ಕಾಂತಾರ... ವಿಶೇಷ ಪರಿಚಯ ಬೇಕಿಲ್ಲ. ಕನ್ನಡ ಚಿತ್ರರಂಗದ ಕೀರ್ತಿ. ಸ್ಯಾಂಡಲ್ವುಡ್ನ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಾಗೂ ಜನಪ್ರಿಯ ನಟ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿ ಬಂದ ಅದ್ಭುತ ಸಿನಿಮಾ. ಈ ಸಿನಿಮಾ ಮೂಲಕ ರಿಷಬ್ ಶೆಟ್ಟಿ ತಮ್ಮ ಜನಪ್ರಿಯತೆಯನ್ನು ನೂರು ಪಟ್ಟು ಹೆಚ್ಚಿಸಿಕೊಂಡರು. ಡಿವೈನ್ ಸ್ಟಾರ್ ಎಂದೇ ಖ್ಯಾತರಾದರು. ಇಂದಿಗೂ ಈ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತದೆ. ಈ ಸೂಪರ್ ಹಿಟ್ ಸಿನಿಮಾ ಚಿತ್ರಮಂದಿರಕ್ಕೆ ಧಾವಿಸಿ ಒಂದು ವರ್ಷ ಪೂರೈಸಿದೆ. ಒಂದು ವರ್ಷದ ಸಂಭ್ರಮದಲ್ಲಿರುವ ಕಾಂತಾರ ಚಿತ್ರತಂಡ ಸಂತಸ ಹಂಚಿಕೊಂಡಿದೆ.
ಸಿನಿಮಾ ಒಂದು ವರ್ಷ ಪೂರೈಸಿರುವ ಹಿನ್ನೆಲೆ ಹೊಂಬಾಳೆ ಫಿಲ್ಮ್ಸ್ ವರಾಹ ರೂಪಂ ವಿಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿರುವ ಹೊಂಬಾಳೆ ಫಿಲ್ಮ್ಸ್, ''ಕ್ರೀಡಾಂಗಣಗಳಲ್ಲಿ ಪ್ರತಿಧ್ವನಿಸುವುದರಿಂದ ಹಿಡಿದು, ನಮ್ಮ ಪ್ರತೀ ಹಬ್ಬಗಳಲ್ಲಿ, ಬೆಳಗಿನ ಆಚರಣೆಗಳಲ್ಲಿ, ಎಚ್ಚರಗೊಳಿಸುವ ಕರೆಯಾಗಿ ಈ ಹಾಡು ನಮ್ಮ ಜೀವನದಲ್ಲಿ ಅಳಿಸಲಾಗದ ಒಂದು ಗುರುತಾಗಿ ಬಿಟ್ಟಿದೆ. ನಾವು ಬಹು ನಿರೀಕ್ಷಿತ 'ವರಾಹ ರೂಪಂ' ಅನ್ನು ಅನಾವರಣಗೊಳಿಸಲು ನಿರ್ಧರಿಸಿದ್ದೇವೆ ಎಂದು ಬರೆದುಕೊಂಡಿದೆ.
''ಡಿವೈನ್ ಬ್ಲಾಕ್ ಬಸ್ಟರ್ ಕಾಂತಾರಕ್ಕೆ ಒಂದು ವರ್ಷದ ಸಂಭ್ರಮ. ನಾವು ಎಂದಿಗೂ ಮೆಚ್ಚುವ ಒಂದು ವಿಶೇಷ ಚಿತ್ರ. ಸಿನಿಮಾವನ್ನು ಬ್ಲಾಕ್ ಬಸ್ಟರ್ ಆಗಿ ಪರಿವರ್ತಿಸಿದ ನಮ್ಮ ಪ್ರೇಕ್ಷಕರಿಗೆ ನಮ್ಮ ಕಡೆಯಿಂದ ಹೃತ್ಪೂರ್ವಕ ಕೃತಜ್ಞತೆಗಳು. ಮರೆಯಲಾಗದ ವರ್ಷಕ್ಕಾಗಿ ಬಹಳ ಧನ್ಯವಾದಗಳು. ಈ ಸಂಭ್ರಮಗಳು ದೇಶಾದ್ಯಂತ ಪ್ರತಿಧ್ವನಿಸುತ್ತಲೇ ಇವೆ. ಈ ಅದ್ಭುತ ಪ್ರಯಾಣವನ್ನು ಒಟ್ಟಿಗೆ ಮುಂದುವರಿಸುವ ಬಗ್ಗೆ ನಾವು ಬಹಳ ಉತ್ಸುಕರಾಗಿದ್ದೇವೆ'' - ಹೊಂಬಾಳೆ ಫಿಲ್ಮ್ಸ್, ರಿಷಬ್ ಶೆಟ್ಟಿ.
ಇದನ್ನೂ ಓದಿ: 'ಕಾವೇರಿ'ದ ಕಿಚ್ಚು: ತಮಿಳು ನಟ ಸಿದ್ಧಾರ್ಥ್ ಬಳಿ ಕ್ಷಮೆಯಾಚಿಸಿದ ಶಿವ ರಾಜ್ಕುಮಾರ್
ಚಿತ್ರದ ನಾಯಕ ನಟಿ ಸಪ್ತಮಿ ಗೌಡ ಅವರು ನಿನ್ನೆ ಇನ್ಸ್ಟಾಗ್ರಾಮ್ನಲ್ಲಿ ಸರಣಿ ಚಿತ್ರಗಳನ್ನು ಹಂಚಿಕೊಂಡು ಹೃದಯಸ್ಪರ್ಶಿ ಬರಹಗಳನ್ನು ಬರೆದುಕೊಂಡಿದ್ದರು. ''ಸೆಪ್ಟೆಂಬರ್ 29, 2022. ಕಳೆದ ವರ್ಷ ಈ ದಿನ ಅದ್ಭುತ ಪ್ರೀಮಿಯರ್ ಶೋ ನಡೆದ ನಂತರ ಕಾಂತಾರ ತಂಡ ಸಂತೋಷ್ ಥಿಯೇಟರ್‌ನ ಮೆಟ್ಟಿಲುಗಳ ಮೇಲೆ ಕುಳಿತಿತ್ತು. ಮುಂದೆ ಏನಾಗುತ್ತದೆ ಎಂಬುದು ತಿಳಿದಿರಲಿಲ್ಲ. ಆದರೆ, ನಾವೆಲ್ಲರೂ ತುಂಬು ಹೃದಯದಿಂದ ಸಿನಿಮಾ ಮಾಡಿದೆವು ಮತ್ತು ಅದನ್ನು ಜನರ ಮುಂದೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆಂಬ ಹೆಮ್ಮೆ ಇತ್ತು. ಪ್ರತೀ ತಂತ್ರಜ್ಞರು, ಕಲಾವಿದರು ಮತ್ತು ಸಿಬ್ಬಂದಿ ಸೇರಿ ಬಹಳ ಉತ್ಸಾಹ, ಪ್ರೀತಿ ಮತ್ತು ಶ್ರಮದಿಂದ ಮಾಡಿದ ಚಲನಚಿತ್ರವಿದು. ಮರುದಿನ, ಅಂದರೆ ಸೆ. 30. ನಮಗೆ ತಿಳಿದಿರುವಂತೆ ಈ ದಿನ ನಮ್ಮ ಮನದಲ್ಲಿ ಯಾವಾಗಲೂ ವಿಶೇಷವಾಗಿ ಉಳಿಯುತ್ತದೆ.
ಇದನ್ನೂ ಓದಿ: ಕಾವೇರಿ ಹೋರಾಟ: ಶಿವಣ್ಣನ ಸಾರಥ್ಯದಲ್ಲಿ ಕನ್ನಡ ಚಿತ್ರರಂಗದ ಬೆಂಬಲ.. ಫೋಟೋಗಳಲ್ಲಿ ನೋಡಿ
ಹೊಂಬಾಳೆ ಫಿಲ್ಮ್ಸ್ನ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಕಾಂತಾರ 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ಆದ್ರೆ ಸಂಪಾದಿಸಿದ್ದು 400 ಕೋಟಿ ರೂ.ಗೂ ಹೆಚ್ಚು. ಸ್ವತಃ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಈ ಚಿತ್ರದಲ್ಲಿ ಸಪ್ತಮಿ ಗೌಡ ಪ್ರಮುಖ ಪಾತ್ರ ವಹಿಸಿದ್ದರು. ಉಳಿದಂತೆ ಅಚ್ಯುತ್ ಕುಮಾರ್, ಕಿಶೋರ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ತೆರೆಕಂಡ ಈ ಸಿನಿಮಾ ಪ್ರೇಕ್ಷಕರ ಬೇಡಿಕೆ ಮೇರೆಗೆ ಕೇವಲ 20 ದಿನಗಳಲ್ಲಿ ಬಹುಭಾಷೆಗಳಿಗೆ ಡಬ್ ಆಗಿ ದೇಶಾದ್ಯಂತ ಸದ್ದು ಮಾಡಿತು.