ಭಾರತೀಯ ಚಿತ್ರರಂಗವಲ್ಲದೇ ವಿಶ್ವದಾದ್ಯಂತ ಟ್ರೈಲರ್ನಿಂದಲೇ ಸಖತ್ ಸೌಂಡ್ ಮಾಡುತ್ತಿರುವ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2. ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ, ಕೆಜಿಎಫ್ ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ತಂಡ ಕೆಜಿಎಫ್ ಚಾಪ್ಟರ್ 2 ಪ್ರಮೋಷನ್ ಮಾಡುತ್ತಿದೆ.
ಈ ಸಿನಿಮಾ ಬಿಡುಗಡೆ ಆಗಲು ಇನ್ನು 9 ದಿನಗಳು ಬಾಕಿ ಇವೆ. ಬಿಡುಗಡೆಗೂ ಮೊದಲೇ ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ದಕ್ಷಿಣ ಭಾರತದ ಖ್ಯಾತ ಚಿತ್ರಗಳು ಮಾಡದ ದಾಖಲೆಗಳನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾ ಮಾಡುತ್ತಿದೆ. ಅಮೆರಿಕಾದಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಕೇವಲ 12 ಗಂಟೆಗಳ ಅವಧಿಯಲ್ಲೇ 5,000 ಟಿಕೆಟ್ಗಳು ಸೇಲ್ ಆಗಿವೆ. ಈವರೆಗೆ ಯಾವುದೇ ಭಾರತೀಯ ಚಿತ್ರದ ಟಿಕೆಟ್ಗಳು ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೀ ಬುಕ್ಕಿಂಗ್ ಆಗಿರಲಿಲ್ಲ ಎಂದು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೇಳಲಾಗುತ್ತಿದೆ.
ಭಾರತ ಅಲ್ಲದೇ ಯುರೋಪ್, ಅಮೆರಿಕಾ, ರಷ್ಯಾ ಸೇರಿದಂತೆ ವಿಶ್ವದ ಹಲವೆಡೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ವಿಶೇಷವೆಂದರೆ ಎಲ್ಲೆಡೆ ಕನ್ನಡ ಸೇರಿದಂತೆ ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲೂ ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ಆದರೆ, ಗ್ರೀಸ್ನಲ್ಲಿ ರಿಲೀಸ್ ಆಗಲಿರುವ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಖ್ಯಾತಿಯನ್ನು ಕೆಜಿಎಫ್ 2 ಪಡೆಯಲಿದೆ. ಈ ವಿಚಾರವನ್ನ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಗ್ರೀಸ್ನಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಹಾಗೆಯೇ ಇಟಲಿಯಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಚಿತ್ರ ತೆರೆಕಾಣಲಿದೆ. ಇದರ ಜೊತೆಗೆ ರಷ್ಯಾದಲ್ಲೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ಆಗುತ್ತಿದೆ. ರಷ್ಯಾದಲ್ಲಿ ರಷ್ಯನ್ ಸಬ್ಟೈಟಲ್ ಮೂಲಕವೇ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ@26: ಬಹುಭಾಷೆಗಳಲ್ಲಿ ಮಿಂಚುತ್ತಿರುವ ಕನ್ನಡತಿಗೆ ಹ್ಯಾಪಿ ಬರ್ತ್‌ಡೇ!
ಇನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಅನ್ನು ಬರೋಬ್ಬರಿ 250 ಮಿಲಿಯನ್ ಗಟ್ಟಲೇ ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾಗೆ ಇರುವ ಕ್ರೇಜ್ ನೋಡಿದ್ರೆ ವಿಶ್ವದಾದ್ಯಂತ ಮೊದಲ ದಿನವೇ ಹೆಚ್ಚು ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿದೆ. ಚಿತ್ರದಲ್ಲಿ ರಾಕಿ ಅಬ್ಬರ ಹೇಗಿರುತ್ತೆ ಅನ್ನೋ ಕುತೂಹಲ ಹೆಚ್ಚಿದೆ. ಬಾಲಿವುಡ್ ನಟ ಸಂಜಯ್ ದತ್ ಅಧೀರನಾಗಿ ಸಿನಿಮಾದಲ್ಲಿ ನಟಿಸಿದ್ದಾರೆ.
ಪವರ್ ಫುಲ್ ಪಾತ್ರದಲ್ಲಿ ರವೀನಾ ಟಂಡನ್, ಬಹುಭಾಷಾ ನಟ ಪ್ರಕಾಶ್ ರಾಜ್, ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದು, ಭುವನ್ ಗೌಡ ಛಾಯಾಗ್ರಹಣವಿದೆ. ಪ್ರಶಾಂತ್ ನೀಲ್ ನಿರ್ದೇಶನವಿರುವ ಈ ಚಿತ್ರವನ್ನು ವಿಜಯ್ ಕಿರಗಂದೂರ್ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಬಿಡುಗಡೆಗೂ ಮುನ್ನವೇ ಇಷ್ಟೆಲ್ಲಾ ದಾಖಲೆ ಮಾಡಿರೋ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ನಂತರ ಯಾವೆಲ್ಲಾ ದಾಖಲೆ ಮಾಡಲಿದೆ ಎಂಬ ಕುತೂಹಲ ಚಿತ್ರರಂಗದಲ್ಲಿ ಹೆಚ್ಚಿದೆ.