ಬೆಂಗಳೂರು: ಲವ್ ರಂಜನ್ ನಿರ್ದೇಶನದ 'ಪ್ಯಾರ್ ಕಾ ಪಂಚನಾಮ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಕಾರ್ತಿಕ್ ಆರ್ಯನ್ ಜನ ಮೆಚ್ಚಿದ ನಟನೆಂಬ ಗೌರವ ಪಡೆದವರು. ಇದೀಗ ಅವರ ಅಭಿನಯದ ಹೊಸ ಸಿನಿಮಾ, ಕಬೀರ್ ಖಾನ್ ನಿರ್ದೇಶನದ 'ಚಂದು ಚಾಂಪಿಯನ್' ಬರುತ್ತಿದೆ. ಈ ಚಿತ್ರದಲ್ಲಿ ಕಾರ್ತಿಕ್ ಒಂದೇ ಟೇಕ್ನಲ್ಲಿ ಭರ್ಜರಿ ಸಾಹಸ ಸನ್ನಿವೇಶ ನಡೆಸಿದ್ದಾರೆ. 8 ನಿಮಿಷದ ದೃಶ್ಯ ಇದಾಗಿದೆ.
'ಚಂದ್ರ ಚಾಂಪಿಯನ್' ದೇಶದ ಹೆಮ್ಮೆಯ ಕ್ರೀಡಾಳುವಿನ ಕಥೆ ಹೊಂದಿದೆ. ಕಾರ್ತಿಕ್ ಆರ್ಯನ್ ಇದೇ ಮೊದಲ ಬಾರಿಗೆ ಕ್ರೀಡೆಗೆ ಸಂಬಂಧಿಸಿದ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಎರಡನೇ ಹಂತದ ಚಿತ್ರೀಕರಣ ಆರಂಭವಾಗಿದ್ದು, 8 ನಿಮಿಷದ ಸಾಹಸ ಚಿತ್ರವನ್ನು ಕಾರ್ತಿಕ್ ಒಂದೇ ಟೇಕ್ನಲ್ಲಿ ಮುಗಿಸಿದ್ದಾರೆ. ಈ ದೃಶ್ಯದ ಮತ್ತೊಂದು ವಿಶೇಷತೆ ಎಂದರೆ, ಇದನ್ನು ಸಮುದ್ರ ಮಟ್ಟದಿಂದ 9,000 ಅಡಿ ಎತ್ತರದಲ್ಲಿ ದೃಶ್ಯೀಕರಣ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಆರು ಕಣಿವೆಗಳಲ್ಲಿ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಚಿತ್ರವು 1965ರ ಸಂಘರ್ಷವನ್ನು ಚಿತ್ರಿಸುತ್ತದೆ. ದೃಶ್ಯೀಕರಣಕ್ಕೆ ಸಿನಿಮಾ ತಂಡ ದೊಡ್ಡ ಸೇನಾ ಶಿಬಿರವನ್ನೇ ನಿರ್ಮಿಸಿತ್ತು. ವಿಜಯ್ ರಾಜ್ ಮತ್ತು ಭುವನ್ ಅರೋರಾ ಸೇರಿದಂತೆ ಅನೇಕ ತಾರೆಗಳಿದ್ದು, ಐದು ದಿನಗಳ ಸುದೀರ್ಘ ತಾಲೀಮು ನಡೆಸಿದ್ದರು.
ನಟ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದು, 8 ನಿಮಿಷದ ಸಿಂಗಲ್ ಶಾಟ್ ನಿಜಕ್ಕೂ ಸವಾಲಾಗಿತ್ತು. ಅದ್ಬುತವಾಗಿ ಮೂಡಿ ಬಂದಿದೆ. ಕಷ್ಟವಾಗಿದ್ದರೂ ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದೃಶ್ಯ ಎಂದು ತಿಳಿಸಿದ್ದಾರೆ.
'ಚಂದು ಚಾಂಪಿಯನ್' ಚಿತ್ರವನ್ನು ಸಜೀದ್ ನಡಿಯವಾಲಾ ನಿರ್ಮಾಣ ಮಾಡುತ್ತಿದ್ದಾರೆ. ಫ್ರಿ ಸ್ಟೈಲ್ ಸ್ವಿಮ್ಮರ್ ಮುರಳೀಕಾಂತ್ ಪೆಟ್ಕರ್ ಕಥಾಧಾರಿತ ಸಿನಿಮಾವಿದು. ಇವರು ಭಾರತದ ಮೊದಲ ಪ್ಯಾರಾಲಿಂಪಿಕ್ ಗೋಲ್ಡ್ ಮೆಡಲಿಸ್ಟ್ ಆಗಿದ್ದಾರೆ. ಚಿತ್ರತಂಡ ಆಗಸ್ಟ್ನಲ್ಲಿ ಲಂಡನ್ನಲ್ಲಿ ಚಿತ್ರೀಕರಣ ಮುಗಿಸಿದ್ದು, ಇದೀಗ ಸೆಪ್ಟೆಂಬರ್ನಲ್ಲಿ ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಿದೆ. 2024ಕ್ಕೆ ತೆರೆಗೆ ತರುವ ಯೋಜನೆ ನಡೆಯುತ್ತಿದೆ.
ಕಾರ್ತಿಕ್ ಆರ್ಯನ್ ಅಶಿಕಿ 3, ಭೋಲ್ ಬೊಲಯ್ಯ 3 ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಇದರೊಂದಿಗೆ ಶಿಮಿತ್ ಅಮಿನ್ ಅವರ ಮ್ಯೂಸಿಕ್ ಆಧಾರಿತ ಚಿತ್ರದೊಂದಿಗೆ ಕೂಡ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಆಸ್ಕರ್ ಲೈಬ್ರೆರಿ ಸೇರಲಿದೆ 'ದಿ ವ್ಯಾಕ್ಸಿನ್ ವಾರ್' ಸಿನಿಮಾ; ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಂತಸ