ಕೋಯಿಕ್ಕೋಡ್(ಕೇರಳ): ಮದ್ಯಪಾನ, ಧೂಮಪಾನ, ಅಫೀಮು ಸೇವನೆ ಅಪಾಯಕಾರಿ ಎಂಬುದನ್ನು ಸಿನಿಮಾಗಳಲ್ಲಿ ತೋರಿಸಿ ಜಾಗೃತಿ ಮೂಡಿಸಲಾಗುತ್ತದೆ. ಆದರೆ, ಕೇರಳದ ಚಲನಚಿತ್ರ ನಿರ್ಮಾಪಕ ಒಮರ್ ಲುಲು ನಿಷೇಧಿತ ಡ್ರಗ್ಸ್ ಬಳಕೆಯ ಬಗ್ಗೆ ಪ್ರಚಾರ ಮಾಡಿದ ಆರೋಪದ ಮೇಲೆ ರಾಜ್ಯ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿದೆ.
ಕೇರಳದ ಸಿನಿಮಾ ನಿರ್ಮಾಪಕ ಒಮರ್ ಲುಲು, ತಮ್ಮ ಮುಂದಿನ ನಲ್ಲ ಸಮಯಂ ಸಿನಿಮಾದ ಟ್ರೇಲರ್ನಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಬಳಕೆಗೆ ಉತ್ತೇಜನ ನೀಡುವ ದೃಶ್ಯಗಳನ್ನು ಭಿತ್ತರಿಸಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿದೆ. ಯುವಜನರನ್ನು ದಾರಿ ತಪ್ಪಿಸುವ ಮಾಹಿತಿ ಇದಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆ ದೂರಿದೆ.
ಸಿನಿಮಾದ ಟ್ರೇಲರ್ನಲ್ಲಿ ಅವ್ಯಾಹತವಾಗಿ ಮದ್ಯಪಾನದ ದೃಶ್ಯಗಳಿವೆ. ಡ್ರಗ್ಸ್ ಸ್ವೀಕರಿಸುವುದು ತಪ್ಪಲ್ಲ ಎಂಬ ರೀತಿ ಚಿತ್ರಿಸಲಾಗಿದೆ. ಅಲ್ಲದೇ, ಶಾಸನಬದ್ಧ ಎಚ್ಚರಿಕೆಯನ್ನೂ ಹಾಕದೇ ನಿಯಮ ಉಲ್ಲಂಘಿಸಲಾಗಿದೆ. ಇದು ಇಲಾಖೆಯ ಗಮನಕ್ಕೆ ಬಂದಿದೆ. ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್, ಸಬ್‌ಸ್ಟೆನ್ಸ್ ಆ್ಯಕ್ಟ್, ಅಬಕಾರಿ ಕಾನೂನು ಅಡಿ ಸಿನಿಮಾ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಿ, ಕೋರ್ಟ್ಗೆ ವರದಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ನಿರ್ಮಾಪಕನ ಉದ್ಧಟತನ: ಇನ್ನು ಸಿನಿಮಾದಲ್ಲಿ ಅಹಸ್ಯಕರ ದೃಶ್ಯಗಳನ್ನು ತೋರಿಸಿದ್ದಲ್ಲದೇ, ಅದನ್ನು ನಿರ್ಮಾಪಕ ಒಮರ್ ಲುಲು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಫೇಸ್‌ಬುಕ್ ಪೋಸ್ಟ್ ಮಾಡಿರುವ ಆತ, ಸಿನಿಮಾವನ್ನು ಯುವ ಜನರು ಸ್ವೀಕರಿಸಿದ್ದಕ್ಕೆ ಸಂತೋಷವಾಗಿದೆ. ಈ ಬಗ್ಗೆ ಪೊಲೀಸ್ ಕ್ರಮವನ್ನು ಎದುರಿಸಬೇಕಾಗಬಹುದು. ಜಾಮೀನು ಪಡೆದ ನಂತರ ಈ ಬಗ್ಗೆ ಮಾತನಾಡುತ್ತೇವೆ ಎಂದು ಕುಚೋದ್ಯ ಮಾಡಿದ್ದಾನೆ.
ಓದಿ: ಶಿವರಾಜ್ ಕುಮಾರ್ ಸರ್ ಸರಳ ವ್ಯಕ್ತಿತ್ವಕ್ಕೆ ನಾನು ಅಭಿಮಾನಿ ಗಾನವಿ ಲಕ್ಷ್ಮಣ್