ನಿರ್ದೇಶಕ ಹಾಗೂ ನಟನಾಗಿ ತನ್ನದೇ ಬೇಡಿಕೆ ಹೊಂದಿರುವ ರಿಷಬ್ ಶೆಟ್ಟಿ ಕಾಂತಾರ ಸಿನಿಮಾವನ್ನ ಅಭಿನಯದ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಸದ್ಯ ಕಾಂತಾರ ಚಿತ್ರದ ಮೊದಲ ಹಾಡು ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಗೀತರಚನೆಕಾರ ಪ್ರಮೋದ್ ಮರವಂತೆ ರಚಿಸಿರುವ ಸಿಂಗಾರ ಸಿರಿಯೆ ಎಂಬ ಮನಮೋಹಕ ಹಾಡಿನಲ್ಲಿ ಜಾನಪದ ಸೊಗಡನ್ನು ಎತ್ತಿಹಿಡಿಯಲಾಗಿದೆ.
ಗಾಯಕ ವಿಜಯ್ ಪ್ರಕಾಶ್, ಅನನ್ಯ ಭಟ್ ಹಾಗೂ ನಾಗರಾಜ್ ಪನ್ನಾರ್ ವಲ್ಟುರ್ ಅವರ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಕಾಂತಾರ ಸಿನಿಮಾವನ್ನ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕ ವಿಜಯ್ ಕಿರಗಂದೂರು ಸಿದ್ಧತೆ ನಡೆಸಿದ್ದಾರೆ. ದಕ್ಷಿಣ ಕನ್ನಡದ ದೇಸಿ ಕ್ರೀಡೆ ಕಂಬಳದ ಕಥೆ ಆಧರಿಸಿರೋ ಕಾಂತಾರ ಸಿನಿಮಾ ಸಹಜವಾಗಿ ಗಾಂಧಿನಗರಲ್ಲಿ ಕುತೂಹಲ ಹುಟ್ಟಿಸಿದೆ.