ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಈಗಾಗಲೇ 8 ಸೀಸನ್ ಮುಕ್ತಾಯವಾಗಿದೆ. ಇದೀಗ ಓಟಿಟಿ ವೇದಿಕೆ ವೂಟ್‌ನಲ್ಲಿ ಹೊಸ ಸೀಸನ್ ಶುರುವಾಗಲು ವೇದಿಕೆ ರೆಡಿಯಾಗಿದೆ.
ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ಪ್ರೋಮೋ ಅನಾವರಣಗೊಂಡಿದ್ದು ನಟ ಕಿಚ್ಚ ಸುದೀಪ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 6 ರಂದು ಸಂಜೆ 7 ಗಂಟೆಯಿಂದ ಶೋ ಪ್ರಾರಂಭವಾಗಲಿದೆ. ಹೀಗಾಗಿ ಕಾರ್ಯಕ್ರಮದ ನಿರೂಪಕ ಸುದೀಪ್ ಮತ್ತು ಕಲರ್ಸ್ ಕನ್ನಡದ ಪ್ರೋಗ್ರಾಮಿಂಗ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.
ಪರಮೇಶ್ವರ್ ಗುಂಡ್ಕಲ್ ಮಾತನಾಡಿ, "ಈ ಬಿಗ್ಬಾಸ್ ಓಟಿಟಿಯಲ್ಲಿ ಈ ಬಾರಿ 16 ಸ್ಪರ್ಧಿಗಳಿರಲಿದ್ದಾರೆ. ಸಿನಿಮಾ, ಸಾಮಾನ್ಯ ವ್ಯಕ್ತಿಗಳು, ಸೋಷಿಯಲ್ ಮೀಡಿಯಾ ಸೇರಿದಂತೆ ಬೇರೇ ಬೇರೆ ಕ್ಷೇತ್ರದ ಸ್ಪರ್ಧಿಗಳಿರ್ತಾರೆ. ವೂಟ್‌ನಲ್ಲಿ 24/7 ಬಿಗ್ ಬಾಸ್ ಶೋ ಪ್ರಸಾರವಾಗಲಿದೆ. 6 ವಾರಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರ ಘೋಷಣೆ ಮಾಡಲಾಗುತ್ತದೆ" ಎಂದು ತಿಳಿಸಿದರು.
ಸುದೀಪ್ ಮಾತನಾಡಿ, "ಬಿಗ್ ಬಾಸ್ ಸ್ಪರ್ಧಿಗಳು ಅಂತಾ ಬಂದಾಗ ನಾನು ಯಾರನ್ನೂ ಸೂಚಿಸುವುದಿಲ್ಲ. ಯಾಕಂದ್ರೆ ನನಗೆ ಬಿಗ್ ಬಾಸ್ ಆರಂಭದಿಂದಲೂ ದೊಡ್ಡ ವಿಷಯ. ನಾನು ಶೋನಲ್ಲಿ ನಿರೂಪಣೆ ಮಾಡಬೇಕಾದ್ರೆ ನನಗೂ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಈಗಾಗಲೇ ಎಂಟು ಸೀಸನ್ ನಡೆಸಿಕೊಟ್ಟಿದ್ದು ನನ್ನಲ್ಲೂ ಸಾಕಷ್ಟು ವೈಯಕ್ತಿ ಬದಲಾವಣೆ ತಂದಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"ಶೋ ಆರಂಭದಿಂದಲ್ಲೂ ಕಾಸ್ಟೂಮ್‌ನಿಂದ ಹಿಡಿದು ಹೇರ್ ಸ್ಟೈಲ್‌ವರೆಗೂ ತುಂಬಾನೆ ಟೆನ್ಶನ್ ಇರುತ್ತದೆ. ಯಾಕಂದ್ರೆ ನಾನು ವೀಕೆಂಡ್ನಲ್ಲಿ ಯಾವ ರೀತಿ ಕಾಸ್ಟ್ಯೂಮ್ ಹಾಕಬೇಕು ಅನ್ನೋದು ಶೋ ನಿರ್ದೇಶಕರ ನಿರ್ಧಾರವೇ ಆಗಿರುತ್ತದೆ. ಇದರ ಜೊತೆಗೆ ನನಗೂ ನನ್ನ ಕಾಸ್ಟ್ಯೂಮ್ ಬಗ್ಗೆ ಹೆಚ್ಚು ಕಾಳಜಿ ಇರುತ್ತೆ. ನಾನು ಸ್ಕ್ರೀನ್ ಮೇಲೆ ಸ್ಟೈಲಿಷ್ ಆಗಿ ಕಾಣಿಸುವಲ್ಲಿ ನನ್ನ ಕಾಸ್ಟ್ಯೂಮ್ ಡಿಸೈನರ್ ಪಾತ್ರ ಹೆಚ್ಚಿರುತ್ತದೆ" ಎಂದರು.
ಕನ್ನಡದಲ್ಲಿ 8 ಬಿಗ್ ಬಾಸ್ ಸೀಸನ್‌ಗಳನ್ನು ಯಶಸ್ವಿಯಾಗಿ ನಿರೂಪಿಸಿರುವ ಸುದೀಪ್ ಅವರಿಗೂ ಕೆಲವೊಮ್ಮೆ ಸಮಸ್ಯೆಗಳು ಎದುರಾಗಿವೆಯಂತೆ. ಆ ಬಗ್ಗೆ ಮಾತನಾಡುತ್ತಾ, "ಕೆಲವೊಮ್ಮೆ 90 ಡಿಗ್ರಿ ಸೆಲ್ಸಿಯಸ್ ಜ್ವರ ಇದ್ರೂ ನಾನು ಕಾರ್ಯಕ್ರಮ ನಡೆಸಿಕೊಟ್ಟಿದ್ದೀನಿ. ಕೆಲವೊಮ್ಮೆ ನಾನು ಬೇರೆ ಊರಲ್ಲಿದ್ದರೂ ಎರಡೆರಡು ವಿಮಾನ ಮಾಡಿಕೊಂಡು ಬಂದು ಕಾರ್ಯಕ್ರಮ ನಡೆಸಿಕೊಟ್ಟಿದ್ದಿದೆ. ಯಾಕಂದ್ರೆ ನನ್ನ ಜೀವನದಲ್ಲಿ ಇದು ವಿಶೇಷ ಕಾರ್ಯಕ್ರಮ. ಈ ವಿಚಾರದಲ್ಲಿ ನನಗೂ ಸಾಕಷ್ಟು ಬಾರಿ ಪರಮೇಶ್ ಜೊತೆ ಸಣ್ಣ ಪುಟ್ಟ ಮನಸ್ತಾಪಗಳಾಗಿವೆ" ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಕಿರುತೆರೆ ಚಿತ್ರೀಕರಣದ ವೇಳೆ ಹಲ್ಲೆ: ನಟ ಚಂದನ್ ಕುಮಾರ್ ಹೇಳಿದ್ದೇನು?