ಕನ್ನಡದ ಹೆಸರಾಂತ ನಟ ಶಕ್ತಿಪ್ರಸಾದ್ ಪತ್ನಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿ ದೇವಮ್ಮ ಇಂದು ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮಿ ದೇವಮ್ಮ, ಇಂದು ಬೆಳಗ್ಗೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಲಕ್ಷ್ಮಿದೇವಮ್ಮ ಅವರಿಗೆ 83 ವರ್ಷ ವಯಸ್ಸಾಗಿತ್ತು. ಸದ್ಯ ಲಕ್ಷ್ಮಿದೇವಮ್ಮ ಪಾರ್ಥಿವ ಶರೀರವನ್ನು ಅಪೋಲೋ ಆಸ್ಪತ್ರೆಯಿಂದ, ಧ್ರುವ ಸರ್ಜಾರವರ ಕೆ. ಆರ್ ರಸ್ತೆಯ ನಿವಾಸಕ್ಕೆ ತರಲಾಗಿದ್ದು, ಕುಟುಂಬ ಮತ್ತು ಬಂಧು ಮಿತ್ರರ ಅಂತಿಮದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ನಟ ಶಕ್ತಿ ಪ್ರಸಾದ್ ಹಾಗೂ ಲಕ್ಷ್ಮಿದೇವಮ್ಮ ಅವರಿಗೆ ಮೂವರು ಮಕ್ಕಳು. ಕಿಶೋರ್ ಸರ್ಜಾ, ಅರ್ಜುನ್ ಸರ್ಜಾ ಹಾಗೂ ಅಮ್ಮಾಜಿ. ಕಿಶೋರ್ ಸರ್ಜಾ ಈಗಾಗಲೇ ಮೃತಪಟ್ಟಿದ್ದಾರೆ. ಎರಡು ವರ್ಷದ ಹಿಂದೆ ಮೊಮ್ಮಗ ಚಿರಂಜೀವಿ ಸರ್ಜಾನ ನಿಧನದಿಂದ ಲಕ್ಷ್ಮಿದೇವಮ್ಮ ಬಹಳವಾಗಿ ನೊಂದಿದ್ದರು.
ಇನ್ನು ಲಕ್ಷ್ಮಿದೇವಮ್ಮ ಅವರ ಅಂತ್ಯ ಸಂಸ್ಕಾರವನ್ನು ನಾಳೆ ಬೆಳಗ್ಗೆ 4 ಗಂಟೆಗೆ ಪತಿ ಶಕ್ತಿ ಪ್ರಸಾದ್ ಅವರ ಹುಟ್ಟೂರಾದ ತುಮಕೂರಿನ ಮಧುಗಿರಿ ಬಳಿಯ ಜಕ್ಕೇನಹಳ್ಳಿಯಲ್ಲಿ ನಡೆಸಲಾಗುವುದು ಎಂದು ಮಗ ನಟ ಅರ್ಜುನ್ ಸರ್ಜಾ ಹೇಳಿದ್ದಾರೆ.