ಸಿಸಿಎಲ್ ಕ್ರಿಕೆಟ್ ಲೀಗ್ ಬಳಿಕ ದಕ್ಷಿಣ ಭಾರತದ ಸಿನಿಮಾ ಉದ್ಯಮ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕ್ರಿಕೆಟ್ ಟೂರ್ನಿ ಅಂದ್ರೆ ಅದು ಕೆಸಿಸಿ. 'ಕರ್ನಾಟಕ ಚಲನಚಿತ್ರ ಕಪ್' ಹೆಸರಿನಲ್ಲಿ ಇಡೀ ಕನ್ನಡ ಚಿತ್ರರಂಗದ ಕಲಾವಿದರೆಲ್ಲರೂ ಒಂದೆಡೆ ಸೇರಿ ಒಗ್ಗಟ್ಟು ಪ್ರದರ್ಶಿಸುವ ವೇದಿಕೆ ಇದು. ಈಗಾಗಲೇ ಕೆಸಿಸಿ ಸೀಸನ್ 2 ಯಶಸ್ವಿಯಾಗಿದ್ದು ನಟ ಸುದೀಪ್ ನೇತೃತ್ವದಲ್ಲಿ ಇದೀಗ ಕೆಸಿಸಿ ಸೀಸನ್ 3 ಶುರುವಾಗಲು ಮುಹೂರ್ತ ನಿಗದಿಯಾಗಿದೆ.
ಫೆಬ್ರವರಿ 24 ಹಾಗೂ 25ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ. ನಿನ್ನೆ(ಗುರುವಾರ) 6 ತಂಡಗಳ ಆಟಗಾರರ ಆಯ್ಕೆ ಪ್ರಕ್ರಿಯೆ ಇದೇ ಸ್ಟೇಡಿಯಂ ಹಾಲ್‌ನಲ್ಲಿ ನಡೆಯಿತು. ಬಿಡ್ಡಿಂಗ್ ಪ್ರಕ್ರಿಯೆ ಐಪಿಎಲ್ ಬಿಡ್ಡಿಂಗ್ ರೀತಿಯೇ ಕಂಡುಬಂತು. ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಗಣೇಶ್, ಜಗ್ಗೇಶ್, ಧನಂಜಯ್ , ಧ್ರುವ ಸರ್ಜಾ, ನಟಿಯರಾದ ರಮ್ಯಾ, ಸುಧಾರಾಣಿ, ಶ್ರುತಿ, ತಾರಾ ಅನುರಾಧ, ಮಾಲಾಶ್ರೀ, ಅನುಪ್ರಭಾಕರ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ , ಸಚಿವರಾದ ಅಶ್ವತ್ಥ್ ನಾರಾಯಣ್, ಮುನಿರತ್ನ, ಸುಧಾಕರ್, ಪೊಲೀಸ್ ಅಧಿಕಾರಿ ದೇವರಾಜ್, ಸೇರಿದಂತೆ ಕೆಲ ನಟರು ಹಾಗೂ ನಿರ್ದೇಶಕರು, ತಂತ್ರಜ್ಞಾನರು ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಕೆಸಿಸಿ ಸೀಸನ್ 3ರ ಸ್ಪೆಷಲ್ ಸೆಲೆಬ್ರಿಟಿಯಾಗಿ ರವಿಚಂದ್ರನ್ ಹಾಗೂ ರಮ್ಯಾ ಆಯ್ಕೆಯಾಗಿದ್ದು, ಕಳೆದ ವರ್ಷ ಚಾಂಪಿಯನ್ ಆಗಿದ್ದ ಗಣೇಶ್, ಕೆಸಿಸಿ ಕಪ್ ಅನ್ನು ರಮ್ಯಾ ಅವರ ಕೈಯಲ್ಲಿ ಅನಾವರಣ ಮಾಡಿಸಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಕೆಸಿಸಿಯಲ್ಲಿ ಒಟ್ಟು ಆರು ತಂಡಗಳಿದ್ದು, ಈ ಆರು ತಂಡಗಳಿಗೆ ಮೆಂಟರ್ ಹಾಗೂ ಸ್ಟಾರ್ ಸೆಲೆಬ್ರಿಟಿ ಮತ್ತು ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ತಂಡದ ಹೆಸರು, ಮೆಂಟರ್‌ಗಳು ಯಾರು?: ಮೊದಲ ತಂಡದ ಮೆಂಟರ್ ಆಗಿ ನಿರ್ದೇಶಕ ನಂದ ಕಿಶೋರ್ ಆಯ್ಕೆಯಾದರು. ಈ ತಂಡದ ಸ್ಟಾರ್ ಸೆಲೆಬ್ರಿಟಿ ಕಿಚ್ಚ ಸುದೀಪ್. 11 ಆಟಗಾರರನ್ನು ಆಯ್ಕೆ ಮಾಡಲಾಯಿತು. ತಂಡದ ಹೆಸರು ಹೊಯ್ಸಳ ಈಗಲ್ಸ್. ಎರಡನೇ ತಂಡದ ಹೆಸರು ಗಂಗಾ ವಾರಿಯರ್ಸ್. ತಂಡದ ಮೆಂಟರ್ ಕೆ.ಆರ್.ಜಿ ಕಾರ್ತಿಕ್. ಸ್ಟಾರ್ ಫೇಸರ್ ಆಗಿ ಧನಂಜಯ್ ಆಯ್ಕೆಯಾಗಿದ್ದಾರೆ. ಮೂರನೇ ತಂಡದ ಹೆಸರು ವಿಜಯನಗರ ಪೇಟ್ರಿಯಾಟ್ಸ್. ಇದಕ್ಕೆ ಮೆಂಟರ್ ಜೊತೆ ಸ್ಟಾರ್ ಸೆಲೆಬ್ರಿಟಿಯಾಗಿ ಉಪೇಂದ್ರ ಇದ್ದಾರೆ. 11 ಜನ ಆಟಗಾರರನ್ನು ಸೆಲೆಕ್ಟ್ ಮಾಡಲಾಯಿತು.
ಇದನ್ನೂ ಓದಿ: ಕೆಸಿಸಿ ಸೀಸನ್-3.. ದಿನಾಂಕ ಪ್ರಕಟಿಸಿದ ಕಿಚ್ಚ ಸುದೀಪ್
ನಾಲ್ಕನೇ ತಂಡದ ಮೆಂಟರ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್. ಈ ತಂಡದ ಸ್ಟಾರ್ ಸೆಲೆಬ್ರಿಟಿ ಗೋಲ್ಡನ್ ಸ್ಟಾರ್ ಗಣೇಶ್. ಐದನೇ ತಂಡದ ಹೆಸರು ರಾಷ್ಟ್ರಕೂಟ ಪ್ಯಾಂಥರ್ಸ್. ಇದಕ್ಕೆ ಮೆಂಟರ್ ಆಗಿ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಇದ್ದಾರೆ. ತಂಡದ ಸ್ಟಾರ್ ಸೆಲೆಬ್ರಿಟಿ ಧ್ರುವ ಸರ್ಜಾ. ಆರನೇ ತಂಡದ ಹೆಸರು ಒಡೆಯರ್ ಚಾರ್ಜರ್ಸ್. ಇದಕ್ಕೆ ಮೆಂಟರ್ ಆಗಿ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಸೆಲೆಕ್ಟ್ ಆಗಿದ್ದಾರೆ. ಸ್ಟಾರ್ ಸೆಲೆಬ್ರಿಟಿಯಾಗಿ ಶಿವರಾಜ್ ಕುಮಾರ್ ಇದ್ದಾರೆ.
ಈ ವರ್ಷ ಕೂಡ 6 ಜನ ಇಂಟರ್ ನ್ಯಾಷನಲ್ ಕ್ರಿಕೆಟ್ ಆಟಗಾರರು ಒಂದೊಂದು ತಂಡದಲ್ಲಿ ಆಡಲಿದ್ದಾರೆ. ಸಿನಿಮಾ ಸ್ಟಾರ್ಗಳೊಂದಿಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಪ್ಲೇಯರ್ಸ್ ಆಡುತ್ತಿರುವುದು ಕನ್ನಡ ಸಿನಿಮಾಪ್ರಿಯರು ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ಸಿಗಲಿದೆ.
ಪುನೀತ್ ಸ್ಮರಣೆ: ಆಟಗಾರರ ಬಿಡ್ಡಿಂಗ್ ಮಧ್ಯೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ನೆನಪಿಸಿಕೊಳ್ಳುವ ಕಾರ್ಯವಾಯಿತು. ಹಿಂದಿನ ಎರಡು ಕೆಸಿಸಿ ಸೀಸನ್ನಲ್ಲಿ ಪುನೀತ್ ರಾಜ್‍ಕುಮಾರ್ ಸ್ಟಾರ್ ಸೆಲೆಬ್ರಿಟಿಯಾಗಿದ್ದರು.