ಗುರುವಾರ ಸಂಜೆ ಕೇಂದ್ರ ಸರ್ಕಾರ 69ನೇ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಮನರಂಜನಾ ಕ್ಷೇತ್ರದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ನಿರ್ದೇಶಕ ಕೇತನ್ ಮೆಹ್ತಾ ಅವರು ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಬಾಲಿವುಡ್ನ ಖ್ಯಾತ ನಟಿಯರಾದ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಳ್ಳಲಿದ್ದಾರೆ.
ಮಿಮಿ ಸಿನಿಮಾದಲ್ಲಿ ಅಸಾಧಾರಣ ಅಭಿನಯಕ್ಕಾಗಿ ಕೃತಿ ಸನೋನ್ ಅವರಿಗೆ ಅತ್ಯತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿದೆ. ಈ ಪ್ರಶಸ್ತಿ ಪ್ರಕಟ ಆದಾಗಿನಿಂದ ನಟಿ ಸಂತಸದಲೆಯಲ್ಲಿ ತೇಲುತ್ತಿದ್ದಾರೆ. ಈ ಯಶಸ್ಸಿನ ಕ್ಷಣವನ್ನು ಬಾಲಿವುಡ್ ಬಹುಬೇಡಿಕೆಯ ನಟಿ ಆಲಿಯಾ ಭಟ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿನ ಗಮನಾರ್ಹ ಪಾತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಬಾಲಿವುಡ್ನ ಇಬ್ಬರು ಹೆಸರಾಂತ ನಟಿಮಣಿಯರು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರರು ಅಭಿನಂದನೆ ಕೋರಿದ್ದಾರೆ. ಅಲ್ಲದೆ ಪರಸ್ಪರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಆದಿಪುರುಷ್ ನಟಿ ಕೃತಿ ಸನೋನ್ ಸಂದರ್ಶನವೊಂದರಲ್ಲಿ ಮಾತನಾಡುತ್ತ, ಪ್ರಶಸ್ತಿ ಪ್ರಕಟವಾದಾಗ ಆಲಿಯಾ ಭಟ್ ರಿಯಾಕ್ಷನ್ ಹೇಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. 69ನೇ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಕೃತಿ ಆಲಿಯಾರಿಗೆ ಕರೆ ಮಾಡಿದ್ದಾರೆ. ಫೋನ್ ಕರೆಯಲ್ಲಿ ಪರಸ್ಪರರ ಉತ್ಸಾಹ, ಸಂತಸ, ಹೆಮ್ಮೆ, ಮೆಚ್ಚುಗೆ, ಅಭಿನಂದನೆಗಳು ಭೇಟಿಯಾಗಿವೆ. ಬಹುಬೇಡಿಕೆ ನಟಿ ಆಲಿಯಾ ಭಟ್ ಅವರ ನಟನಾ ಪರಾಕ್ರಮವನ್ನು ಕೃತಿ ಒಪ್ಪಿಕೊಂಡು, ಮೆಚ್ಚಿ ಕೊಂಡಾಡಿದ್ದಾರೆ.
ಇದನ್ನೂ ಓದಿ: ಪತ್ನಿ, ಮಕ್ಕಳೊಂದಿಗೆ ಸಂಭ್ರಮಿಸಿದ 'ಅತ್ಯುತ್ತಮ ನಟ' ಅಲ್ಲು ಅರ್ಜುನ್; ಮಹೇಶ್ ಬಾಬುಗೆ ಬಂದಿತ್ತು ಪುಷ್ಪ ಆಫರ್!
ಸಂದರ್ಶನದಲ್ಲಿ, ಗಂಗೂಬಾಯಿ ಕಥಿಯಾವಾಡಿ ಸಿನಿಮಾದಲ್ಲಿನ ಆಲಿಯಾರ ಪಾತ್ರದ ಬಗ್ಗೆ ಕೃತಿ ಮೆಚ್ಚುಗೆಯ ಸುರಿಮಳೆಗೈದರು. ಅಸಾಧಾರಣ ಅಭಿನಯ ಎಂದು ಕೊಂಡಾಡಿದರು. ತಮ್ಮ ಮತ್ತು ಆಲಿಯಾರ ಪಾತ್ರಗಳನ್ನು ಸಮಾನಾಂತರವಾಗಿ ಗೌರವಿಸಿ, ಇಬ್ಬರೂ ಪರಸ್ಪರ ಸಿನಿಮಾಗಳಲ್ಲಿ ತಮ್ಮ ಪಾತ್ರಗಳಿಗೆ ಜೀವ ತುಂಬುವ ಪ್ರಯತ್ನ ಮಾಡಿದ್ದೇವೆಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 777'ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ಮಿಮಿ ಸಿನಿಮಾದಲ್ಲಿ ಕೃತಿ ಅವರ ಸಹನಟ ಪಂಕಜ್ ತ್ರಿಪಾಠಿ ತಮ್ಮ ಅತ್ಯುತ್ತಮ ಕೊಡುಗೆಗಾಗಿ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಕೃತಿ ಸನೋನ್ ಅವರು ಪಂಕಜ್ ತ್ರಿಪಾಠಿ ಅವರಿಗೂ ಫೋನ್ ಕರೆ ಮಾಡಿ ಸಂತಸ ಹಮಚಿಕೊಂಡಿದ್ದಾರೆ. ಕೃತಿ ಪಂಕಜ್ ತ್ರಿಪಾಠಿಯವರನ್ನು ತಮ್ಮ ಮೆಚ್ಚಿನ ಸಹನಟ ಎಂದು ಕರೆದಿದ್ದಾರೆ. ಉಳಿದಂತೆ ಆಲಿಯಾ ಭಟ್ ಮತ್ತು ಕೃತಿ ಸನೋನ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳುವ ಮೂಲಕ ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ. ಪೋಸ್ಟ್ನಲ್ಲಿ ನಟಿಯರು ಪರಸ್ಪರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.