವರ ಹೆಸರಿನಲ್ಲಿ ಸಮಾಜ ಸೇವೆ ಆರಂಭಗೊಂಡಿತು.
ಪುನೀತ್ ರಾಜ್ಕುಮಾರ್ ಜನನ: ಪುನೀತ್ ರಾಜ್ಕುಮಾರ್ 1975ರ ಮಾ. 17ರಂದು ಚೆನ್ನೈನಲ್ಲಿ ಜನಿಸಿದ್ದರು. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಡಾ. ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಅವರ ಕಿರಿಯ ಪುತ್ರ. ನಟರಾದ ಶಿವ ರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಅವರ ಸಹೋದರರು. ಕಿರಿಯ ಪುತ್ರನಾದರೂ ಚಿಕ್ಕ ವಯಸ್ಸಿನಲ್ಲೇ ತಮ್ಮ ನಟನೆಯಿಂದ ಹೆಚ್ಚು ಗಮನ ಸೆಳೆದು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.
ಬಾಲ ನಟನಾಗಿ ಸಿನಿಪಯಣ ಆರಂಭ: 1976ರಲ್ಲಿ ಪ್ರೇಮದ ಕಾಣಿಕೆ ಎಂಬ ಚಿತ್ರದ ಮೂಲಕ ಮೊದಲ ಬಾರಿಗೆ ಬಾಲ ನಟನಾಗಿ ಅಪ್ಪು ಬಣ್ಣ ಹಚ್ಚಿದ್ದರು. ನಂತರ ಬೆಟ್ಟದ ಹೂ ಚಿತ್ರದಲ್ಲಿ ಬಾಲ ನಟನಾಗಿ ಗಮನ ಸೆಳೆದರು. ಈ ಚಿತ್ರದಲ್ಲಿ ಅಮೋಘ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ನಾಯಕ ನಟನಾಗಿ ಅಭಿನಯಿಸಿದ ಎರಡನೇ ಚಿತ್ರ 'ಅಭಿ' ನಟನೆಗೆ ರಾಜ್ಯ ಪ್ರಶಸ್ತಿ ಪಡೆದರು. ಬಳಿಕ ಪುನೀತ್ ಅನೇಕ ಹೀಟ್ ಚಿತ್ರಗಳನ್ನು ಮನೋರಂಜನಾ ಕ್ಷೇತ್ರಕ್ಕೆ ನೀಡಿದರು.
ಪುನೀತ್ ರಾಜ್ಕುಮಾರ್ ಸಿನಿಮಾಗಳು: 2002ರಲ್ಲಿ ಅಪ್ಪು ಸಿನಿಮಾ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಅಭಿ (2003), ಆಕಾಶ್ (2005), ಅರಸು (2007) ವೀರ ಕನ್ನಡಿಗ (2004), ಮೌರ್ಯ (2004), ಆಕಾಶ್ (2005), ಅಜಯ್ (2006), ಮಿಲನ (2007), ವಂಶಿ (2008), ರಾಮ್ (2009), ಜಾಕಿ (2010), ಪೃಥ್ವಿ (2010) ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014), ಯುವರತ್ನ (2021) ಸೇರಿದಂತೆ ಸುಮಾರು 29 ಚಿತ್ರಗಳಲ್ಲಿ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಗಂಧದ ಗುಡಿ ಇವರ ನಿಧನದ ನಂತರ ತೆರೆ ಕಂಡ ಸಾಕ್ಷ್ಯಚಿತ್ರ.
2012ರಲ್ಲಿ ದಿ. ನಟ ಪುನೀತ್ ರಾಜಕುಮಾರ್ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಅನ್ನು ನಿರೂಪಿಸಿದ್ದರು. ಈ ಕಾರ್ಯಕ್ರಮ ಬಹಳ ಜನಪ್ರಿಯತೆ ಗಳಿಸಿತ್ತು. ಇದಾದ ನಂತರ ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋ ಅನ್ನು ಕೂಡ ನಡೆಸಿಕೊಟ್ಟಿದ್ದರು. ಹಲವು ಸಿನಿಮಾಗಳನ್ನು ತಮ್ಮದೇ ಬ್ಯಾನರ್ನಲ್ಲಿ ನಿರ್ಮಿಸಿದ್ದ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನೇತ್ರಾವತಿ ಧಾರವಾಹಿಯ ನಿರ್ಮಾಪಕರೂ ಆಗಿದ್ದರು. 2011ರಲ್ಲಿ ಹುಡುಗರು ಚಿತ್ರಕ್ಕೆ, 2016ರಲ್ಲಿ ರಣವಿಕ್ರಮ ಚಿತ್ರಕ್ಕೆ, 2018ರಲ್ಲಿ ರಾಜಕುಮಾರ ಚಿತ್ರಕ್ಕೆ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.
ಫ್ಯಾಮಿಲಿ ಮ್ಯಾನ್ ಅಪ್ಪು: 1999 ಡಿಸೆಂಬರ್ 1ರಂದು ಅಶ್ವಿನಿ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದರು. ಇವರಿಗೆ ಇಬ್ಬರು ಪುತ್ರಿಯರೂ ಇದ್ದಾರೆ. ಸಿನಿಮಾ ಸಕ್ಸಸ್ ಜೊತೆಗ ಫ್ಯಾಮಿಲಿ ಮ್ಯಾನ್ ಆಗಿಯೂ ಗುರುತಿಸಿಕೊಂಡಿದ್ದರು. ಹೆಚ್ಚಿನ ಸಮಯವನ್ನು ತಮ್ಮ ಕುಟುಂಬ, ಪ್ರಿಯ ಜನರಿಗೆ ಮೀಸಲಿಟ್ಟಿದ್ದರು.
ನಗುಮೊಗದ ಒಡೆಯ ಎಂದೇ ಖ್ಯಾತರಾಗಿದ್ದ ಅಪ್ಪು ನಮ್ಮೊಂದಿಗಿಲ್ಲ ಅನ್ನೋದು ಬಹಳ ಬೇಸರದ ಸಂಗತಿ. ಆದ್ರೆ ಅವರ ನೆನಪುಗಳು ಅಬಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಅಪ್ಪು ನಿಧನದ ನಂತರ ಅವರು ಮಾಡಿದ್ದ ಅನೇಕ ಸಮಾಜ ಸೇವೆಗಳು ಬೆಳಕಿಗೆ ಬಂದವು. ಇದು ಅದೆಷ್ಟೋ ಮಂದಿಗೆ ಸ್ಫೂರ್ತಿ ಆಯಿತು. ಹಾಗಾಗಿ ಇಂದು ಅವರ ಹೆಸರಿನಲ್ಲಿ ಪುಣ್ಯ ಕಾರ್ಯಗಳು ನಡೆಯುತ್ತಿವೆ.
ಇದನ್ನೂ ಓದಿ: ಹ್ಯಾಪಿ ಬರ್ತ್ಡೇ ಅಶ್ವಿನಿ ಪುನೀತ್ ರಾಜ್ಕುಮಾರ್: ಅಪ್ಪು ಜನ್ಮದಿನದಂದು ಒಟಿಟಿಗೆ ಗಂಧದಗುಡಿ ಎಂಟ್ರಿ