ಕನ್ನಡ ಚಿತ್ರರಂಗದ ಮಾತೃ ಸಂಸ್ಥೆ ಎಂದು ಕರೆಸಿಕೊಂಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಚಿತ್ರರಂಗದಲ್ಲಿ ಸಿನಿಮಾ ಶೀರ್ಷಿಕೆಯಿಂದ ಹಿಡಿದು, ಚಿತ್ರರಂಗದ ಅಭಿವೃದ್ಧಿವರೆಗೆ ಕನ್ನಡ ಫಿಲ್ಮ್ ಚೇಂಬರ್ ಕಾರ್ಯ ನಿರ್ವಹಿಸಲಿದೆ. ಈ ಹಿನ್ನೆಲೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರ ಮೇಲೆ ಸಾಕಷ್ಟು ಜವಾಬ್ದಾರಿ ಇರುತ್ತದೆ.
ಪ್ರತಿ ಬಾರಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ದೊಡ್ಡ ಮಟ್ಟದ ಪೈಪೋಟಿ ಇರುತ್ತದೆ. 2023ನೇ ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರೇಸ್ ಕೋರ್ಸ್ ರಸ್ತೆಯಲ್ಲಿರೋ ಫಿಲ್ಮ್ ಚೇಂಬರ್ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಎಲೆಕ್ಷನ್ ನಡೆಯುತ್ತಿದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕಾಗಿ ಶಿಲ್ಪಾ ಶ್ರೀನಿವಾಸ್, ಎನ್.ಎಂ ಸುರೇಶ್, ಎ. ಗಣೇಶ್ ಹಾಗೂ ಮಾರ್ಸ್ ಸುರೇಶ್ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಇವರ ಪೈಕಿ ಯಾರು ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಚುನಾವಣೆಗೂ ಮುನ್ನ ಸರ್ವ ಸದ್ಯಸ್ಯರ ಸಭೆ ನಡೆದಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಭಾ ಮಾ ಹರೀಶ್ ಅವರ ತಂಡದಿಂದ ಒಂದು ವರ್ಷದಲ್ಲಿ ಏನು ಕೆಲಸಗಳು ಆಗಿವೆ, ಯಾವೆಲ್ಲಾ ಕೆಲಸಗಳು ಬಾಕಿ ಇವೆ ಎಂಬುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಫಿಲ್ಮ್ ಚೇಂಬರ್ ಎಲೆಕ್ಷನ್ ಶುರುವಾಗಿದೆ. ಸಂಜೆ ಆರು ಗಂಟೆವರೆಗೆ ವೋಟಿಂಗ್ಗೆ ಅವಕಾಶ ಇರಲಿದೆ. ನಂತರ ಮತ ಎಣಿಕೆ ಆರಂಭ ಆಗಲಿದೆ. ರಾತ್ರಿ 9ಗಂಟೆ ಸುಮಾರಿಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಮರೀಚಿ ಟೀಸರ್: ಸೋನುಗೌಡ ಜೊತೆ ಕ್ರೈಮ್ ಥ್ರಿಲ್ಲರ್ ಕಥೆಯೊಂದಿಗೆ ಬಂದ ವಿಜಯ್ ರಾಘವೇಂದ್ರ
ಕಳೆದ ವರ್ಷ ಭಾ.ಮಾ ಹರೀಶ್ ಅವರು ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅವರ ಅವಧಿ ಮುಗಿದಿದ್ದರೂ ಕೂಡ ಚುನಾವಣೆ ನಡೆಸಿಲ್ಲ ಎಂದು ಕೆಲವರು ಆಕ್ಷೇಪ ಎತ್ತಿದ್ದರು. ಇಂದು ಚುನಾವಣೆ ನಡೆಯುತ್ತಿದೆ. ನಿರ್ಮಾಪಕರು, ಪ್ರದರ್ಶಕರು ಹಾಗೂ ವಿತರಕರ ವಲಯದಿಂದ ಅನೇಕರು ಬಂದು ಮತ ಚಲಾಯಿಸಲಿದ್ದಾರೆ. 1,600 ಸದಸ್ಯರು ಭಾಗಿ ಆಗಲಿದ್ದಾರೆ. ಚಿತ್ರರಂಗಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಇವೆ. ಸಬ್ಸಿಡಿ ವಿಳಂಬ, ಪೈರಸಿ ಕಾಟ, ಸಂಭಾವನೆ ತಾರತಮ್ಯ, ಚಿತ್ರೀಕರಣಕ್ಕೆ ಸಿಂಗಲ್ ವಿಂಡೋ ಅನುಮತಿ ಸಿಗದೇ ಇರುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಂಡಳಿ ಪ್ರಯತ್ನಿಸಬೇಕಿದೆ. ಸದ್ಯ ಅಧ್ಯಕ್ಷ ಸ್ಥಾನಕ್ಕೆ ಶಿಲ್ಪಾ ಶ್ರೀನಿವಾಸ್, ಎನ್.ಎಂ ಸುರೇಶ್, ಎ. ಗಣೇಶ್ ಹಾಗೂ ಮಾರ್ಸ್ ಸುರೇಶ್ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಯಾರು ಅಧ್ಯಕ್ಷ ಸ್ಥಾನದ ಗದ್ದುಗೆ ಏರುತ್ತಾರೆ ಅನ್ನೋದು ಇಂದು ಗೊತ್ತಾಗಲಿದೆ.
ಇದನ್ನೂ ಓದಿ: ವಿನೋದ್ ಪ್ರಭಾಕರ್ 'ಫೈಟರ್' ಸಿನಿಮಾಗೆ ಕನ್ನಡಪರ ಹೋರಾಟಗಾರರ ಸಾಥ್: ರಿಲೀಸ್ ಡೇಟ್ ಅನೌನ್ಸ್